Tuesday, December 27, 2022
Friday, December 2, 2022
Saturday, November 19, 2022
Monday, November 7, 2022
Thursday, October 20, 2022
ಪುರುಷೋತ್ತಮ ಬಿಳಿಮಲೆ - ತುಳುನಾಡಿನ ದೈವಗಳು -- ಒಂದು ಟಿಪ್ಪಣಿ/Purushottama Bilimale
ತುಳುನಾಡಿನ ದೈವಗಳು: ಒಂದು ಟಿಪ್ಪಣಿ:
ತುಳುನಾಡಿನ ದೈವಗಳನ್ನು ʼಹಿಂದೂ ಧರ್ಮದʼ ಚೌಕಟ್ಟಿಗೆ ಒಳಪಡಿಸುವ ಪ್ರಕ್ರಿಯೆ ಆರಂಭವಾಗಿ ಕೆಲವು ವರ್ಷಗಳೇ ಕಳೆದಿವೆ. ಈಗ ಅದಕ್ಕೆ ಮತ್ತಷ್ಟು ಚಾಲನೆ ದೊರಕಿದೆ. ʼಹಿಂದೂ ಧರ್ಮʼ ಎಂದರೇನು ಎಂಬುದನ್ನು ಯಾರೂ ಸರಿಯಾಗಿ ನಿರ್ವಚಿಸದೇ ಇರುವುದರಿಂದ ಅದರೊಳಕ್ಕೆ ಎಲ್ಲವನ್ನೂ ಸುಲಭವಾಗಿ ತುರುಕಲು ಸಾಧ್ಯವಾಗಿದೆ. ʼಹಿಂದೂವಾಗಿ ಸಾಯಲಾರೆ ʼಎಂದ ಅಂಬೇಡ್ಕರರನ್ನು ಕೂಡಾ ಇವತ್ತಿನ ಹಿಂದೂ ರಾಜಕಾರಣ ತನ್ನೊಳಗು ಮಾಡಿಕೊಂಡಿರುವಾಗ ತುಳುನಾಡಿನ ದೈವಗಳನ್ನು ಅದು ಬಿಡಲಾರದು.
ಬಹಳ ಪ್ರಾಚೀನ ಕಾಲದಲ್ಲಿ ತುಳುನಾಡಿಗೆ ವಲಸೆ ಬಂದು ನೆಲೆಯಾಗಿರುವ ತಳಸ್ತರದ ಸುಮಾರು ೩೨ ಸಮುದಾಯಗಳಿವೆ. ಇವರ ಒಟ್ಟು ಸಂಖ್ಯೆ ಸುಮಾರು ಎರಡು ಲಕ್ಷ ಇರಬಹುದು. ಆದಿ ದ್ರಾವಿಡ, ಅಜಿಲ, ನಲ್ಕೆ, ಮಾಯಿಲ, ಬಾಕುಡ, ಭೈರ, ಮೇರ, ಮುಗ್ಗೆರ್ಲು, ಮಲೆ ಕುಡಿಯ, ಬತ್ತಡ, ಪಾಣಾರ, ಮೊಗೇರ, ಪರವ, ಪಂಬದ, ಮೊದಲಾದ ಸಮುದಾಯಗಳು ಈ ಗುಂಪಿಗೆ ಸೇರುತ್ತವೆ. ಶ್ರೇಣೀಕೃತ ಸಮಾಜದ ತಳಭಾಗದಲ್ಲಿರುವ ಇವರಲ್ಲಿ ಕೆಲವರು ಭೂತಾರಾಧನೆಯ ಸಂದರ್ಭದಲ್ಲಿ ತಾವೇ ದೈವಗಳಾಗಿ, ತಾತ್ಕಾಲಿಕವಾಗಿ ನಿರ್ಮಿತವಾದ ಕಾಲ, ಸ್ಥಳ ಮತ್ತು ಸಮುದಾಯಗಳ ಒಗ್ಗೂಡುವಿಕೆಯ ಸಂದರ್ಭದಲ್ಲಿ ಜಾತಿ ಸಮಾಜದ ಶ್ರೇಣೀಕರಣದ ಮೇಲ್ತುದಿಗೆ ಚಲಿಸುತ್ತಾರೆ. ಆರಾಧನೆ ಮುಗಿದ ಮೇಲೆ ಮತ್ತೆ ಯಥಾಸ್ಥಿತಿ ಮುಂದುವರೆಯುತ್ತದೆ.
ತುಳುನಾಡಿನ ದೈವಾರಾಧನೆಯ ಕೇಂದ್ರದಲ್ಲಿರುವ ಸಾಂಸ್ಕೃತಿಕ ನಾಯಕರ ಸಂಖ್ಯೆಯು ಸಾವಿರಕ್ಕೂ ಮೀರಿದೆ ಎಂದು ವಿದ್ವಾಂಸರು ಹೇಳಿದ್ದಾರೆ. ಇದರಲ್ಲಿ ಬಬ್ಬರ್ಯ, ಆಲಿ ಮೊದಲಾದ ಮುಸ್ಲಿಮರೂ ಇದ್ದಾರೆ. ಮಂಜೇಶ್ವರದ ಉದ್ಯಾವರದಲ್ಲಿ ನಡೆಯುವ ಅರಸು ದೈವಗಳ ನೇಮದಲ್ಲಿ ಮುಸ್ಲಿಂ ಕುಟುಂಬಗಳು ಭಾಗವಹಿಸಲೇ ಬೇಕು. ಮುಸಲ್ಮಾನರಲ್ಲಿ ದೈವಾರಾಧನೆ ಇಲ್ಲ. ಹಿಂದೂ ದೇವರುಗಳಲ್ಲಿ ಮುಸಲ್ಮಾನರು ಇರುವುದು ಸಾಧ್ಯವಿಲ್ಲ. ಅಂಥ ದೈವಗಳನ್ನು ಪೂಜಿಸಲು ಬೇಕಾದ ಶಾಸ್ತ್ರೋಕ್ತ ಮಂತ್ರಗಳೂ ಇರಲಾರವು. ಆದರೆ ಭೂತಾರಾಧನೆಯಲ್ಲಿ ಇವೆರಡೂ ಸಾಧ್ಯವಾಗಿರುವುದೇ ನನ್ನಂಥವರಿಗೆ ಅದರಲ್ಲಿ ಕುತೂಹಲ ಹುಟ್ಟಲು ಕಾರಣ. ಈ ದೈವಗಳ ಕತೆಗಳನ್ನು ಪಾಡ್ದನಗಳು ನಿರೂಪಿಸುತ್ತವೆ. ಪಾಡ್ದನಗಳ ಲೋಕ ಅದ್ಭುತವಾಗಿದ್ದು ಕ್ಲಾಸಿಕಲ್ ಸಂಪ್ರದಾಯಕ್ಕಿಂತ ಭಿನ್ನವಾಗಿವೆ. ಉದಾಹರಣೆಗೆ, ಗುಳಿಗ ದೈವವು ತಾಯಿಯ ಬಲದ ಸಿರಿಮೊಲೆ ಒಡೆದು ಹೊರಬಂದು ಎಡದ ಮೊಲೆ ತಿಂದು ಕೈ ತಟ್ಟಿ ನಗುವುದನ್ನು ಗಮನಿಸಬೇಕು. ಪಾಡ್ದನಗಳ ಭಾಷೆ, ವಸ್ತು, ನಿರೂಪಣಾ ವಿಧಾನ ಇತ್ಯಾದಿಗಳ ಬಗ್ಗೆ ದೇಶ ವಿದೇಶಗಳ ವಿದ್ವಾಂಸರು ಸಾಕಷ್ಟು ಕೆಲಸ ಮಾಡಿದ್ದಾರೆ. ತುಳು ದೈವಗಳ ಕೆಲವು ವೈಶಿಷ್ಟ್ಯಗಳನ್ನು ಈ ಮುಂದಿನಂತೆ ಸಂಕ್ಷಿಪ್ತವಾಗಿ ಪಟ್ಟಿ ಮಾಡಬಹುದು-
1. ಪಾಡ್ದನಗಳಲ್ಲಿರುವ ದೈವದ ಕಥೆಗಳು ಬಹುಮಟ್ಟಿಗೆ ದುಃಖಾಂತವಾಗಿರುತ್ತವೆ. ಈ ವಿಷಯದಲ್ಲಿ ಅವು ನಮ್ಮ ಸಂಸ್ಕೃತ ಕಥನ ಪರಂಪರೆಗಿಂತ ತುಂಬಾ ಭಿನ್ನ. ಭೂತ ಕಟ್ಟುವ ಪರವನ ಹೆಂಡತಿ ಮಂಗಣೆಯ ಚೆಲುವಿಗೆ ಮರುಳಾಗಿ, ಅವಳನ್ನು ಪಡೆಯಲು ಅವಳ ಗಂಡನನ್ನೂ ಕೊಂದು, ತನ್ನ ಸರ್ವಸ್ವವನ್ನೂ ಕಳೆದುಕೊಂಡು, ಕೊನೆಗೆ ಮಂಗಣೆ ಬೆಂಕಿಗೆ ಹಾರಿದಾಗ ತಾನೂ ಬೆಂಕಿಗೆ ಹಾರಿ ಸತ್ತ ಬೊಟ್ಟುಪ್ಪಾಡಿ ಬಲ್ಲಾಳನ ಸಂಧಿಯು ನಾನು ಇದುವರೆಗೆ ಓದಿದ ಅತ್ಯುತ್ತಮ ದುರಂತ ಕಾವ್ಯಗಳಲ್ಲಿ ಒಂದು.
2. ಈ ಸಾಂಸ್ಕೃತಿಕ ನಾಯಕರು ದೈವಗಳಾಗಲು ಅವರ ಜಾತಿ ಅಥವಾ ಪೂರ್ವಜನ್ಮದ ಪುಣ್ಯ ವಿಶೇಷಗಳು ಕಾರಣವಾಗುವುದಿಲ್ಲ. ಆಲಿ, ಬಬ್ಬರ್ಯರು ಮುಸ್ಲಿಮರಾಗಿದ್ದರೆ, ಕಾಂತಾಬಾರೆ-ಬೂದಾಬಾರೆಯರು ಬಿಲ್ಲವ ವರ್ಗಕ್ಕೆ ಸೇರಿದವರು. ತನಿಯ ಕೊರಗ ಸಮುದಾಯಕ್ಕೆ ಸೇರಿದ ದೈವ.
3. ಹೆಚ್ಚಿನ ದೈವಗಳು ತಮ್ಮ ಮಧ್ಯವಯಸ್ಸಿನಲ್ಲಿ ಮಹತ್ ಸಾಧನೆ ಮಾಡಿ, ಇಲ್ಲವೇ ಸ್ಥಾಪಿತ ಮೌಲ್ಯಗಳಿಗೆ ಮುಖಾಮುಖಿಯಾಗಿ, ಸಾಯುತ್ತಾರೆ. ಕಾರ್ಕಳದಲ್ಲಿ ಗೊಮ್ಮಟನನ್ನು ಕೆತ್ತಿದ ಕಲ್ಕುಡನು ಅರಸನ ಕಾರಣದಿಂದ ತನ್ನ ಬಲದ ಕೈಯನ್ನೂ ಎಡದ ಕಾಲನ್ನೂ ಕಳಕೊಳ್ಳಬೇಕಾಗುತ್ತದೆ. ಅಣ್ಣನಿಗಾದ ಅನ್ಯಾಯವನ್ನು ತಂಗಿ ಕಲ್ಲುರ್ಟಿ ಪ್ರಶ್ನಿಸುತ್ತಾಳೆ. ಗಂಡಸರ ಅನ್ಯಾಯವನ್ನು ಪ್ರತಿಭಟಿಸಿದ ಸಿರಿಯು ಸತ್ತು ದೈವವಾಗುತ್ತಾಳೆ. ಬಳಜೇಯಿ ಮಾನಿಗದಲ್ಲಿ ಚೆನ್ನೆಮಣೆ ಆಟದಲ್ಲಿ ಮೋಸ ಮಾಡಿದ ಗಂಡನಿಗೆ ತವರು ಮನೆಯಲ್ಲಿದ್ದ ಮಾನಿಗಳು ಪೊರಕೆಗೆ ತನ್ನ ತಾಳಿ ಕಟ್ಟಿ ದಂಡಿಗೆಯಲ್ಲಿ ಕಳಿಸುತ್ತಾಳೆ.
4. ಕ್ಲಾಸಿಕಲ್ ಸಂಪ್ರದಾಯದಲ್ಲಿ ನಾಯಕರು ಅವರ ತಾಯಿಯ ಗರ್ಭದಲ್ಲಿರುವಾಗ ದೇವತೆಗಳು ಪುಷ್ಟವೃಷ್ಟಿ ಸುರಿಸುತ್ತಾರೆ. ಆದರೆ ಪಾಡ್ದನಗಳಲ್ಲಿ ಈ ಬಗೆಯ ವಿವರಗಳಿಲ್ಲ. ಈ ವೀರರ ತಾಯಂದಿರು ಗರ್ಭ ಧರಿಸುವಾಗ ಯಾವುದೇ ಶುಭ ಶಕುನಗಳು ಸಂಭವಿಸುವುದಿಲ್ಲ. ಅವರು ಕೇವಲ ಸಾಮಾನ್ಯರು.
5. ಈ ಸಾಂಸ್ಕೃತಿಕ ನಾಯಕರು ವೀರರಾಗಲು ಅವರು ಬೇರೊಂದು ದೈವದ ಅವತಾರವಾಗಿರುವುದು ಕಾರಣ ಅಲ್ಲ. ಅವರಿಗೆ ಯಾವುದೇ ಪೂರ್ವ ಜನ್ಮದ ಪುಣ್ಯ ವಿಶೇಷಗಳಿಲ್ಲ. ಈ ಜನ್ಮದಲ್ಲಿ ಅವರು ಸಾಧಿಸಿದ್ದೇ ಅಂತಿಮ. ಅವರ ಸಾಮಾಜಿಕ ಸ್ಥಾನಮಾನಗಳು (ಉದಾ: ಬ್ರಾಹ್ಮಣನಾಗಿರುವುದು, ಅರಸು ಕುಮಾರನಾಗಿರುವುದು) ಅವರ ವೀರತ್ವವನ್ನು ನಿರ್ಧರಿಸುವುದಿಲ್ಲ.
6. ದೈವಗಳಾಗಿರುವ ತುಳುನಾಡಿನ ಸಾಂಸ್ಕೃತಿಕ ನಾಯಕರು ಎಲ್ಲರಂತೆ ಜನಿಸಿ, ಬೆಳೆಯುತ್ತಾ ಬಗೆ ಬಗೆಯ ಒತ್ತಡಕ್ಕೆ ಒಳಗಾಗುತ್ತಾರೆ. ತಮ್ಮ ಪ್ರಾಮಾಣಿಕತೆ, ಬುದ್ಧಿಮತ್ತೆ, ಮತ್ತು ಸಾಹಸಗಳಿಂದ ಜನಾನುರಾಗಿಯಾಗಿರುವ ಅವರು ಸಮಾಜ ಒಡ್ಡುವ ಸವಾಲುಗಳಿಗೆ ದಿಟ್ಟವಾಗಿ ಉತ್ತರಿಸುತ್ತಾರೆ ಮತ್ತು ಅದೇ ಕಾರಣಕ್ಕೆ ಸತ್ತು ದೈವಗಳಾಗುತ್ತಾರೆ.
7. ಸಾಂಪ್ರದಾಯಿಕ ಕ್ಲಾಸಿಕಲ್ ಕಥನಗಳು ನೇರವಾಗಿಯೋ ಪರೋಕ್ಷವಾಗಿಯೂ ವರ್ಣಾಶ್ರಮ ಧರ್ಮದ ಮತ್ತು ಪ್ರಭುತ್ವದ ಪರವಾಗಿಯೇ ಇರುತ್ತವೆ. ಆದರೆ ತುಳುನಾಡಿನ ದೈವ ಕಥನಗಳು ಜಾತಿ ಸಮಾಜದ ಒಳಗಿನ ಸಂಘರ್ಷಗಳನ್ನು ಬಹಿರಂಗಕ್ಕೆ ತರುತ್ತವೆ. ಕನ್ನಲ್ಲಾಯ ದೈವವು ಜಾತಿ ಕೇಳಿ ನೀರುಕೊಟ್ಟವಳನ್ನೇ ಮಾಯಮಾಡುತ್ತದೆ. ಕೋಡ್ದಬ್ಬು ಪಾಡ್ದನವು ದಲಿತ ಹುಡುಗನೊಬ್ಬ ತನ್ನ ಸಾಮರ್ಥ್ಯದಿಂದ ವಿದ್ಯಾವಂತನಾದಾಗ ಉಳಿದವರು ಅವನ ವಿರುದ್ಧ ಹೇಗೆ ಸಂಚು ಮಾಡುತ್ತಾರೆ ಎಂಬುದನ್ನು ಮನೋಜ್ಞವಾಗಿ ವಿವರಿಸುತ್ತದೆ.
ಈ ಬಗೆಯ ಕಥನಗಳು ಭಾರತೀಯ ಸಂಸ್ಕೃತಿಯ ಸಶಕ್ತವಾದ ಒಂದು ಭಾಗವೇ ಹೌದು. ಅವನ್ನು ಬದಲಿಸಿ ಇನ್ನಾವುದೋ ಒಂದರ ಭಾಗ ಮಾಡುವುದರಿಂದ ಯಾರಿಗೂ ಹೆಚ್ಚು ಪ್ರಯೋಜನ ಇಲ್ಲ.
Sunday, October 2, 2022
Tuesday, July 19, 2022
Wednesday, June 29, 2022
ಪ್ರಭಾಕರ ಕಾರಂತ - ಬಾಲವನದಲ್ಲಿ ಕಾರಂತರು/Shivarama karanth
ಆಪ್ತ ಬರಹಗಳ ಬಾಲವನದಲ್ಲಿ ಭಾರ್ಗವ
ಡಾ.ಶಿವರಾಮ ಕಾರಂತರ ಕುರಿತು ಅನೇಕ ಆಪ್ತ ಬರಹಗಳನ್ನೊಳಗೊಂಡ "ಬಾಲವನದಲ್ಲಿ ಭಾರ್ಗವ" ಒಂದು ಅಪರೂಪದ ಪುಸ್ತಕ. ಕಾರಂತರ ಬದುಕು ಬರಹದ ಕುರಿತು ಆಗಲೇ ಅನೇಕಾನೇಕ ಪುಸ್ತಕಗಳು ಬಂದಿದ್ದು ಹೊಸತಾಗಿ ಪ್ರಕಟಿಸುವವರಿಗೆ ಸವಾಲುಗಳು ಇದ್ದೇ ಇರುತ್ತದೆ. ಏನು ಬರೆದರೂ ಆಗಲೇ ಎಲ್ಲೋ ಪ್ರಕಟವಾಗಿರುವ ಸಂಗತಿ ಆಗಿರಬಹುದು. ಆದರೆ ಈ ಸವಾಲನ್ನು ಈ ನವ ಕೃತಿ ಮೀರಿ ನಿಂತಿದೆ. ಕಾರಂತರ ಜೀವನ ಸಮೃದ್ಧಿ ಒಂದು ಕಡಲಿದ್ದಂತೆ. ಅಲ್ಲಿ ಮೊಗೆದಷ್ಟೂ ಮುತ್ತು ರತ್ನಗಳಿವೆ. ಅದು ಈ ಕೃತಿಯ ಮೂಲಕ ಮಗದೊಮ್ಮೆ ಸ್ಪಷ್ಟವಾಗಿದೆ.
ಶಿಕ್ಷಕ ಅನಂತಕೃಷ್ಣ ಹೆಬ್ಬಾರ್ ಜ್ಞಾನಪೀಠ ಬಂದ ಕಾರಂತರನ್ನು ತಮ್ಮ ಶಾಲೆಗೆ ಕರೆಸಿ ಗೌರವಿಸಲೆಂದು ಅವರ ಸಾಲಿಗ್ರಾಮ ಮನೆಗೆ ಹೋಗುತ್ತಾರೆ. ಬಾಗಿಲು ತೆರೆದ ಕಾರಂತರು 'ಏನು ಬಂದಿರಿ ಎಂದು ಹೊರಗೆ ನಿಲ್ಲಿಸಿಯೇ ಪ್ರಶ್ನಿಸುತ್ತಾರೆ. ವಿವರ ಹೇಳುತ್ತಿದ್ದಂತೆ "ನಾನು ಬರುವುದಿಲ್ಲ" ಎಂದು ಹೇಳಿ ಬಾಗಿಲು ಹಾಕಿಕೊಳ್ಳುತ್ತಾರೆ. ಹೆಬ್ಬಾರರಿಗೆ ಪೆಚ್ಚೆನಿಸಿ ಅವರು ಹಿರಿಯಡ್ಕ ಗೋಪಾಲರಾಯರ ಮನೆಗೆ ಹೋಗಿ ತಮಗಾದ ಅನುಭವ ಹಂಚಿಕೊಳ್ಳುತ್ತಾರೆ. ಕಡೆಗೆ ಗೋಪಾಲರಾಯರೂ ಹೆಬ್ಬಾರರನ್ನು ಕರೆದುಕೊಂಡು ಕಾರಂತರ ಮನೆಗೆ ಬರುತ್ತಾರೆ. ಮತ್ತೆ ಬಾಗಿಲು ತೆರೆದ ಕಾರಂತರು ಇಬ್ಬರನ್ನು ನೋಡಿ ಆಗಲೇ ಆಗೋಲ್ಲ ಅಂದಾಗಿದೆ. ಪುನಃ ಜೊತೆಗೂಡಿ ಬಂದಿದ್ದೇಕೆ ಎಂದು ಪ್ರಶ್ನಿಸುತ್ತಾರೆ. ರಾಯರಾಗ ಏಕಾಗಿ ಬರಲ್ಲ ಎಂಬ ಉತ್ತರಕ್ಕಾಗಿ ಬಂದೆವು ಎನ್ನುತ್ತಾರೆ. "ನಾನು ಜ್ಞಾನಪೀಠದಲ್ಲಿ ಕೊಟ್ಟದ್ದನ್ನು ಪೆಟ್ರೋಲ್ ಸುಟ್ಟು ಖಾಲಿ ಮಾಡುವೆ ಎಂದು ಹರಕೆ ಹೊತ್ತಿಲ್ಲ" ಎಂದು ಗರಂ ಆಗಿಯೇ ಉತ್ತರಿಸುತ್ತಾರೆ. ಹಿಂದಿನ ದಿನ ಇದೇ ಉದ್ದೇಶದಿಂದ ಕರೆದಿದ್ದ ಯಾವುದೋ ಶಾಲೆಯವರು ಕಾರಿನ ಪೆಟ್ರೋಲ್ ಹಣವನ್ನೂ ಕೊಡದೇ ಕಳಿಸಿರುತ್ತಾರೆ. ಅಂತೂ ಹೆಬ್ಬಾರರು ಕಾರಂತರನ್ನು ಒಪ್ಪಿಸಿಯೇ ಹೊರಡುತ್ತಾರೆ.
ಅದು 1970. ಕಾರಂತರಿನ್ನೂ ಪುತ್ತೂರಲ್ಲಿ ಇದ್ದ ಕಾಲ. ಗಿರಿಜ ಎಂಬ ಶಿಕ್ಷಕಿ ಆಗ ಕಾರಂತರ ಲಿಪಿಕಾರ್ತಿಯಾಗಿ ಕೆಲಸ ಮಾಡುತ್ತಿರುತ್ತಾರೆ. ಒಂದು ದಿನ ಆಕೆ ಕೊಂಚ ತಡವಾಗಿ ಕಾರಂತರ ಬಳಿ ಬಂದಿರುತ್ತಾರೆ. ಕಾರಣ ಕೇಳಿದಾಗ ಹೊಸ ಕಥೆಯೊಂದು ಬಿಚ್ಚಿಕೊಳ್ಳುತ್ತದೆ. ಅಂದು ಗಿರಿಜಾ ಸಹೋದ್ಯೋಗಿ ಭವಾನಿಯ ಮದುವೆ ಕಟೀಲಿನಲ್ಲಿ . ಅವಳನ್ನು ಕಳಿಸಿ ಬರುವುದು ತಡವಾಯಿತು ಎಂದು ಗಿರಿಜಳ ವಿವರಣೆ. "ಅರೇ ನೀನು ಮದುವೆಗೆ ಹೋಗಿಲ್ಲ. ಇನ್ನು ಕಳಿಸುವುದೇನು. ದಿಬ್ಬಣ ಅದೇ ಹೋಗುತ್ತಿತ್ತು" ಅನ್ನುತ್ತಾರೆ ಕಾರಂತರು. "ದಿಬ್ಬಣ ಗಿಬ್ಬಣ ಇಲ್ಲ. ಅವಳೊಬ್ಬಳೇ ನಮ್ಮ ಮನೆಯಲ್ಲಿ ಉಳಿದು ಬಸ್ ಹತ್ತಿದ್ದು. ಅವರ ಮದುವೆಗೆ ಮನೆಯವರ ಒಪ್ಪಿಗೆ ಇಲ್ಲ. ಆಕೆ ಹವ್ಯಕರ ಹುಡುಗಿ. ಬ್ರಾಹ್ಮಣರಲ್ಲೇ ಹವ್ಯಕೇತರನನ್ನು ಪ್ರೀತಿಸಿದಳು. ಮನೆಯವರು ವಿರೋಧಿಸಿ ಕಡೆಗೆ ಆಕೆಯನ್ನು ನಿನ್ನೆ ರಾತ್ರಿ ಮನೆಯಿಂದ ಹೊರಹಾಕಿದರು. ನಮ್ಮ ಮನೆಯಲ್ಲಿದ್ದು ಬೆಳಿಗ್ಗೆ ಬಸ್ ಹತ್ತಿದ್ದಾಳೆ. ಇಲ್ಲಿಗೆ ಬರೋದಿಲ್ಲದಿದ್ದರೆ ನಾನಾದರೂ ಜೊತೆಗಿರುತ್ತಿದ್ದೆ" ಎಂಬ ಗಿರಿಜಳ ಮಾತು ಕಾರಂತರನ್ನು ಕುಳಿತಲ್ಲಿಂದ ಎದ್ದು ನಿಲ್ಲಿಸುತ್ತದೆ. ಏಳು ಎಂದು ಅವಳನ್ನೂ ಎಬ್ಬಿಸಿ ಹೊರಬಂದು ಡ್ರೈವರ್ ಕರೆದು ಕಾರು ಹೊರಡಿಸುತ್ತಾರೆ. ಸೀದಾ ಸಂಜೀವ ಶೆಟ್ಟರ ಜವಳಿ ಅಂಗಡಿ ತಲುಪಿ ಒಂದು ರೇಷ್ಮೆ ಸೀರೆ ಕಟ್ಟಿಸಿ ಕಾರು ಕಟೀಲಿಗೆ ಹೋಗಲಿ ಎನ್ನುತ್ತಾರೆ. ಗಿರಿಜೆ ಜೊತೆ ಕಟೀಲು ದೇವಸ್ಥಾನ ತಲುಪಿ ಮಂಟಪದಲ್ಲಿ ಭವಾನಿ ದಂಪತಿಗಳಿಗೆ ಉಡುಗರೆ ಕೊಟ್ಟು ಅಮ್ಮ ಅಪ್ಪ ಬರಲಿಲ್ಲ ಎಂದು ಯೋಚಿಸಬೇಡ. ಎಲ್ಲಾ ಸರಿಯಾಗುತ್ತೆ ಎಂದು ಹಾರೈಸಿ ಧೈರ್ಯ ತುಂಬುತ್ತಾರೆ. ಕಡೆಗೆ ಮದುವೆ ಊಟ ಉಂಟು ವಾಪಸ್ಸು ಬರುತ್ತಾರೆ. ಅನಿಸಿದ್ದನ್ನ ಆ ಕ್ಷಣ ಜಾರಿ ತರುವ ಕರುಣಾಮಯಿ ಕಾರಂತರವರು.
ಕೊಡಗು ಜಿಲ್ಲೆಯ ಚಟ್ಟಳ್ಳಿ ಶಾಲೆಯಲ್ಲಿ ಪಿ.ಜಿ.ಅಂಬೇಕಲ್ ಕಾರ್ಯ ನಿರ್ವಹಿಸುತ್ತಿದ್ದಾಗ ತಮ್ಮ ಶಾಲಾ ವಾರ್ಷಿಕೋತ್ಸವಕ್ಕೆ ಕಾರಂತರನ್ನು ಕರೆಸಲು ಶಾಲೆಯವರ ಮನ ಒಲಿಸಿ ಕೇಳಲು ಕಾರಂತರ ಮನೆಗೆ ಬರುತ್ತಾರೆ. " ಶಾಲಾ ವಾರ್ಷಿಕೋತ್ಸವಕ್ಕೆ ಬಾಷಣ ಕೇಳಲು ಯಾರು ಬರುತ್ತಾರೆ. ಮಕ್ಕಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮಿಸಲು ಬಂದವರಿಗೆ ಮಾತು ಬೇಡದ ಹಿಂಸೆ ನಾನು ಬರುವುದಿಲ್ಲ" ಎಂದು ಖಂಡಿತವಾಗಿ ಹೇಳಿದ ಕಾರಂತರಿಗೆ ಏನು ಉತ್ತರಿಸುವುದು ಎಂದು ತಿಳಿಯದ ಅಂಬೇಕಲ್ ಪೆಚ್ಚು ಮುಖ ಮಾಡಿಕೊಳ್ಳುತ್ತಾರೆ. "ಆಗಲಿ ನಿಮ್ಮ ಶಾಲೆಗೆ ಯಾವಾಗಲಾದರೂ ಬಂದರಾಯಿತಲ್ಲ. ನಾನೇ ತಿಳಿಸಿ ಬರುವೆ" ಎಂಬ ಕಾರಂತರ ಮಾತು ತಮ್ಮನ್ನು ಸಮಾಧಾನಿಸಲು ಹೇಳಿದ್ದು ಅಂದುಕೊಂಡ ಅಂಬೇಕಲ್ ಅಲ್ಲಿಂದ ನಿರ್ಗಮಿಸುತ್ತಾರೆ. "ನಾನು ಮಾರ್ಚ್ 1ರಂದು ಕುಶಾಲನಗರಕ್ಕೆ ಬರುತ್ತಿರುವೆ. ನಿಮ್ಮ ಶಾಲೆಗೆ ಬೆಳಿಗ್ಗೆ 9.30ಕ್ಕೆ ಬರುವೆ. ನನಗಾಗಿ ನೀವು ಯಾವ ಏರ್ಪಾಟನ್ನೂ ಮಾಡಬೇಕಿಲ್ಲ "ಎಂಬ ಕಾರಂತರ ಕಾರ್ಡು ವಾರದ ಮೊದಲೇ ಅಂಬೇಕಲ್ ಗೆ ಬಂದೇ ಬರುತ್ತದೆ. ಹೇಳಿದ ದಿನ ಐದು ನಿಮಿಷ ಮೊದಲೇ ಕಾರಂತರ ಕಾರು ಶಾಲೆಗೆ ಬಂದಿರುತ್ತದೆ. ತಮ್ಮ ಅಮೆರಿಕ ಪ್ರವಾಸ ಅನುಭವವನ್ನ ಮಕ್ಕಳಿಗೆ ಸ್ವಾರಸ್ಯಕರವಾಗಿ ಹೇಳಿ ಸಂಭ್ರಮದಿಂದ ಮಕ್ಕಳೊಂದಿಗೆ ನಲಿದು ಕಾರಂತರು ನಿರ್ಗಮಿಸುವಾಗ "ನಿಮ್ಮ ಹರಕೆ ತೀರಿಸಿ ಆಯಿತಲ್ಲ" ಎಂದು ಚಟಾಕಿ ಹಾರಿಸುತ್ತಾರೆ.
ಕಾರಂತರು ನೂರಾರು ನಾಟಕಗಳನ್ನು ಮಕ್ಕಳಿಗಾಗಿ ರಚಿಸಿ ಅದನ್ನು ನಿರ್ದೇಶನ ಮಾಡಿ ಮಕ್ಕಳಿಂದ ಮತ್ತು ಶಿಕ್ಷಕರಿಂದ ಶಾಲಾ ರಂಗಮಂದಿರದಲ್ಲಿ ಪ್ರದರ್ಶಿಸಿದವರು. ಕಡಬ ಶಾಲೆಯಲ್ಲಿ ಅವರ ಚೋಮನದುಡಿಯ ಪೂರ್ವ ನಾಟಕ ರೂಪ ಡೋಮಿಂಗೋ ಹೀಗೇ ಪ್ರದರ್ಶಿತವಾಗುತ್ತದೆ. ಮುಖ್ಯೋಪಾಧ್ಯಾಯ ಮುಂಕಡೆಯವರದ್ದು ಮತಾಂತರ ಮಾಡುವ ಪಾದ್ರಿಯೊಬ್ಬರ ಪಾತ್ರ. ದಲಿತ ಮಕ್ಕಳ ಮತಾಂತರದ ಹುನ್ನಾರ ಈ ನಾಟಕದಲ್ಲಿ ಅನಾವರಣ ಆಗಿರುತ್ತದೆ. ಚರ್ಚ್ ಗೆ ಅದು ಮುಜುಗರ ತರುತ್ತದೆ. ಅವರು ಪ್ರಭಾವ ಬೀರಿ ಮುಂಕಡೆಯವರನ್ನು ಬೆಳ್ತಂಗಡಿಗೆ ವರ್ಗಾಯಿಸುತ್ತಾರೆ. ಕಾರಂತರ ಗಮನಕ್ಕೆ ಅದು ಬಂದಕೂಡಲೇ ಅವರು ಹಠ ಹಿಡಿದು ವರ್ಗಾವಣೆ ರದ್ದು ಮಾಡಿಸುತ್ತಾರೆ. ಚರ್ಚ್ ಈ ಮನುಷ್ಯನ ಸಹವಾಸ ಬೇಡ ಎಂದು ತಣ್ಣಗಾಗುತ್ತದೆ.
ಮುಂಕಾಡೆಯವರಿಗೆ ಮಾಸಿಕ ಹದಿನೈದು ರೂ ಸಂಬಳ ಇದ್ದಾಗಲೇ ಕಾರಂತರ ಬಾಲವನಕ್ಕವರು ಇಪ್ಪತ್ತೈದು ರೂ ದೇಣಿಗೆ ನೀಡಿರುತ್ತಾರೆ. ಇಷ್ಟು ದೊಡ್ಡ ಮೊತ್ತ ಬಡ ಶಾಲಾ ಶಿಕ್ಷಕರಿಂದ ಬಂದಿದ್ದು ಕಾರಂತರ ಉತ್ಸಾಹ ಹೆಚ್ಚಿಸಿದ್ದು ಆಗಿನಿಂದಲೂ ಕಾರಂತರಿಗೆ ಮುಂಕಾಡೆ ಮೇಲೆ ಅಭಿಮಾನ ಮೂಡಿರುತ್ತದೆ.
ಮುಂದೆ ಮುಂಕಾಡೆಯವರ ಮಗ ರಘುನಾಥ ರಾವ್ ಪುತ್ತೂರಿನಲ್ಲಿ ಮುದ್ರಣ ಯಂತ್ರ ಸ್ಥಾಪಿಸಿದಾಗ ಆಗಲೂ ಅದರ ಅನುಭವವಿದ್ದ ಕಾರಂತರು "ಇದು ಕಬ್ಬಿಣ ಒಟ್ಟು ಮಾಡುವ ಕೆಲಸ" ಎಂದಿರುತ್ತಾರೆ.
ಪುತ್ತೂರು ಕರ್ನಾಟಕ ಸಂಘ ಕಾರಂತರ ಪುಸ್ತಕ ಒಂದನ್ನು ರಘುನಾಥ ರಾಯರ ಮುದ್ರಣಾಲಯದಲ್ಲೇ ಅಚ್ಚು ಮಾಡಿಸಿದಾಗ ಕಾರಂತರು ಮುದ್ರಣ ಮೆಚ್ಚಿ ಕಾರ್ಡು ಬರೆದೆರುತ್ತಾರೆ. ಅದು ತಮ್ಮ ಪಾಲಿನ ಅತಿ ದೊಡ್ಡ ಪ್ರಶಸ್ತಿ ಎಂದು ರಘುನಾಥ ರಾಯರು ನಂಬಿದ್ದಾರೆ.
ಅದು 1984. ಚೋಮನದುಡಿಯನ್ನು ನಾಟಕ ಮಾಡಲು ಮೋಹನ್ ಸೋನ ನಿರ್ಧರಿಸಿ ಸಾಕಷ್ಟು ಪೂರ್ವ ತಯಾರಿ ಮಾಡಿ ರಿಹರ್ಸಲ್ ಸಹ ಆರಂಭಿಸಿ ಅನುಮತಿಗಾಗಿ ಕಾರಂತರಿಗೆ ಪತ್ರ ಹಾಕುತ್ತಾರೆ. "ಇಲ್ಲ, ನನ್ನ ಅನುಮತಿ" ಎಂಬ ಕಾರ್ಡ್ ಮರು ಟಪಾಲಿನಲ್ಲೇ ಬರುತ್ತದೆ. ಕಂಗಾಲಾದ ತಂಡ ಕಾರಂತರನ್ನು ಕಾಣಲು ಸಾಲಿಗ್ರಾಮಕ್ಕೆ ಬರುತ್ತದೆ. "ನೋಡಿ ಬಿ.ವಿ.ಕಾರಂತರು ಮಾಡಿದರು, ಕೆ.ವಿ.ಸುಬ್ಬಣ್ಣ ಮಾಡಿದರು. ಮತ್ತೂ ಯಾರು ಯಾರೋ ಮಾಡಿದರು. ಒಂದೂ ತೃಪ್ತಿಕರವಾಗಲಿಲ್ಲ. ನೀವು ಬೇರೆ ಯಾರದ್ದಾದರೂ ನಾಟಕ ಮಾಡಿಕೊಳ್ಳಿ" ಎನ್ನುತ್ತಾರೆ. ಸಾಕಷ್ಟು ಸಿದ್ಧತೆ ಮಾಡಿದ್ದ ತಂಡ ನಿರಾಶರಾಗಿ ಪೆಚ್ಚು ಮೋರೆ ಮಾಡಿಕೊಂಡಾಗ "ಆಗಲಿ ನೀವೂ ಹುಗಿದು ಬಿಡಿ ಚೋಮನನ್ನ" ಎಂದು ಅಂತೂ ಸಮ್ಮತಿ ನೀಡುತ್ತಾರೆ.
ಆಮೇಲೆ ರಿಹರ್ಸಲ್ ನೋಡಿ ಬರಲು ಕೃತಿಯ ತುಳು ಭಾಷಾಂತರಕಾರ ಜತ್ತಪ್ಪ ರೈರವರಿಗೆ ಪತ್ರ ಬರೆಯುತ್ತಾರೆ. ರೈಯವರು ರಿಹರ್ಸಲ್ ನೋಡಿ ಮುಂದೆ ನಾಟಕವನ್ನೂ ನೋಡಿ ತುಂಬಾ ಸಂಭ್ರಮ ಪಡುತ್ತಾರೆ. ದೊಡ್ಡ ಬಯಲಿನಲ್ಲಿ ಗುಡಿಸಲು ಸೇರಿದಂತೆ ವಿವಿಧ ರಂಗ ಚಮತ್ಕಾರ ತುಂಬಿದ್ದ ನಾಟಕ ದಿವ್ಯವಾಗಿ ನಿಮಗೆ ತೃಪ್ತಿ ತರುವಂತೆ ನಡೆಯಿತು ಎಂಬ ಪತ್ರ ಕಾರಂತರಿಗೆ ರೈಯವರು ಬರೆಯುತ್ತಾರೆ. ಮೂರ್ತಿ ದೇರಾಜೆ ಇದನ್ನು ದಾಖಲಿಸುತ್ತಲೇ ಕಾರಂತರ ತಾಳಮದ್ದಲೆಯ ಸ್ವಾರಸ್ಯಕರ ಪ್ರಸಂಗ ಹೇಳಿದ್ದಾರೆ. "ತಾಳಮದ್ದಲೆ ಕೇಳುವುದಕ್ಕಿಂತ ಕೋರ್ಟಿನಲ್ಲಿ ವಕೀಲರ ವಾದ ಕೇಳುವುದು ಒಳ್ಳೆಯದು " ಎಂದವರು ಕಾರಂತರು. ಒಮ್ಮೆ ಅವರೇ ಮದ್ರಾಸಿನ ಆಕಾಶವಾಣಿಗೆ ತಾಳಮದ್ದಲೆಯ ಕಾರ್ಯಕ್ರಮ ನೀಡಲು ತಮ್ಮ ತಂಡ ಕರೆದೊಯ್ಯುತ್ತಾರೆ. ಆದರೆ ಇವರ ಬಳಿ ಇದ್ದ ದೊಡ್ಡ ಹಾರ್ಮೋನಿಯಂ ಪೆಟ್ಟಿಗೆ ಒಳಗೊಯ್ಯಲು ಸೆಕ್ಯುರಿಟಿ ಒಪ್ಪುವುದಿಲ್ಲ. "ನಿಮ್ಮ ಅಧಿಕಾರಿಯನ್ನು ಕರೆ" ಎಂದ ಕಾರಂತರು ಅಧಿಕಾರಿ ಕರೆಸಿದಾಗಲೂ ಅವರೂ ದೊಡ್ಡ ಪೆಟ್ಟಿಗೆ ಒಳಗೆ ತರಲಾಗದು ಎಂದೇ ಹೇಳುತ್ತಾರೆ. "ನಮ್ಮ ಪ್ರಯಾಣ ವೆಚ್ಚ ಮತ್ತು ಭತ್ಯೆ ಕೊಡಿ, ನಾವೆಲ್ಲಾ ಇಲ್ಲಿಂದಲೇ ನಿರ್ಗಮಿಸುತ್ತೇವೆ " ಎಂದು ಪಟ್ಟು ಹಿಡಿದ ಕಾರಂತರು ಪ್ರವೇಶ ಗಿಟ್ಟಿಸುತ್ತಾರೆ!. ಒಳಗೆ ನಿಂತೇ ರಿಕಾರ್ಡಿಂಗ್ ಮಾಡಲು ಹೇಳಿದಾಗಲೂ ಕಾರಂತರು ಪ್ರತಿಭಟಿಸುತ್ತಾರೆ. ಅನುಮತಿ ಗಿಟ್ಟಿಸುತ್ತಾರೆ. ಇಂತಹವರೊಬ್ಬರು ಜೊತೆಗಿದ್ದರೆ ಕಲಾವಿದರಿಗೆ ಗೌರವ ದೊರಕುತ್ತದೆ ಎಂಬ ದೇರಾಜೆ ಮಾತು ಸತ್ಯ.
ಚಿತ್ರಕಲಾ ಶಿಕ್ಷಕರ ರಾಜ್ಯ ಸಮ್ಮೇಳನಕ್ಕೆ ಆಹ್ವಾನಿಸಲು ಗೋಪಾಡ್ಕರ್ ನೇತೃತ್ವದ ತಂಡ ಕಾರಂತರ ಭೇಟಿಗೆ ಸಾಲಿಗ್ರಾಮ ಮನೆಗೆ ಬರುತ್ತದೆ. ಕರೆಯುತ್ತಾ 600 ಶಿಕ್ಷಕರು ಸೇರುತ್ತಾರೆ ಎಂಬ ಮಾತು ಕಾರಂತರ ಕೋಪಕ್ಕೆ ಕಾರಣವಾಗುತ್ತದೆ. "ಅಲ್ಲಿ ಬಂದು ಸೃಜನಶೀಲತೆ ಕುರಿತು ಹೇಳಬೇಕಾ. ಧರ್ಮಸ್ಥಳದ ಊಟಕ್ಕೆ 25ಸಾವಿರ ಜನ ಸೇರುತ್ತಾರೆ. ಅಲ್ಲಿ ಭಾಷಣ ಮಾಡಿದರಾಗದೇ. ಶಿಕ್ಷಕರನ್ನು ಉದ್ದೇಶಿಸಿ ನಾನು ಏಕೆ ಮಾತನಾಡಬೇಕು. ಯಾರು ಬದಲಾದರೂ ಶಿಕ್ಷಕರು ಬದಲಾಗುವುದಿಲ್ಲ. ನಾನೂ 40ವರ್ಷದಿಂದ ಭಾಷಣ ಮಾಡಿ ನೋಡಿದ್ದೇನೆ. ಒಬ್ಬರನ್ನು ಬಿಟ್ಟು ಯಾರೂ ಬದಲಾಗಿಲ್ಲ" ಎನ್ನುತ್ತಾರೆ ಕಾರಂತರು. ಬಂದವರಿಗೆ ಕಾರಂತರಲ್ಲಿ ಸಾಲಿಗೆ ಇತ್ತಾಗಿ ಅದ್ಯಾರು ಬದಲಾದವರು ಎಂದು ಕೇಳುತ್ತಾರೆ. "ನಾನೇ ಬದಲಾದವ, ಶಿಕ್ಷಕರಿಗೆ ಭಾಷಣ ಮಾಡಿ ಪ್ರಯೋಜನವಿಲ್ಲ ಎಂದು ಕಂಡುಕೊಂಡು ಬದಲಾದವ ನಾನು, ಶಿಕ್ಷಕರು ಕಲಿಸುವವರು, ಕಲಿಯುವವರಲ್ಲ. ದುರಹಂಕಾರ ಅವರಿಗೆ ತಾವು ತಿದ್ದುವವರೆಂದು" ಎಂದು ಸೇರಿಸುತ್ತಾರೆ. ಬಾಯಿ ಬಿಡದೇ ತಣ್ಣಗಾಗಿದ್ದ ತಂಡ ನೋಡಿ ಆಯ್ತು ಬರಬೇಕಲ್ವಾ -ಅದೂ ಆಗಲಿ ಎಂಬ ಸಮ್ಮತಿ ನೀಡುತ್ತಾರೆ ಕಾರಂತರು.
ಕಾರಂತರ ಆತ್ಮೀಯ ಬಳಗದಲ್ಲಿದ್ದವರು ಡಾ.ವಿವೇಕ ರೈಯವರ ತಂದೆ. ಅವರಿಗೆ ಗಂಡುಮಗು ಹುಟ್ಟಿದಾಗ ಕಾರಂತರ ಬಳಿ ಅವನಿಗೊಂದು ಹೆಸರು ಸೂಚಿಸಲು ಕೋರುತ್ತಾರೆ. ಎತ್ತಿದ ಬಾಯಿಗೆ ಕಾರಂತರು ವಿವೇಕ ಅನ್ನುತ್ತಾರೆ. ಆಗ ವಿವೇಕಾನಂದ ತುಂಬಾ ಚಾಲ್ತಿಯ ಹೆಸರು. ವಿವೇಕಾನಂದ ಎಂದಾ ಎಂದು ರೈ ಪ್ರಶ್ನಿಸುತ್ತಾರೆ. "ಆನಂದ ಗೀನಂದ ಏನೂ ಬೇಡ, ವಿವೇಕ ಇದ್ದರೆ ಬರುತ್ತದೆ. ವಿವೇಕ ಅಷ್ಟೆ ಸಾಕು" ಎಂಬ ಕಾರಂತರ ಮಾತಿನಂತೆ ರೈಗಳು ಮಗನ ನಾಮಕರಣ ಮಾಡುತ್ತಾರೆ. ಮಂಗಳೂರು ವಿಶ್ವವಿದ್ಯಾಲಯದ ಕಾರಂತರ ಪೀಠ ರಚನೆಯಾದಾಗ ವಿವೇಕ ರೈ ಅದನ್ನು ಮಾದರಿಯಾಗಿ ರೂಪಿಸುತ್ತಾರೆ. ಅವರಲ್ಲಿ ಅತೀವ ಪ್ರೀತಿ ಇಟ್ಟಿದ್ದ ಕಾರಂತರು ಕರೆದಾಗಲೆಲ್ಲಾ ವಿಶ್ವವಿದ್ಯಾಲಯದಲ್ಲಿ ಹೋಗಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ. ಹೀಗೇ ಅನೇಕ ಅಪೂರ್ವ ಸಂಗತಿಗಳನ್ನು ನಾಡಿನ ಪ್ರಮುಖ ಸಾಹಿತಿಗಳು ಒಡನಾಡಿಗಳು ಬಿಚ್ಚಿಟ್ಟ ಕೃತಿ ಈ ಬಾಲವನದಲ್ಲಿ ಭಾರ್ಗವ.
ಸುಬ್ರಾಯ ಚೊಕ್ಕಾಡಿ, ಜಯಂತ್ ಕಾಯ್ಕಿಣಿ, ಮಾವಿನಕುಳಿ, ತೋಳ್ಪಾಡಿ, ವೈದೇಹಿ, ಬಿಳಿಮಲೆ, ಬೊಳುವಾರು ಮೊಹಮ್ಮದ್ ಕುಂಞಿ, ಚಿನ್ನಪ್ಪ ಗೌಡ, ಕಾರಂತರ ಮಕ್ಕಳು, ಅವರ ಜೊತೆ ಕೆಲಸ ನಿರ್ವಹಿಸಿದವರು, ಕಲಾವಿದರು, ಜನಪ್ರತಿನಿದಿಗಳು, ಅಧಿಕಾರಿಗಳು ಮುಂತಾದ ಮಹನೀಯರ ಬರಹಗಳಿಂದ 'ಬಾಲವನದಲ್ಲಿ ಭಾರ್ಗವ 'ಮಿಂಚಿನ ಪ್ರಕಾಶ ಮೂಡಿಸುತ್ತಿದೆ. ಸಂಪಾದಿಸಿದ ಡಾ.ಸುಂದರ ಕೇನಾಜೆಯವರ ಶ್ರಮ ಸಾರ್ಥಕ ಎನ್ನುವುದರಲ್ಲಿ ಎರಡು ಮಾತಿಲ್ಲ.
*ಪ್ರಭಾಕರ ಕಾರಂತ್*
ಹೊಸಕೊಪ್ಪ
577126.ಕೊಪ್ಪ ತಾಲ್ಲೂಕು.
Tuesday, June 28, 2022
Monday, June 13, 2022
Sunday, June 12, 2022
Monday, June 6, 2022
Friday, May 20, 2022
Friday, May 6, 2022
Sunday, April 10, 2022
Friday, April 8, 2022
ಅನಂದ್ ಮಾಲೂರ್- ಕೆ. ಸತ್ಯನಾರಾಯಣ ಅವರ - ಕೋವಿಡ್ ದಿನಚರಿ "/ k Satyanarayana
'ಕೋವಿಡ್' ಪ್ರಪಂಚವನ್ನು ಸಾಕಷ್ಟು ಬದಲಿಸಿದೆ. ಇದರ ಪ್ರಭಾವ ನೂರಾರು ಕವಿತೆ,ಕತೆ, ಕಾದಂಬರಿ, ನಾಟಕ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ಇದಕ್ಕೆಲ್ಲಾ ಒಂದು ತಯಾರಿ ಬೇಕು. ಆದರೆ 'ಕೋವಿಡ್ ದಿನಚರಿ' ಇದಕ್ಕೊಂದು ಅಪವಾದ. ಅಂದಂದಿನ ಸಗಟು ದಿನದ ವಸ್ತುಸ್ಥತಿಯನ್ನು ದಾಖಲಿಸಿರುವುದರಿಂದ ಈ ಕೃತಿಗೊಂದು ಮಹತ್ವದ ತಾವಿದೆ.
ಕನ್ನಡದ ಸೃಜನಶೀಲ ಹಾಗೂ ಪ್ರಯೋಗಶೀಲ ಲೇಖಕ ಕೆ.ಸತ್ಯನಾರಾಯಣ ಅವರು ಈ 'ಕೋವಿಡ್ ದಿನಚರಿ'ಯನ್ನು ಬರೆದು, ಪ್ರಕಟಿಸಿದ್ದಾರೆ. ದಿನಚರಿ ಎಂದರೆ ದೈನಂದಿನ ವಿವರಗಳು ಎಂಬುದು ಸಾಮಾನ್ಯಾರ್ಥ. ತಿನ್ನುವುದು,ನಿದ್ರಿಸುವುದು, ಹರಟುವುದು ಇದಿಷ್ಟೇ ದಿನಚರಿ ಎಂದರೆ ಇಲ್ಲನ 'ಕೋವಿಡ್ ದಿನಚರಿ'ಗೆ ಅಂತ ಮಹತ್ವ ಸಿಗಲಾರದು.
ಕೃತಿ ಮುಖ್ಯವಾಗಿ ೩ ಅಂಶಗಳ ಆಧಾರದ ಮೇಲೆ ಬೆಳೆದಿದೆ.೧. ನಿರೂಪಕರ ವ್ಯಕ್ತಿಗತ ಜೀವನ. ೨. ನಿರೂಪಕರ ಕುಟುಂಬ ಜೀವನ. ೩ . ಸಮಾಜ/ಲೋಕ ಜೀವನ.
'..... ದಿನಚರಿ' ಈ ಮೂರು ನೆಲೆಗಳಲ್ಲೂ ಸಂಚರಿಸುತ್ತದೆ. ಕೋವಿಡ್ ಸಾವುಗಳು ನಿರೂಪಕರನ್ನು ಅಧೀರರನ್ನಾಗಿಸಿದರೆ; ಅವರ ೯೩ರ ಇಳಿವಯಸ್ಸಿನ ಸೋದರತ್ತೆಯ ಜೀವನೋತ್ಸಾಹ ಅವರಲ್ಲಿ ಲವವವಿಕೆಯ ಕಂಪನಗಳನ್ನು ಹುಟ್ಟಿಸುತ್ತದೆ. ಸಾವುಗಳು ಎಲ್ಲರಿಗೂ ದುಃಖವನ್ನೆ ಕೊಡಬೇಕೆಂದಿಲ್ಲ ; ಅದು ಆಸ್ಪತ್ರೆಗಳಿಗೆ, ಔಷಧಿ ಮಾಫಿಯಾಗೆ ಲಾಭದಾಯಕವೂ ಹೌದು!
ಲೋಕಸ್ನೇಹಿಯಾದ ಮನುಷ್ಯನಿಗೆ ಏಕಾಂತ ಜೀವನದ ಕಾಲಾಪಾನಿ ಈ ಕೋವಿಡ್ ಕಾಲ. ಮನೆಯೇ ಒಂದು ಕರಿನೀರಿನ ಶಿಕ್ಷೆಯ ತಾವು. ಪೋನಿನ ಮೇಲೆ ಎಷ್ಟು ಮಾತು ಸಾಧ್ಯ?
ನಮ್ಮ ಸಾಮಾಜಿಕ ಸಂಬಂಧಗಳು ಮುಕ್ಕಾಲು ವೀಸ ಪಾಲು ವ್ಯಾವಹಾರಿಕ ಸಂಬಂಧಗಳೆನ್ನುವುದನ್ನು ನಿರೂಪಕರು ಘಟನೆಗಳ ಸಾಕ್ಷ್ಯದಿಂದ ಸಾದರಪಡಿಸುತ್ತಾರೆ. ನಮ್ಮ ಮಾತಿನ ಕೃತ್ರಿಮತೆ, ಸಹ ಮಾನವನ ಸಂಕಟ ನಮಗೆ ಕೇವಲ ಸಮಾಚಾರವಷ್ಟೇ!
ನಿರ್ಮಮತೆ,ಲೋಕಪ್ರೀತಿರಾಹಿತ್ಯತೆ ಈ 'ಕೋವಿಡ್ ಕಾಲ' ದ ಅತ್ತ್ಯುತ್ತಮ ಉತ್ಪನ್ನವಾಗಿದೆ.
ನಿರೂಪಕರು ನಗರದಲ್ಲಿ(ಬೆಂಗಳೂರು) ವಾಸ ಇದ್ದದ್ದರಿಂದ ಸುತ್ತಲಿನ ವಾತಾವರಣವನ್ನು ಈ ಅವಧಿಯಲ್ಲಿ ಚೆನ್ನಾಗಿ ಕಂಡಿರಿಸಿದ್ದಾರೆ. ನಿರ್ಜನ ರಸ್ತೆಗಳು, ಉದ್ಯಾನಗಳು,ಶಾಲಾ ಕಾಲೇಜುಗಳ ಆವರಣ,ಪರಿಚಿತರಿದ್ದರೂ ಅಪರಿಚಿತರಂತೆ ಕಣ್ಣು ತಪ್ಪಿಸಿ ನಡೆಯುವವರು, ಬೀದಿಯ ನಾಯಿ, ಮನೆ ಮುಂದಿನ ಗಿಡಗಳು, ಹೊತ್ತು ಕಳೆಯಲು ಸಿನಿಮಾ, ಸಂಗೀತದ ಆಶ್ರಯ, ವಿದೇಶದಲ್ಲಿರುವ ಮಕ್ಕಳೊಂದಿಗೆ ಫೋನಿನ ಮೇಲೆ ಮಾತು ( ಅಲ್ಲೂ ಕೋವಿಡ್ ಬಗ್ಗೆಯೆ ಮಾತು ಎಂಬುದು ಬಿಡಿಸಿ ಹೇಳಬೇಕಿಲ್ಲ!).
ಮನುಷ್ಯನ ಔದಾರ್ಯ, ಸಣ್ಣತನ, ತ್ಯಾಗ,ಅವಕಾಶವಾದಿತನ, ಪ್ರೀತಿ, ದ್ವೇಷ ಈ ಎಲ್ಲ ಮಾನುಷ ವ್ಯಾಪಾರಗಳು ಈ 'ಕೋವಿಡ್ ದಿನಚರಿ'ಯಲ್ಲಿ ಎಂಟ್ರಿಯಾಗಿವೆ.
ವಿಷಯದ ಹರಹು ಲೋಕಲ್ ಇಂದ ಗ್ಲೋಬಲ್ ತನಕ ಚಾಚಿಕೊಂಡಿದೆ. ಆಟ,ಪಾಠ, ರಾಜಕೀಯ, ಸಿನಿಮಾ,ರೋಗ,ಸಾವು,ವಲಸೆ,ಸಾಹಿತ್ಯ, ಸಂಗೀತ, ಕುಟುಂಬ,ವ್ಯಾಪಾರ, ಭ್ರಷ್ಟಾಚಾರ,ಧಾರ್ಮಿಕ ಸಾಮರಸ್ಯ,ಹಸಿವು ಹೀಗೆ ಇದು ಬೆಳೆಯುತ್ತಾ ಹೋಗುತ್ತದೆ.
ಕನ್ನಡದಲ್ಲಿ ಈ ಕೃತಿ ಒಂದು ಪ್ರಯೋಗಶೀಲ ಸೃಷ್ಟಿ.ಲೇಖಕರು ಇದನ್ನು ಕಾದಂಬರಿ ಜಾತಿಗೆ ಸೇರಿಸಿದ್ದಾರೆ.ವಸ್ತು ಹಾಗೂ ವೈವಿಧ್ಯ ಇದಕ್ಕೆ ಕಾರಣವಿರಬಹುದು.
ಘಟನೆಯೊಂದು ಮಾಗಿ ಅದು ಕಾಲಾಂತರದಲ್ಲಿ ಕಲಾ ಅಭಿವ್ಯಕ್ತಿ ಪಡೆಯುವುದು ಒಂದು ಮಾದರಿಯಾದರೆ, ಅಂದಂದಿನ ಘಟನೆಗಳು ಘಟಿತ ಅವಧಿಯಲ್ಲಿಯೇ ಅಭಿವ್ಯಕ್ತಿ ಪಡೆದಿರುವ ಈ 'ಕೋವಿಡ್ ದಿನಚರಿ' ಕಲಾ ಅಭಿವ್ಯಕ್ತಿಗೊಂದು ಹೊಸ ಮಾದರಿಯನ್ನು ನೀಡಿದೆ ಎನಿಸುತ್ತದೆ.
ಆನಂದ್ ಗೋಪಾಲ್.
ಮಾಲೂರು
0 Comments
Thursday, April 7, 2022
Sunday, April 3, 2022
Friday, April 1, 2022
Tuesday, March 29, 2022
Monday, February 21, 2022
Subscribe to:
Posts (Atom)