Wednesday, June 29, 2022
ಪ್ರಭಾಕರ ಕಾರಂತ - ಬಾಲವನದಲ್ಲಿ ಕಾರಂತರು/Shivarama karanth
ಆಪ್ತ ಬರಹಗಳ ಬಾಲವನದಲ್ಲಿ ಭಾರ್ಗವ
ಡಾ.ಶಿವರಾಮ ಕಾರಂತರ ಕುರಿತು ಅನೇಕ ಆಪ್ತ ಬರಹಗಳನ್ನೊಳಗೊಂಡ "ಬಾಲವನದಲ್ಲಿ ಭಾರ್ಗವ" ಒಂದು ಅಪರೂಪದ ಪುಸ್ತಕ. ಕಾರಂತರ ಬದುಕು ಬರಹದ ಕುರಿತು ಆಗಲೇ ಅನೇಕಾನೇಕ ಪುಸ್ತಕಗಳು ಬಂದಿದ್ದು ಹೊಸತಾಗಿ ಪ್ರಕಟಿಸುವವರಿಗೆ ಸವಾಲುಗಳು ಇದ್ದೇ ಇರುತ್ತದೆ. ಏನು ಬರೆದರೂ ಆಗಲೇ ಎಲ್ಲೋ ಪ್ರಕಟವಾಗಿರುವ ಸಂಗತಿ ಆಗಿರಬಹುದು. ಆದರೆ ಈ ಸವಾಲನ್ನು ಈ ನವ ಕೃತಿ ಮೀರಿ ನಿಂತಿದೆ. ಕಾರಂತರ ಜೀವನ ಸಮೃದ್ಧಿ ಒಂದು ಕಡಲಿದ್ದಂತೆ. ಅಲ್ಲಿ ಮೊಗೆದಷ್ಟೂ ಮುತ್ತು ರತ್ನಗಳಿವೆ. ಅದು ಈ ಕೃತಿಯ ಮೂಲಕ ಮಗದೊಮ್ಮೆ ಸ್ಪಷ್ಟವಾಗಿದೆ.
ಶಿಕ್ಷಕ ಅನಂತಕೃಷ್ಣ ಹೆಬ್ಬಾರ್ ಜ್ಞಾನಪೀಠ ಬಂದ ಕಾರಂತರನ್ನು ತಮ್ಮ ಶಾಲೆಗೆ ಕರೆಸಿ ಗೌರವಿಸಲೆಂದು ಅವರ ಸಾಲಿಗ್ರಾಮ ಮನೆಗೆ ಹೋಗುತ್ತಾರೆ. ಬಾಗಿಲು ತೆರೆದ ಕಾರಂತರು 'ಏನು ಬಂದಿರಿ ಎಂದು ಹೊರಗೆ ನಿಲ್ಲಿಸಿಯೇ ಪ್ರಶ್ನಿಸುತ್ತಾರೆ. ವಿವರ ಹೇಳುತ್ತಿದ್ದಂತೆ "ನಾನು ಬರುವುದಿಲ್ಲ" ಎಂದು ಹೇಳಿ ಬಾಗಿಲು ಹಾಕಿಕೊಳ್ಳುತ್ತಾರೆ. ಹೆಬ್ಬಾರರಿಗೆ ಪೆಚ್ಚೆನಿಸಿ ಅವರು ಹಿರಿಯಡ್ಕ ಗೋಪಾಲರಾಯರ ಮನೆಗೆ ಹೋಗಿ ತಮಗಾದ ಅನುಭವ ಹಂಚಿಕೊಳ್ಳುತ್ತಾರೆ. ಕಡೆಗೆ ಗೋಪಾಲರಾಯರೂ ಹೆಬ್ಬಾರರನ್ನು ಕರೆದುಕೊಂಡು ಕಾರಂತರ ಮನೆಗೆ ಬರುತ್ತಾರೆ. ಮತ್ತೆ ಬಾಗಿಲು ತೆರೆದ ಕಾರಂತರು ಇಬ್ಬರನ್ನು ನೋಡಿ ಆಗಲೇ ಆಗೋಲ್ಲ ಅಂದಾಗಿದೆ. ಪುನಃ ಜೊತೆಗೂಡಿ ಬಂದಿದ್ದೇಕೆ ಎಂದು ಪ್ರಶ್ನಿಸುತ್ತಾರೆ. ರಾಯರಾಗ ಏಕಾಗಿ ಬರಲ್ಲ ಎಂಬ ಉತ್ತರಕ್ಕಾಗಿ ಬಂದೆವು ಎನ್ನುತ್ತಾರೆ. "ನಾನು ಜ್ಞಾನಪೀಠದಲ್ಲಿ ಕೊಟ್ಟದ್ದನ್ನು ಪೆಟ್ರೋಲ್ ಸುಟ್ಟು ಖಾಲಿ ಮಾಡುವೆ ಎಂದು ಹರಕೆ ಹೊತ್ತಿಲ್ಲ" ಎಂದು ಗರಂ ಆಗಿಯೇ ಉತ್ತರಿಸುತ್ತಾರೆ. ಹಿಂದಿನ ದಿನ ಇದೇ ಉದ್ದೇಶದಿಂದ ಕರೆದಿದ್ದ ಯಾವುದೋ ಶಾಲೆಯವರು ಕಾರಿನ ಪೆಟ್ರೋಲ್ ಹಣವನ್ನೂ ಕೊಡದೇ ಕಳಿಸಿರುತ್ತಾರೆ. ಅಂತೂ ಹೆಬ್ಬಾರರು ಕಾರಂತರನ್ನು ಒಪ್ಪಿಸಿಯೇ ಹೊರಡುತ್ತಾರೆ.
ಅದು 1970. ಕಾರಂತರಿನ್ನೂ ಪುತ್ತೂರಲ್ಲಿ ಇದ್ದ ಕಾಲ. ಗಿರಿಜ ಎಂಬ ಶಿಕ್ಷಕಿ ಆಗ ಕಾರಂತರ ಲಿಪಿಕಾರ್ತಿಯಾಗಿ ಕೆಲಸ ಮಾಡುತ್ತಿರುತ್ತಾರೆ. ಒಂದು ದಿನ ಆಕೆ ಕೊಂಚ ತಡವಾಗಿ ಕಾರಂತರ ಬಳಿ ಬಂದಿರುತ್ತಾರೆ. ಕಾರಣ ಕೇಳಿದಾಗ ಹೊಸ ಕಥೆಯೊಂದು ಬಿಚ್ಚಿಕೊಳ್ಳುತ್ತದೆ. ಅಂದು ಗಿರಿಜಾ ಸಹೋದ್ಯೋಗಿ ಭವಾನಿಯ ಮದುವೆ ಕಟೀಲಿನಲ್ಲಿ . ಅವಳನ್ನು ಕಳಿಸಿ ಬರುವುದು ತಡವಾಯಿತು ಎಂದು ಗಿರಿಜಳ ವಿವರಣೆ. "ಅರೇ ನೀನು ಮದುವೆಗೆ ಹೋಗಿಲ್ಲ. ಇನ್ನು ಕಳಿಸುವುದೇನು. ದಿಬ್ಬಣ ಅದೇ ಹೋಗುತ್ತಿತ್ತು" ಅನ್ನುತ್ತಾರೆ ಕಾರಂತರು. "ದಿಬ್ಬಣ ಗಿಬ್ಬಣ ಇಲ್ಲ. ಅವಳೊಬ್ಬಳೇ ನಮ್ಮ ಮನೆಯಲ್ಲಿ ಉಳಿದು ಬಸ್ ಹತ್ತಿದ್ದು. ಅವರ ಮದುವೆಗೆ ಮನೆಯವರ ಒಪ್ಪಿಗೆ ಇಲ್ಲ. ಆಕೆ ಹವ್ಯಕರ ಹುಡುಗಿ. ಬ್ರಾಹ್ಮಣರಲ್ಲೇ ಹವ್ಯಕೇತರನನ್ನು ಪ್ರೀತಿಸಿದಳು. ಮನೆಯವರು ವಿರೋಧಿಸಿ ಕಡೆಗೆ ಆಕೆಯನ್ನು ನಿನ್ನೆ ರಾತ್ರಿ ಮನೆಯಿಂದ ಹೊರಹಾಕಿದರು. ನಮ್ಮ ಮನೆಯಲ್ಲಿದ್ದು ಬೆಳಿಗ್ಗೆ ಬಸ್ ಹತ್ತಿದ್ದಾಳೆ. ಇಲ್ಲಿಗೆ ಬರೋದಿಲ್ಲದಿದ್ದರೆ ನಾನಾದರೂ ಜೊತೆಗಿರುತ್ತಿದ್ದೆ" ಎಂಬ ಗಿರಿಜಳ ಮಾತು ಕಾರಂತರನ್ನು ಕುಳಿತಲ್ಲಿಂದ ಎದ್ದು ನಿಲ್ಲಿಸುತ್ತದೆ. ಏಳು ಎಂದು ಅವಳನ್ನೂ ಎಬ್ಬಿಸಿ ಹೊರಬಂದು ಡ್ರೈವರ್ ಕರೆದು ಕಾರು ಹೊರಡಿಸುತ್ತಾರೆ. ಸೀದಾ ಸಂಜೀವ ಶೆಟ್ಟರ ಜವಳಿ ಅಂಗಡಿ ತಲುಪಿ ಒಂದು ರೇಷ್ಮೆ ಸೀರೆ ಕಟ್ಟಿಸಿ ಕಾರು ಕಟೀಲಿಗೆ ಹೋಗಲಿ ಎನ್ನುತ್ತಾರೆ. ಗಿರಿಜೆ ಜೊತೆ ಕಟೀಲು ದೇವಸ್ಥಾನ ತಲುಪಿ ಮಂಟಪದಲ್ಲಿ ಭವಾನಿ ದಂಪತಿಗಳಿಗೆ ಉಡುಗರೆ ಕೊಟ್ಟು ಅಮ್ಮ ಅಪ್ಪ ಬರಲಿಲ್ಲ ಎಂದು ಯೋಚಿಸಬೇಡ. ಎಲ್ಲಾ ಸರಿಯಾಗುತ್ತೆ ಎಂದು ಹಾರೈಸಿ ಧೈರ್ಯ ತುಂಬುತ್ತಾರೆ. ಕಡೆಗೆ ಮದುವೆ ಊಟ ಉಂಟು ವಾಪಸ್ಸು ಬರುತ್ತಾರೆ. ಅನಿಸಿದ್ದನ್ನ ಆ ಕ್ಷಣ ಜಾರಿ ತರುವ ಕರುಣಾಮಯಿ ಕಾರಂತರವರು.
ಕೊಡಗು ಜಿಲ್ಲೆಯ ಚಟ್ಟಳ್ಳಿ ಶಾಲೆಯಲ್ಲಿ ಪಿ.ಜಿ.ಅಂಬೇಕಲ್ ಕಾರ್ಯ ನಿರ್ವಹಿಸುತ್ತಿದ್ದಾಗ ತಮ್ಮ ಶಾಲಾ ವಾರ್ಷಿಕೋತ್ಸವಕ್ಕೆ ಕಾರಂತರನ್ನು ಕರೆಸಲು ಶಾಲೆಯವರ ಮನ ಒಲಿಸಿ ಕೇಳಲು ಕಾರಂತರ ಮನೆಗೆ ಬರುತ್ತಾರೆ. " ಶಾಲಾ ವಾರ್ಷಿಕೋತ್ಸವಕ್ಕೆ ಬಾಷಣ ಕೇಳಲು ಯಾರು ಬರುತ್ತಾರೆ. ಮಕ್ಕಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮಿಸಲು ಬಂದವರಿಗೆ ಮಾತು ಬೇಡದ ಹಿಂಸೆ ನಾನು ಬರುವುದಿಲ್ಲ" ಎಂದು ಖಂಡಿತವಾಗಿ ಹೇಳಿದ ಕಾರಂತರಿಗೆ ಏನು ಉತ್ತರಿಸುವುದು ಎಂದು ತಿಳಿಯದ ಅಂಬೇಕಲ್ ಪೆಚ್ಚು ಮುಖ ಮಾಡಿಕೊಳ್ಳುತ್ತಾರೆ. "ಆಗಲಿ ನಿಮ್ಮ ಶಾಲೆಗೆ ಯಾವಾಗಲಾದರೂ ಬಂದರಾಯಿತಲ್ಲ. ನಾನೇ ತಿಳಿಸಿ ಬರುವೆ" ಎಂಬ ಕಾರಂತರ ಮಾತು ತಮ್ಮನ್ನು ಸಮಾಧಾನಿಸಲು ಹೇಳಿದ್ದು ಅಂದುಕೊಂಡ ಅಂಬೇಕಲ್ ಅಲ್ಲಿಂದ ನಿರ್ಗಮಿಸುತ್ತಾರೆ. "ನಾನು ಮಾರ್ಚ್ 1ರಂದು ಕುಶಾಲನಗರಕ್ಕೆ ಬರುತ್ತಿರುವೆ. ನಿಮ್ಮ ಶಾಲೆಗೆ ಬೆಳಿಗ್ಗೆ 9.30ಕ್ಕೆ ಬರುವೆ. ನನಗಾಗಿ ನೀವು ಯಾವ ಏರ್ಪಾಟನ್ನೂ ಮಾಡಬೇಕಿಲ್ಲ "ಎಂಬ ಕಾರಂತರ ಕಾರ್ಡು ವಾರದ ಮೊದಲೇ ಅಂಬೇಕಲ್ ಗೆ ಬಂದೇ ಬರುತ್ತದೆ. ಹೇಳಿದ ದಿನ ಐದು ನಿಮಿಷ ಮೊದಲೇ ಕಾರಂತರ ಕಾರು ಶಾಲೆಗೆ ಬಂದಿರುತ್ತದೆ. ತಮ್ಮ ಅಮೆರಿಕ ಪ್ರವಾಸ ಅನುಭವವನ್ನ ಮಕ್ಕಳಿಗೆ ಸ್ವಾರಸ್ಯಕರವಾಗಿ ಹೇಳಿ ಸಂಭ್ರಮದಿಂದ ಮಕ್ಕಳೊಂದಿಗೆ ನಲಿದು ಕಾರಂತರು ನಿರ್ಗಮಿಸುವಾಗ "ನಿಮ್ಮ ಹರಕೆ ತೀರಿಸಿ ಆಯಿತಲ್ಲ" ಎಂದು ಚಟಾಕಿ ಹಾರಿಸುತ್ತಾರೆ.
ಕಾರಂತರು ನೂರಾರು ನಾಟಕಗಳನ್ನು ಮಕ್ಕಳಿಗಾಗಿ ರಚಿಸಿ ಅದನ್ನು ನಿರ್ದೇಶನ ಮಾಡಿ ಮಕ್ಕಳಿಂದ ಮತ್ತು ಶಿಕ್ಷಕರಿಂದ ಶಾಲಾ ರಂಗಮಂದಿರದಲ್ಲಿ ಪ್ರದರ್ಶಿಸಿದವರು. ಕಡಬ ಶಾಲೆಯಲ್ಲಿ ಅವರ ಚೋಮನದುಡಿಯ ಪೂರ್ವ ನಾಟಕ ರೂಪ ಡೋಮಿಂಗೋ ಹೀಗೇ ಪ್ರದರ್ಶಿತವಾಗುತ್ತದೆ. ಮುಖ್ಯೋಪಾಧ್ಯಾಯ ಮುಂಕಡೆಯವರದ್ದು ಮತಾಂತರ ಮಾಡುವ ಪಾದ್ರಿಯೊಬ್ಬರ ಪಾತ್ರ. ದಲಿತ ಮಕ್ಕಳ ಮತಾಂತರದ ಹುನ್ನಾರ ಈ ನಾಟಕದಲ್ಲಿ ಅನಾವರಣ ಆಗಿರುತ್ತದೆ. ಚರ್ಚ್ ಗೆ ಅದು ಮುಜುಗರ ತರುತ್ತದೆ. ಅವರು ಪ್ರಭಾವ ಬೀರಿ ಮುಂಕಡೆಯವರನ್ನು ಬೆಳ್ತಂಗಡಿಗೆ ವರ್ಗಾಯಿಸುತ್ತಾರೆ. ಕಾರಂತರ ಗಮನಕ್ಕೆ ಅದು ಬಂದಕೂಡಲೇ ಅವರು ಹಠ ಹಿಡಿದು ವರ್ಗಾವಣೆ ರದ್ದು ಮಾಡಿಸುತ್ತಾರೆ. ಚರ್ಚ್ ಈ ಮನುಷ್ಯನ ಸಹವಾಸ ಬೇಡ ಎಂದು ತಣ್ಣಗಾಗುತ್ತದೆ.
ಮುಂಕಾಡೆಯವರಿಗೆ ಮಾಸಿಕ ಹದಿನೈದು ರೂ ಸಂಬಳ ಇದ್ದಾಗಲೇ ಕಾರಂತರ ಬಾಲವನಕ್ಕವರು ಇಪ್ಪತ್ತೈದು ರೂ ದೇಣಿಗೆ ನೀಡಿರುತ್ತಾರೆ. ಇಷ್ಟು ದೊಡ್ಡ ಮೊತ್ತ ಬಡ ಶಾಲಾ ಶಿಕ್ಷಕರಿಂದ ಬಂದಿದ್ದು ಕಾರಂತರ ಉತ್ಸಾಹ ಹೆಚ್ಚಿಸಿದ್ದು ಆಗಿನಿಂದಲೂ ಕಾರಂತರಿಗೆ ಮುಂಕಾಡೆ ಮೇಲೆ ಅಭಿಮಾನ ಮೂಡಿರುತ್ತದೆ.
ಮುಂದೆ ಮುಂಕಾಡೆಯವರ ಮಗ ರಘುನಾಥ ರಾವ್ ಪುತ್ತೂರಿನಲ್ಲಿ ಮುದ್ರಣ ಯಂತ್ರ ಸ್ಥಾಪಿಸಿದಾಗ ಆಗಲೂ ಅದರ ಅನುಭವವಿದ್ದ ಕಾರಂತರು "ಇದು ಕಬ್ಬಿಣ ಒಟ್ಟು ಮಾಡುವ ಕೆಲಸ" ಎಂದಿರುತ್ತಾರೆ.
ಪುತ್ತೂರು ಕರ್ನಾಟಕ ಸಂಘ ಕಾರಂತರ ಪುಸ್ತಕ ಒಂದನ್ನು ರಘುನಾಥ ರಾಯರ ಮುದ್ರಣಾಲಯದಲ್ಲೇ ಅಚ್ಚು ಮಾಡಿಸಿದಾಗ ಕಾರಂತರು ಮುದ್ರಣ ಮೆಚ್ಚಿ ಕಾರ್ಡು ಬರೆದೆರುತ್ತಾರೆ. ಅದು ತಮ್ಮ ಪಾಲಿನ ಅತಿ ದೊಡ್ಡ ಪ್ರಶಸ್ತಿ ಎಂದು ರಘುನಾಥ ರಾಯರು ನಂಬಿದ್ದಾರೆ.
ಅದು 1984. ಚೋಮನದುಡಿಯನ್ನು ನಾಟಕ ಮಾಡಲು ಮೋಹನ್ ಸೋನ ನಿರ್ಧರಿಸಿ ಸಾಕಷ್ಟು ಪೂರ್ವ ತಯಾರಿ ಮಾಡಿ ರಿಹರ್ಸಲ್ ಸಹ ಆರಂಭಿಸಿ ಅನುಮತಿಗಾಗಿ ಕಾರಂತರಿಗೆ ಪತ್ರ ಹಾಕುತ್ತಾರೆ. "ಇಲ್ಲ, ನನ್ನ ಅನುಮತಿ" ಎಂಬ ಕಾರ್ಡ್ ಮರು ಟಪಾಲಿನಲ್ಲೇ ಬರುತ್ತದೆ. ಕಂಗಾಲಾದ ತಂಡ ಕಾರಂತರನ್ನು ಕಾಣಲು ಸಾಲಿಗ್ರಾಮಕ್ಕೆ ಬರುತ್ತದೆ. "ನೋಡಿ ಬಿ.ವಿ.ಕಾರಂತರು ಮಾಡಿದರು, ಕೆ.ವಿ.ಸುಬ್ಬಣ್ಣ ಮಾಡಿದರು. ಮತ್ತೂ ಯಾರು ಯಾರೋ ಮಾಡಿದರು. ಒಂದೂ ತೃಪ್ತಿಕರವಾಗಲಿಲ್ಲ. ನೀವು ಬೇರೆ ಯಾರದ್ದಾದರೂ ನಾಟಕ ಮಾಡಿಕೊಳ್ಳಿ" ಎನ್ನುತ್ತಾರೆ. ಸಾಕಷ್ಟು ಸಿದ್ಧತೆ ಮಾಡಿದ್ದ ತಂಡ ನಿರಾಶರಾಗಿ ಪೆಚ್ಚು ಮೋರೆ ಮಾಡಿಕೊಂಡಾಗ "ಆಗಲಿ ನೀವೂ ಹುಗಿದು ಬಿಡಿ ಚೋಮನನ್ನ" ಎಂದು ಅಂತೂ ಸಮ್ಮತಿ ನೀಡುತ್ತಾರೆ.
ಆಮೇಲೆ ರಿಹರ್ಸಲ್ ನೋಡಿ ಬರಲು ಕೃತಿಯ ತುಳು ಭಾಷಾಂತರಕಾರ ಜತ್ತಪ್ಪ ರೈರವರಿಗೆ ಪತ್ರ ಬರೆಯುತ್ತಾರೆ. ರೈಯವರು ರಿಹರ್ಸಲ್ ನೋಡಿ ಮುಂದೆ ನಾಟಕವನ್ನೂ ನೋಡಿ ತುಂಬಾ ಸಂಭ್ರಮ ಪಡುತ್ತಾರೆ. ದೊಡ್ಡ ಬಯಲಿನಲ್ಲಿ ಗುಡಿಸಲು ಸೇರಿದಂತೆ ವಿವಿಧ ರಂಗ ಚಮತ್ಕಾರ ತುಂಬಿದ್ದ ನಾಟಕ ದಿವ್ಯವಾಗಿ ನಿಮಗೆ ತೃಪ್ತಿ ತರುವಂತೆ ನಡೆಯಿತು ಎಂಬ ಪತ್ರ ಕಾರಂತರಿಗೆ ರೈಯವರು ಬರೆಯುತ್ತಾರೆ. ಮೂರ್ತಿ ದೇರಾಜೆ ಇದನ್ನು ದಾಖಲಿಸುತ್ತಲೇ ಕಾರಂತರ ತಾಳಮದ್ದಲೆಯ ಸ್ವಾರಸ್ಯಕರ ಪ್ರಸಂಗ ಹೇಳಿದ್ದಾರೆ. "ತಾಳಮದ್ದಲೆ ಕೇಳುವುದಕ್ಕಿಂತ ಕೋರ್ಟಿನಲ್ಲಿ ವಕೀಲರ ವಾದ ಕೇಳುವುದು ಒಳ್ಳೆಯದು " ಎಂದವರು ಕಾರಂತರು. ಒಮ್ಮೆ ಅವರೇ ಮದ್ರಾಸಿನ ಆಕಾಶವಾಣಿಗೆ ತಾಳಮದ್ದಲೆಯ ಕಾರ್ಯಕ್ರಮ ನೀಡಲು ತಮ್ಮ ತಂಡ ಕರೆದೊಯ್ಯುತ್ತಾರೆ. ಆದರೆ ಇವರ ಬಳಿ ಇದ್ದ ದೊಡ್ಡ ಹಾರ್ಮೋನಿಯಂ ಪೆಟ್ಟಿಗೆ ಒಳಗೊಯ್ಯಲು ಸೆಕ್ಯುರಿಟಿ ಒಪ್ಪುವುದಿಲ್ಲ. "ನಿಮ್ಮ ಅಧಿಕಾರಿಯನ್ನು ಕರೆ" ಎಂದ ಕಾರಂತರು ಅಧಿಕಾರಿ ಕರೆಸಿದಾಗಲೂ ಅವರೂ ದೊಡ್ಡ ಪೆಟ್ಟಿಗೆ ಒಳಗೆ ತರಲಾಗದು ಎಂದೇ ಹೇಳುತ್ತಾರೆ. "ನಮ್ಮ ಪ್ರಯಾಣ ವೆಚ್ಚ ಮತ್ತು ಭತ್ಯೆ ಕೊಡಿ, ನಾವೆಲ್ಲಾ ಇಲ್ಲಿಂದಲೇ ನಿರ್ಗಮಿಸುತ್ತೇವೆ " ಎಂದು ಪಟ್ಟು ಹಿಡಿದ ಕಾರಂತರು ಪ್ರವೇಶ ಗಿಟ್ಟಿಸುತ್ತಾರೆ!. ಒಳಗೆ ನಿಂತೇ ರಿಕಾರ್ಡಿಂಗ್ ಮಾಡಲು ಹೇಳಿದಾಗಲೂ ಕಾರಂತರು ಪ್ರತಿಭಟಿಸುತ್ತಾರೆ. ಅನುಮತಿ ಗಿಟ್ಟಿಸುತ್ತಾರೆ. ಇಂತಹವರೊಬ್ಬರು ಜೊತೆಗಿದ್ದರೆ ಕಲಾವಿದರಿಗೆ ಗೌರವ ದೊರಕುತ್ತದೆ ಎಂಬ ದೇರಾಜೆ ಮಾತು ಸತ್ಯ.
ಚಿತ್ರಕಲಾ ಶಿಕ್ಷಕರ ರಾಜ್ಯ ಸಮ್ಮೇಳನಕ್ಕೆ ಆಹ್ವಾನಿಸಲು ಗೋಪಾಡ್ಕರ್ ನೇತೃತ್ವದ ತಂಡ ಕಾರಂತರ ಭೇಟಿಗೆ ಸಾಲಿಗ್ರಾಮ ಮನೆಗೆ ಬರುತ್ತದೆ. ಕರೆಯುತ್ತಾ 600 ಶಿಕ್ಷಕರು ಸೇರುತ್ತಾರೆ ಎಂಬ ಮಾತು ಕಾರಂತರ ಕೋಪಕ್ಕೆ ಕಾರಣವಾಗುತ್ತದೆ. "ಅಲ್ಲಿ ಬಂದು ಸೃಜನಶೀಲತೆ ಕುರಿತು ಹೇಳಬೇಕಾ. ಧರ್ಮಸ್ಥಳದ ಊಟಕ್ಕೆ 25ಸಾವಿರ ಜನ ಸೇರುತ್ತಾರೆ. ಅಲ್ಲಿ ಭಾಷಣ ಮಾಡಿದರಾಗದೇ. ಶಿಕ್ಷಕರನ್ನು ಉದ್ದೇಶಿಸಿ ನಾನು ಏಕೆ ಮಾತನಾಡಬೇಕು. ಯಾರು ಬದಲಾದರೂ ಶಿಕ್ಷಕರು ಬದಲಾಗುವುದಿಲ್ಲ. ನಾನೂ 40ವರ್ಷದಿಂದ ಭಾಷಣ ಮಾಡಿ ನೋಡಿದ್ದೇನೆ. ಒಬ್ಬರನ್ನು ಬಿಟ್ಟು ಯಾರೂ ಬದಲಾಗಿಲ್ಲ" ಎನ್ನುತ್ತಾರೆ ಕಾರಂತರು. ಬಂದವರಿಗೆ ಕಾರಂತರಲ್ಲಿ ಸಾಲಿಗೆ ಇತ್ತಾಗಿ ಅದ್ಯಾರು ಬದಲಾದವರು ಎಂದು ಕೇಳುತ್ತಾರೆ. "ನಾನೇ ಬದಲಾದವ, ಶಿಕ್ಷಕರಿಗೆ ಭಾಷಣ ಮಾಡಿ ಪ್ರಯೋಜನವಿಲ್ಲ ಎಂದು ಕಂಡುಕೊಂಡು ಬದಲಾದವ ನಾನು, ಶಿಕ್ಷಕರು ಕಲಿಸುವವರು, ಕಲಿಯುವವರಲ್ಲ. ದುರಹಂಕಾರ ಅವರಿಗೆ ತಾವು ತಿದ್ದುವವರೆಂದು" ಎಂದು ಸೇರಿಸುತ್ತಾರೆ. ಬಾಯಿ ಬಿಡದೇ ತಣ್ಣಗಾಗಿದ್ದ ತಂಡ ನೋಡಿ ಆಯ್ತು ಬರಬೇಕಲ್ವಾ -ಅದೂ ಆಗಲಿ ಎಂಬ ಸಮ್ಮತಿ ನೀಡುತ್ತಾರೆ ಕಾರಂತರು.
ಕಾರಂತರ ಆತ್ಮೀಯ ಬಳಗದಲ್ಲಿದ್ದವರು ಡಾ.ವಿವೇಕ ರೈಯವರ ತಂದೆ. ಅವರಿಗೆ ಗಂಡುಮಗು ಹುಟ್ಟಿದಾಗ ಕಾರಂತರ ಬಳಿ ಅವನಿಗೊಂದು ಹೆಸರು ಸೂಚಿಸಲು ಕೋರುತ್ತಾರೆ. ಎತ್ತಿದ ಬಾಯಿಗೆ ಕಾರಂತರು ವಿವೇಕ ಅನ್ನುತ್ತಾರೆ. ಆಗ ವಿವೇಕಾನಂದ ತುಂಬಾ ಚಾಲ್ತಿಯ ಹೆಸರು. ವಿವೇಕಾನಂದ ಎಂದಾ ಎಂದು ರೈ ಪ್ರಶ್ನಿಸುತ್ತಾರೆ. "ಆನಂದ ಗೀನಂದ ಏನೂ ಬೇಡ, ವಿವೇಕ ಇದ್ದರೆ ಬರುತ್ತದೆ. ವಿವೇಕ ಅಷ್ಟೆ ಸಾಕು" ಎಂಬ ಕಾರಂತರ ಮಾತಿನಂತೆ ರೈಗಳು ಮಗನ ನಾಮಕರಣ ಮಾಡುತ್ತಾರೆ. ಮಂಗಳೂರು ವಿಶ್ವವಿದ್ಯಾಲಯದ ಕಾರಂತರ ಪೀಠ ರಚನೆಯಾದಾಗ ವಿವೇಕ ರೈ ಅದನ್ನು ಮಾದರಿಯಾಗಿ ರೂಪಿಸುತ್ತಾರೆ. ಅವರಲ್ಲಿ ಅತೀವ ಪ್ರೀತಿ ಇಟ್ಟಿದ್ದ ಕಾರಂತರು ಕರೆದಾಗಲೆಲ್ಲಾ ವಿಶ್ವವಿದ್ಯಾಲಯದಲ್ಲಿ ಹೋಗಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ. ಹೀಗೇ ಅನೇಕ ಅಪೂರ್ವ ಸಂಗತಿಗಳನ್ನು ನಾಡಿನ ಪ್ರಮುಖ ಸಾಹಿತಿಗಳು ಒಡನಾಡಿಗಳು ಬಿಚ್ಚಿಟ್ಟ ಕೃತಿ ಈ ಬಾಲವನದಲ್ಲಿ ಭಾರ್ಗವ.
ಸುಬ್ರಾಯ ಚೊಕ್ಕಾಡಿ, ಜಯಂತ್ ಕಾಯ್ಕಿಣಿ, ಮಾವಿನಕುಳಿ, ತೋಳ್ಪಾಡಿ, ವೈದೇಹಿ, ಬಿಳಿಮಲೆ, ಬೊಳುವಾರು ಮೊಹಮ್ಮದ್ ಕುಂಞಿ, ಚಿನ್ನಪ್ಪ ಗೌಡ, ಕಾರಂತರ ಮಕ್ಕಳು, ಅವರ ಜೊತೆ ಕೆಲಸ ನಿರ್ವಹಿಸಿದವರು, ಕಲಾವಿದರು, ಜನಪ್ರತಿನಿದಿಗಳು, ಅಧಿಕಾರಿಗಳು ಮುಂತಾದ ಮಹನೀಯರ ಬರಹಗಳಿಂದ 'ಬಾಲವನದಲ್ಲಿ ಭಾರ್ಗವ 'ಮಿಂಚಿನ ಪ್ರಕಾಶ ಮೂಡಿಸುತ್ತಿದೆ. ಸಂಪಾದಿಸಿದ ಡಾ.ಸುಂದರ ಕೇನಾಜೆಯವರ ಶ್ರಮ ಸಾರ್ಥಕ ಎನ್ನುವುದರಲ್ಲಿ ಎರಡು ಮಾತಿಲ್ಲ.
*ಪ್ರಭಾಕರ ಕಾರಂತ್*
ಹೊಸಕೊಪ್ಪ
577126.ಕೊಪ್ಪ ತಾಲ್ಲೂಕು.
Tuesday, June 28, 2022
Monday, June 13, 2022
Sunday, June 12, 2022
Monday, June 6, 2022
Subscribe to:
Posts (Atom)