ಪುಸ್ತಕ ಪರಿಚಯ
· ಕುದುರುದ ಕೇದಗೆ
ಲೇ : ಎಂ. ಜಾನಕಿ ಬ್ರಹ್ಮಾವರ
ಪ್ರ : ಹೇಮಾಂಶು ಪ್ರಕಾಶನ,
‘ದೃಶ್ಯ' ಗೊಲ್ಲಚ್ಟಿಲ್,
ದೇರೆಬೈಲು,
ಮಂಗಳೂರು - 575 006
ಮೊದಲ ಮುದ್ರಣ : 1994
ಬೆಲೆ : ರೂ.27
ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ ಅವರ ಚೊಚ್ಚಲ ತುಳು ಕಾದಂಬರಿ- `ಕುದುರುದ ಕೇದಗೆ', ತುಳುನಾಡಿನ ಹಳ್ಳಿಯೊಂದರ ದಲಿತರ ಅಸಹಾಯಕತೆಯನ್ನು ಅನಾವರಣಗೊಳಿಸುವ ಈ ಸಾಮಾಜಿಕ ಕಾದಂಬರಿ ತನ್ನ ಕಲಾತ್ಮಕ ಕುಸುರಿ ಕೆಲಸದಿಂದ ಗಮನ ಸೆಳೆಯುತ್ತವೆ.
ನೀಲಕ್ಕನ ಮಗ ಶಂಕರ ನೌಕಾಪಡೆ ಯಲ್ಲಿರುವ ಯುವಕ. ರಜೆಯಲ್ಲಿ ಊರಿಗೆ ಬಂದಿರುವ ಶಂಕರನ ಮನಸ್ಸಲ್ಲಿ ಅವನ ಬಾಲ್ಯ ಕಾಲದ ನೆನಪುಗಳು ತುಂಬಿವೆ. ದಲಿತ ಐತನ ಮಗ ವಾಸು ಅನಾರೋಗ್ಯದಿಂದ ನರಳುತ್ತಿದ್ದಾನೆ. ಅವನನ್ನು ಆಸ್ಪತ್ರೆಗೆ ಸೇರಿಸಿ ಗುಣಮುಖಿಯಾಗಿಸುವ ಶಂಕರನ ಪ್ರಯತ್ನ ವಿಫಲವಾಗುತ್ತದೆ. ತನ್ನೂರಿನ ದಲಿತ ಯುವತಿ ಕುಸುಮಳ ಅಪಹರಣ ಪ್ರಯತ್ನದ ಸುಳಿವು ತಿಳಿದ ಶಂಕರ ಅವಳನ್ನುರಕ್ಷಿಸಲು ಪ್ರಯತ್ನಿಸುತ್ತಾನೆ. ಅವನು ಕುಸುಮಳನ್ನು ಮದುವೆಯಾಗುವ ಕನಸು ಕಾಣುತ್ತಿರುವಾಗ ಅವಳ ಅಪಹರಣವಾಗುತ್ತದೆ. ಮುಂಬಯಿಯ ಸೂಳೆಗೇರಿಯ ದಲಾಲಿಗಳು ಅವಳನ್ನು ಅಪಹರಿಸಿದರು ಎಂಬ ಸೂಚನೆ ಕಾದಂಬರಿಯಲ್ಲಿದೆ. ಕುಸುಮಳ ತಾಯಿ ಕಮಲಕ್ಕ ಊರಿನ ಗರೋಡಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಹತಾಶನಾದ ಶಂಕರ ತನ್ನ ಉದ್ಯೋಗಕ್ಕೆ ಹಿಂದಿರುಗುತ್ತಾನೆ.
ಗ್ರಾಮೀಣ ಸಮಾಜದ ದಲಿತರ ಸ್ಥಿತಿ-ಗತಿ `ಕುದುರುದ ಕೇದಗೆ'ಯ ದೃಷ್ಟಿ ಕೇಂದ್ರವಾಗಿದೆ. ಬಿಲ್ಲವ ಜಾತಿಯ ಯುವಕ ಶಂಕರನಿಗೆ ದಲಿತರ ಕುರಿತು ಪ್ರಾಮಾಣಿಕವಾದ ಸಹಾನುಭೂತಿ ಇದೆ. ದಲಿತ ವಾಸುವಿನ ಹೆಣ ಹೊರಲು ಶಂಕರನ ಸ್ವಜಾತಿಯವರು ನಿರಾಕರಿಸುತ್ತಾರೆ. ವಾಸುವಿನ ಸಾವಿಗೆ ಹಳ್ಳಿಯ ಜನರ ಮೂಢನಂಬಿಕೆಯೂ ಕಾರಣವಾಗಿದೆ. ಯಕ್ಷಗಾನ ಪ್ರದರ್ಶನದಂದು ನಡೆಯುವ ಗೂಂಡಾ ಆಕ್ರಮಣ, ದಲಿತ ಯುವತಿಯ ಅಪಹರಣ, ಗರೋಡಿಯ ಕಾಣಿಕೆ ಡಬ್ಬಿಯಿಂದ ಕಳವು- ಇವು ಹಳ್ಳಿಯ ಅವಗತಿಯನ್ನು ಸೂಚಿಸುತ್ತವೆ. ವ್ಯವಸ್ಥೆಯ ಪ್ರತಿನಿಧಿಗಳಾಗಿರುವ ಪೊಲೀಸರು ಕಮಲಕ್ಕನ `ಪೋಸ್ಟ್ ಮಾರ್ಟಮ್' ಮಾಡಿಸುತ್ತಾರೆ. ಆದರೆ ಅವರು ಕುಸುಮಳನ್ನು ಪತ್ತೆ ಹಚ್ಚಬಲ್ಲರೆಂಬ ಭರವಸೆ ಇಲ್ಲ. ದಲಿತ ಐತ ಅಸಹಾಯಕನಾಗಿ ಊರು ಬಿಟ್ಟು ಹೋಗುತ್ತಾನೆ.
ಕಾದಂಬರಿಯ ನಾಯಕ ಶಂಕರನ ದೃಷ್ಟಿಕೋನದ ತಂತ್ರವಿರುವ ಈ ಕೃತಿಯಲ್ಲಿ ಹಲವು ಧ್ವನಿಪೂರ್ಣ, ಸಾಂಕೇತಿಕ ವಿವರಗಳಿವೆ. ಕುಸುಮಳ ಅಪಹರಣವನ್ನು ಸೂಚಿಸುವ ಹದ್ದು - ಕೋಳಿಮರಿಯ ಸಂಕೇತ ಒಂದು ಒಳ್ಳೆಯ ಉದಾಹರಣೆ. ವಸ್ತುವಿನ ಸೀಮಿತ ಚೌಕಟ್ಟಿನಿಂದಾಗಿ ಈ ಕೃತಿ ನೀಳ್ಗತೆ ಮತ್ತು ಕಿರುಕಾದಂಬರಿಗಳ ಗಡಿಯಲ್ಲಿ ನಿಲ್ಲುತ್ತವೆ.
`ಕುದುರುದ ಕೇದಗೆ'ಯಲ್ಲಿ ಭರವಸೆ ಮೂಡಿಸುವ ಉದಯೋನ್ಮುಖ ತುಳು ಲೇಖಕಿಯೊಬ್ಬರು ಕಾಣಲು ಸಿಗುತ್ತಾರೆ. ಮಹಾಲಿಂಗರ `ನಾಣಜ್ಜೆರ್ ಸುದೆ ತಿರ್ಗಾಯೆರ್' ಕಾದಂಬರಿಯ ಆನಂತರ ಪ್ರಕಟವಾಗಿರುವ ಒಂದು ಗಮನಾರ್ಹ ಕಲಾತ್ಮಕ ಕೃತಿ - ``ಕುದುರುದ ಕೇದಗೆ''.
No comments:
Post a Comment