Friday, January 5, 2024
ಪುರುಷೋತ್ತಮ ಬಿಳಿಮಲೆ - ಗುರುಗಳಾದ ಅಮೃತರು ಇನ್ನಿಲ್ಲ -
ಗುರುಗಳಾದ ಅಮೃತರು ಇನ್ನಿಲ್ಲ
ಕಳೆದ ನವಂಬರ ತಿಂಗಳಲ್ಲಿ ಗುರುಗಳಾದ ಅಮೃತ ಸೋಮೇಶ್ವರರನ್ನು ಅವರ ಮನೆಯಲ್ಲಿ ಕಂಡು ಮಾತಾಡಿಸಿ ಬಂದಿದ್ದೆ. ಹಾಸಿಗೆಯಲ್ಲಿ ಮಲಗಿದ್ದ ಅವರು ನನ್ನ ಕಂಡೊಡನೆ ಮುಗುಳ್ನಕ್ಕು ಕೈಯನ್ನು ಸುಮಾರು ಅರ್ಧ ಗಂಟೆಯವರೆಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ನಾವು ಮಾತಾಡುತ್ತಿದ್ದುದಕ್ಕೆಲ್ಲ ಸಣ್ಣದಾಗಿ ಪ್ರತಿಕ್ರಿಯಿಸುತ್ತಿದ್ದರು. ಅಮೃತರೇ ಹಾಗೆ, ತನ್ನ ಸುತ್ತ ನಡೆಯುತ್ತಿದ್ದ ಯಾವುದೇ ಘಟನೆಗಳಿಗೆ ತನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಲೇ ಇದ್ದರು. ಇನ್ನು ನಾವದನ್ನು ಕಾಣಲಾರೆವು.
ನಿಜವಾದ ಅರ್ಥದಲ್ಲಿ ಅವರು ನನ್ನ ಗುರುಗಳು. ಹಳಗನ್ನಡ, ನಡುಗನ್ನಡ, ಹೊಸಗನ್ನಡ, ತುಳು ಭಾಷೆ, ಯಕ್ಷಗಾನ, ಹರಿಕತೆ, ನಾಟಕ, ಸಂಘಟನೆ, ಪ್ರೀತಿ, ವಾತ್ಸಲ್ಯ, ಪ್ರೇಮ, ಕಡಲು, ಮೀನು, ಭಗವತಿಗಳು, ಭಾಷಣ, ಪಯಣ, ಕ್ಷೇತ್ರ ಕಾರ್ಯ, ಶೋಷಣೆ, ತಮಾಷೆ.. ಹೀಗೆ ಅವರಿಂದ ಕಲಿತದ್ದು ಅಪಾರ. ಪುತ್ತೂರಿನ ವಿವೇಕಾನಂದ ಕಾಲೇಜಲ್ಲಿ ಐಚ್ಛಿಕ ಕನ್ನಡದ ವಿದ್ಯಾರ್ಥಿಗಳಾದ ನಮ್ಮನ್ನು ಅವರು ವಾರಾಂತ್ಯದಲ್ಲಿ ಪುತ್ತೂರಿನಿಂದ ಅವರ ಮನೆಯಿದ್ದ ಕೋಟೆಕಾರಿಗೆ ಕರೆದುಕೊಂಡು ಹೋಗುತ್ತಿದ್ದರು. ಮಧ್ಯಾಹ್ನದ ಊಟ ಅವರ ಮನೆಯಲ್ಲಿ. ಸಾಯಂಕಾಲ ಅವರೊಂದಿಗೆ ಸೋಮೇಶ್ವರದ ಕಡಲ ತೀರಕ್ಕೆ. ಅಲ್ಲಿ ಕಡಲಿನೊಳಗೆ ಚಾಚಿಯೂ ಚಾಚದಂತೆ ತಲೆ ಎತ್ತಿ ನಿಂತಿರುವ ರುದ್ರಶಿಲೆಯ ಮೇಲೆ ನಮ್ಮ ಚೌಕಟ್ಟುಗಳಿಲ್ಲದ ಪಟ್ಟಾಂಗ. ಅಮೃತರ ಕವನ ಸಂಕಲನಗಳಾದ ವನಮಾಲೆ ಮತ್ತು ಭ್ರಮಣಗಳನ್ನು ನಾವಾಗಲೇ ಓದಿದ್ದು. ಸಣ್ಣ ಕತೆಗಳ ಸಂಕಲನ ಎಲೆಗಿಳಿ ಮತ್ತು ರುದ್ರಶಿಲೆ ಸಾಕ್ಷಿಗಳನ್ನು ನಾವು ಹಲವರು ಓದಿದ್ದು ರುದ್ರ ಶಿಲೆಯ ಮೇಲೆಯೇ. ತರಗತಿಯ ಒಳಗೆ ಸಾಹಿತ್ಯದ ಪಠ್ಯಗಳನ್ನು ಬಗೆದು ತೋರಿಸುವ ಅವರು ಹೊರಗಡೆಗೆ ಜಾನಪದದ ಬಗೆಗೆ ಹೆಚ್ಚು ಒತ್ತು ನೀಡುತ್ತಿದ್ದರು. ಇದರಿಂದಾಗಿ ನಮಗೆ ಸಂಸ್ಕೃತಿಯ ಭಿನ್ನ ಮುಖಗಳ ದರ್ಶನವಾಗುತ್ತಿತ್ತು. ನಾವೆಲ್ಲಾ ತುಳುನಾಡಿನ ನಿವಾಸಿಗಳೇ ಹೌದಾದರೂ ನಮ್ಮ ಕಣ್ಣಿಗೆ ಬೀಳದ ಅನೇಕ ಸಂಗತಿಗಳನ್ನು ಅವರು ಆಗಾಗ ತೆರೆದು ತೋರಿಸುತ್ತಲೇ ಬರುತ್ತಿದ್ದರು. ಕಲ್ಕುಡ ಪಾಡ್ದನವನ್ನು ಆಧರಿಸಿ ವೀರ ಕಲ್ಕುಡ ಎಂಬ ನಾಟಕವನ್ನು ಅವರು ಬರೆದು, ನಾನು ಅದರಲ್ಲಿ ಪಾತ್ರ ಮಾಡುವಂತೆ ಪ್ರಚೋದಿಸಿದ್ದರು. ಕಾಲೇಜಿನ ವಾರ್ಷಿಕೋತ್ಸವಕ್ಕೆ ತರಬೇತಿ ನೀಡಿ ಯಕ್ಷಗಾನ ಮಾಡಿಸಿದ್ದರು. ಪಂಜೆ ಮಂಗೇಶರಾಯ, ಗೋವಿಂದ ಪೈ, ಕಡೆಂಗೊಡ್ಲು ಶಂಕರ ಭಟ್ಟ, ಸೇಡಿಯಾಪು ಕೃಷ್ಣ ಭಟ್ಟ, ಮುಳಿಯ ತಿಮ್ಮಪ್ಪಯ್ಯ, ಪಾರ್ತಿಸುಬ್ಬ , ಶಿವರಾಮ ಕಾರಂತ, ಮೊದಲಾದವರ ಬಗ್ಗೆ ನನಗೆ ಪ್ರಾಥಮಿಕ ತಿಳಿವಳಿಕೆ ದೊರೆತದ್ದು ಪುತ್ತೂರಿನಲ್ಲಿದ್ದ ಅಮೃತರ ಪುಟ್ಟ ಕೊಠಡಿಯಲ್ಲಿ.
೧೯೭೦ರ ದಶಕದ ಕೊನೆಯ ಹೊತ್ತಿಗೆ ಯಕ್ಷಗಾನ ಕ್ಷೇತ್ರವು ತನ್ನ ಸಾಧ್ಯತೆಗಳನ್ನೆಲ್ಲಾ ತೀರಿಸಿಕೊಂಡು ಜಡವಾಗುತ್ತಿರುವ ಹೊತ್ತಿಗೆ ಎರಡು ಘಟನೆಗಳು ಒಟ್ಟೊಟ್ಟಾಗಿ ಸಂಭವಿಸಿದವು. ಮೊದಲನೆಯದು ತುಳು ಯಕ್ಷಗಾನಗಳ ಉಗಮ ಮತ್ತು ಎರಡನೆಯದು ಪಾರಂಪರಿಕ ಯಕ್ಷಗಾನಕ್ಕೆ ಮರು ಜೀವ ಕೊಡುವ ಪ್ರಯತ್ನ. ಈ ಎರಡೂ ಘಟನೆಗಳ ಮುಂಚೂಣಿಯಲ್ಲಿ ಅಮೃತ ಸೋಮೇಶ್ವರರು ಇದ್ದರೆಂಬುದು ಗಮನಾರ್ಹ ವಿಚಾರವಾಗಿದೆ. ಕನ್ನಡ ಯಕ್ಷಗಾನವು ತುಳುವಿನ ಕಡೆಗೆ ಹೊರಳಿಕೊಳ್ಳುವ ಸ್ಥಿತ್ಯಂತರದ ಕಾಲಘಟ್ಟದಲ್ಲಿ ಅಮೃತರು ಕನ್ನಡದಲ್ಲಿ ಆರಂಭವಾಗಿ ತುಳುವಿನಲ್ಲಿ ಮುಕ್ತಾಯವಾಗುವ ಅಮರ ಶಿಲ್ಪಿ ವೀರ ಕಲ್ಕುಡ ಪ್ರಸಂಗವನ್ನು ಬರೆದರು. ವೈದಿಕ ಪುರಾಣದ ಕತೆಯೊಂದನ್ನು ತುಳು ಸಂಸ್ಕೃತಿಗೆ ಜೋಡಿಸಿದ ಈ ಪ್ರಸಂಗವನ್ನು ಅಗರಿ, ಶೇಣಿ, ಸಾಮಗ, ಮೊದಲಾದ ಅಗಾಧ ಪ್ರತಿಭೆಯ ಕಲಾವಿದರುಗಳಿದ್ದ ಸುರತ್ಕಲ್ ಮೇಳದ ಕಲಾವಿದರು ಅದ್ಭುತವಾಗಿ ಪ್ರದರ್ಶಿಸಿದ್ದರು. ಮುಂದೆ ಅಮೃತರು ಧರ್ಮಸ್ಥಳ ಮೇಳಕ್ಕೆ ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ಮಹಾಶೂರ ಭೌಮಾಸುರ, ಮಹಾಕಲಿ ಮಗಧೇಂದ್ರ, ತ್ರಿಪುರ ಮಥನ, ಗಂಗಾವತರಣ, ವಂಶವಾಹಿನಿ, ಮೊದಲಾದ ಅತ್ಯಧ್ಭುತ ಪ್ರಸಂಗಗಳನ್ನು ಬರೆದರು. ನನ್ನ ಪ್ರಕಾರ ಅದು ಯಕ್ಷಗಾನದ ಸುವರ್ಣಯುಗ. ಈ ಪ್ರಸಂಗಗಳ ವಸ್ತು ಪೌರಾಣಿಕವಾಗಿದ್ದರೂ ಅದು ರಂಗದಲ್ಲಿ ಕಾಣಿಸಿಕೊಂಡಾಗ ಅತ್ಯಾಧುನಿಕವಾದ ಅನುಭವಗಳನ್ನು ಕೊಡುತ್ತಿತ್ತು. ಗಿರೀಶ್ ಕಾರ್ನಾಡರ ನಾಟಕಗಳು ನೀಡುತ್ತಿದ್ದ ರೋಮಾಂಚನವನ್ನು ಕರ್ಣ, ಅಶ್ವಿನಿ ದೇವತೆಗಳು, ಚಾರ್ವಾಕ, ಭೌಮಾಸುರ, ಭಗೀರಥ, ಮಗಧ ಮೊದಲಾದ ಪಾತ್ರಗಳೂ ನೀಡುತ್ತಿದ್ದುವು. ಕಳೆಗುಂದುತ್ತಿದ್ದ ಪೌರಾಣಿಕ ಯಕ್ಷಗಾನಗಳಿಗೆ ಹೊಸ ಜೀವ ಕೊಟ್ಟವರಲ್ಲಿ ಅಮೃತರು ಪ್ರಮುಖರು. ʼ ಅಮೃತರ ಹಾಗೆ ಪದ್ತ ಬರೆದರೆ ನಮಗೆ ಹಾಡಲೂ ಖುಷಿಯಾಗುತ್ತದೆ’ ಎಂದು ಕಡತೋಕರು ಒಮ್ಮೆ ನನ್ನೊಡನೆ ಹೇಳಿದ್ದರು. ಭಾಷೆ, ಕಥನ ತಂತ್ರ, ವಸ್ತುವಿನ ಆಧುನಿಕತೆ ಮತ್ತು ಬಳಸುವ ಉಪಮೆ - ರೂಪಕಗಳು ಅಮೃತರನ್ನು ಆಧುನಿಕ ಪಾರ್ತಿ ಸುಬ್ಬ ಎಂಬ ಬಿರುದಿಗೆ ಅನ್ವರ್ಥಕಗೊಳಿಸಿದುವು. ಕನ್ನಡ ಸಾಹಿತ್ಯದ ವಿಸ್ತಾರವಾದ ಓದು ಅಮೃತರನ್ನು ಇತರ ಪ್ರಸಂಗ ಕರ್ತರಿಂದ ಬೇರೆಯಾಗಿಸಿತು.
ನಾಲ್ಕು ಸಣ್ಣ ಕಥಾ ಸಂಕಲನಗಳು, ಐದು ಕವನ ಸಂಕಲನಗಳು, ಒಂದು ಕಾದಂಬರಿ, ೧೩ ನಾಟಕಗಳು, ೯ ನೃತ್ಯ ರೂಪಕಗಳು, ಎರಡು ವ್ಯಕ್ತಿ ಚಿತ್ರಗಳು, ಎರಡು ಪಾಡ್ದನ ಸಂಕಲನಗಳು, ೧೨ ಸಂಶೋಧನಾ ಕೃತಿಗಳು, ಎಂಟು ಸಂಪಾದಿತ ಕೃತಿಗಳು, ೨೨ ಯಕ್ಷಗಾನ ಪ್ರಸಂಗಗಳು, ೨೦ಕ್ಕೂ ಹೆಚ್ಚು ಧ್ವನಿಸುರುಳಿಗಳು ಇತ್ಯಾದಿಗಳನ್ನು ಅವರು ನಮಗೆ ಬಿಟ್ಟು ತೆರಳಿದ್ದಾರೆ.
ಕೆಳಗಿನ ಚಿತ್ರದಲ್ಲಿ ಅವರು ನನ್ನ ಕಾಗೆ ಮುಟ್ಟಿದ ನೀರು ಕೃತಿಯನ್ನು ಸಂಸಾರ ಸಮೇತ ಸಂಭ್ರಮಿಸಿದ್ದನ್ನು ಕಾಣಬಹುದು. ಇಂಥ ಮನಸ್ಸುಗಳು ಈಗೆಲ್ಲಿ?
Subscribe to:
Post Comments (Atom)
No comments:
Post a Comment