Tuesday, November 16, 2010

TULU DICTIONARY

ತುಳು ನಿಘಂಟು

ಮುರಳೀಧರ ಉಪಾಧ್ಯ ಹಿರಿಯಡಕ

ಜರ್ಮನ್ ಕ್ರಿಶ್ಚಿಯನ್ ಮಿಶನರಿ ರೆ| ಆಗಸ್ಟ ಮ್ಯಾನರ್ ರಚಿಸಿದ 'ತುಳು-ಇಂಗ್ಲಿಷ್ ನಿಘಂಟು' (1886) ತುಳುವಿನ ಪ್ರಥಮ ಶಬ್ದಕೋಶ. ಈ ನಿಘಂಟಿನಲ್ಲಿ ಹತ್ತೊಂಬತ್ತು ಸಾವಿರ ಶಬ್ದಗಳಿವೆ. ಮ್ಯಾನರ್ ಅವರ 'ಇಂಗ್ಲಿಷ್-ತುಳು ನಿಘಂಟು' 1888ರಲ್ಲಿ ಪ್ರಕಟವಾಯಿತು. ಮ್ಯಾನರ್ ಅವರ ನಿಘಂಟಿನಲ್ಲಿದ್ದ ಸಂಸ್ಕೃತ ಶಬ್ದಗಳನ್ನು ತೆಗೆದು ಹಾಕಿ, ಪರಿಷ್ಕರಿಸಿದ ಹೊಸ 'ತುಳು-ಇಂಗ್ಲಿಷ್ ನಿಘಂಟ'ನ್ನು ಎಂ. ಮರಿಯಪ್ಪ ಭಟ್ ಹಾಗೂ ಎ. ಶಂಕರ ಕೆದಲಾಯರು 1967ರಲ್ಲಿ ಸಂಪಾದಿಸಿದರು.

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಪ್ರಕಟಿಸಿರುವ ಆರು ಬೃಹತ್ ಸಂಪುಟಗಳ ನಿಘಂಟಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶಬ್ದಗಳಿವೆ. ಡಾ| ಯು. ಪಿ. ಉಪಾಧ್ಯಾಯರ ನೇತೃತ್ವದ ಸಂಪಾದಕ ಮಂಡಳಿಯ ಹದಿನೆಂಟು ವರ್ಷಗಳ (1979-1997) ಭಗೀರಥ ಪ್ರಯತ್ನದ ಫಲವಾಗಿ ಈ ನಿಘಂಟು ಸಿದ್ಧಗೊಂಡಿದೆ. ತುಳುನಾಡಿನ ನೂರಾರು ಹಳ್ಳಿಗಳಲ್ಲಿ ಕ್ಷೇತ್ರಕಾರ್ಯ ನಡೆಸಿ, ಜನರ ಮಾತು - ಕತೆಯಲ್ಲಿದ್ದ ಅಲಿಖಿತ ಪರಂಪರೆಯ ಶಬ್ದಗಳನ್ನು ಸಂಗ್ರಹಿಸಿರುವುದು ಈ ನಿಘಂಟಿನ ಅಗ್ಗಳಿಕೆಯಾಗಿದೆ. ತುಳುನಾಡಿನ ವಿವಿಧ ಸಾಮಾಜಿಕ ವರ್ಗದವರು ಬಳಸುವ ಆಧಾರಭೂತ ಶಬ್ದಾವಳಿ, ಬೇಸಾಯ,ಮೀನುಗಾರಿಕೆ ಮತ್ತಿತರ ವೃತ್ತಿ ಕಸುಬುಗಳ ಸನ್ನಿವೇಶಗಳಲ್ಲಿ ಬಳಸುವ ತಾಂತ್ರಿಕ ಪದಗಳು, ಭೂತಾರಾಧನೆಯಂಥ ಧಾಮರ್ಿಕ ಆಚರಣೆಗಳಲ್ಲಿ ಬಳಸುವ ಸಾಂಸ್ಕೃತಿಕ ಪದಗಳು, ಪ್ರಾಚೀನ ಕಾವ್ಯ - ಜನಪದ ಕಾವ್ಯಗಳಲ್ಲಿರುವ ಪದಗಳು, ತುಳುವಿನ ಕುಲನಾಮಗಳು, ಸ್ಥಳನಾಮಗಳು ಇವೆಲ್ಲವನ್ನೂ ಒಳಗೊಂಡಿರುವ ಈ ತುಳು ನಿಘಂಟು ಒಂದು ಸಂಸ್ಕೃತಿ ಕೋಶ. ಈ ನಿಘಂಟು ತುಳು ಶಬ್ದಗಳನ್ನು ಕನ್ನಡ ಲಿಪಿಯಲ್ಲಿಯೂ, ರೋಮನ್ ಲಿಪಿಯಲ್ಲಿಯೂ ಉಲ್ಲೇಖಿಸಿ ಸಮಾನಾರ್ಥ ಪದಗಳನ್ನು, ಅರ್ಥಭೇದಗಳನ್ನು, ಸಂಬಂಧಪಟ್ಟ ಸಮಾನಪದ, ನುಡಿಗಟ್ಟು ಗಾದೆಗಳನ್ನು, ಕನ್ನಡ, ತಮಿಳು, ಕೊಡವ, ಮಲೆಯಾಳ ಮುಂತಾದ ಸೋದರ ಭಾಷೆಗಳಲ್ಲಿರುವ ಜ್ಞಾತಿ ಪದಗಳನ್ನು ಕೊಡುತ್ತದೆ. ಭಾರತದ ಭಾಷೆಗಳ ಆಧುನಿಕ ಇತಿಹಾಸದಲ್ಲಿ ತುಳು ನಿಘಂಟಿನ ರಚನೆ ಒಂದು ಅತ್ಯುನ್ನತ ಘಟನೆ. ಇಪ್ಪತ್ತೊಂದನೆಯ ಶತಮಾನದಲ್ಲಿ ರೂಪುಗೊಳ್ಳಲಿರುವ ಭಾರತೀಯ ನಿಘಂಟುಗಳಿಗೆ ಇದು ಮಾರ್ಗದಶರ್ಿ ನಕ್ಷತ್ರವಾಗಲಿದೆ, ಚಿರಂಜೀವಿಯಾಗಲಿದೆ.

ಆಧುನಿಕ ತುಳುನಾಡಿನ ಸಾಹಿತ್ಯದ ಒಂದು ಶತಮಾನದ ಇತಿಹಾಸವನ್ನು ಅವಲೋಕಿಸುವಾಗ ಕನ್ನಡ ಕವಿ ಬೇಂದ್ರೆಯವರ ಕವನವೊಂದರ ಸಾಲುಗಳು ನೆನಪಾಗುತ್ತವೆ - 'ಕತೆ ಆಯಿತೇ ಅಣ್ಣ ಬಹಳ ಸಣ್ಣ, ಕತೆಯ ಮೈಗಿಂತ ಮಿಗಿಲದರ ಬಣ್ಣ'. ಯಿದ್ದಿಶ್, ತುಳುವಿನಂತೆ ಕೆಲವು ಲಕ್ಷಜನ ಮಾತನಾಡುವ ಭಾಷೆ. ಈ ಭಾಷೆಯ ಕತೆಗಾರ ಐಸಾಕ್ ಭಾಷೆವಿಸ್ ಸಿಂಗರ್ 1978ರಲಿ ನೋಬೆಲ್ ಬಹುಮಾನ ಪಡೆದರು. ನೋಬೆಲ್ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಸಿಂಗರ್ ತನ್ನ ಯಿದ್ದಿಶ ಭಾಷೆಯ ಬಗ್ಗೆ ನುಡಿದ ಮಾತುಗಳು ತುಳು ಭಾಷೆ - ಸಾಹಿತ್ಯಕ್ಕೂ ಚೆನ್ನಾಗಿ ಅನ್ವಯಿಸುತ್ತವೆ.

ನನಗೆ ಯಿದ್ದಿಶ್ ಭಾಷೆ ಹಾಗೂ ಅದನ್ನು ಮಾತನಾಡುವ ಜನತೆ ಬೇರೆ - ಬೇರೆಯಲ್ಲವೆನ್ನಿಸಿದೆ. ಯಿದ್ದಿಶ್ ಭಾಷೆಯಲ್ಲಿ ಬನಿ, ಜೀವನೋತ್ಸಾಹ ಸಹನೆ ಅಲ್ಲಿನ ಜನರ ಬದುಕಿನಿಂದ ಬಂದದ್ದು. ಈ ಭಾಷೆ ಪ್ರಕಟಿಸುವ ಮಾನವನ ಬಗೆಗಿನ ಗೌರವ ಘನತೆಯೂ ಆ ಬದುಕಿನ ಫಲವೇ ಆಗಿದೆ. ಯಿದ್ದಿಶ್ನಲ್ಲಿ ಆರೋಗ್ಯಕರ ವಿನೋದವಿದೆ, ದಿನನಿತ್ಯದ ಬದುಕಿನ ಬಗ್ಗೆ ಅಪಾರ ಗೌರವವಿದೆ. ಪ್ರೀತಿ ಸಾಹಸಗಳನ್ನು ಅದು ಒಪ್ಪಿ ಆಲಂಗಿಸಿಕೊಳ್ಳುತ್ತದೆ. ಯಿದ್ದಿಶ್ ಮನೋಭಾವ ತೀರ ಒರಟಾದುದಲ್ಲ. ಯಶಸ್ಸನ್ನು ಅದು ಕೊಡುಗೆಯಾಗಿ ಪಡೆಯಲು ಸಿದ್ಧವಿಲ್ಲ. ಸಾಧನೆಯ ಮೂಲಕ ಗಳಿಸಿಕೊಳ್ಳಲು ಹಂಬಲಿಸುತ್ತದೆ. ಅದು ಯಾವುದನ್ನೂ ತನ್ನ ಹಕ್ಕೆಂದು ಪಡೆಯದೆ ಗೊಂದಲಗಳ ನಡುವೆ ಮೂಡುವ, ವಿನಾಶದ ಮಧ್ಯೆ ಅರಳುವ ಸೃಷ್ಟಿ ಶಕತಿಯ ಬಗ್ಗೆ ಗಾಢ ವಿಶ್ವಾಸ ಹೊಂದಿದೆ. ಯಿದ್ದಿಶ್ ಇನ್ನೂ ಸತ್ತಿಲ್ಲ. ಜಗತ್ತು ಕಾಣದ ಅದ್ಭುತ ಸಂಪತ್ತು ಅದರಲ್ಲಿದೆ. 

TULU YAKSHAGANA

ತುಳು ಯಕ್ಷಗಾನ

ಮುರಳೀಧರ ಉಪಾಧ್ಯ ಹಿರಿಯಡಕ

ಬಾಯಾರು ಸಂಕಯ್ಯ ಭಾಗವತರು (1820-1890) 'ಪಂಚವಟಿ ರಾಮಾಯಣ - ವಾಲಿಸುಗ್ರೀವರೆ ಕಾಳಗೊ' (1917) ಎಂಬ ತುಳು ಯಕ್ಷಗಾನ ಪ್ರಸಂಗವನ್ನು 1887ರಲ್ಲಿ ಬರೆದರು. ಪಾತರ್ಿಸುಬ್ಬನ ಕನ್ನಡ 'ಪಂಚವಟಿ' ಪ್ರಸಂಗಕ್ಕೆ ಋಣಿಯಾಗಿರುವ ಈ ಕೃತಿಯಲ್ಲಿ ಸಂಕಯ್ಯ ಭಾಗವತರ ಪ್ರತಿಭೆಯ ಹೊಳಹುಗಳಿವೆ. ಬಡಕಬೈಲು ಪರಮೇಶ್ವರಯ್ಯನವರ (1881-1949) 'ಕಿಟ್ಣರಾಜಿ ಪರ್ಸಂಗೊ' (1929), ಹದಿನೇಳನೆಯ ಶತಮಾನದ ದೇವಿದಾಸ ಕವಿಯ ಕನ್ನಡ 'ಶ್ರೀಕೃಷ್ಣಸಂಧಾನ'ದ ಭಾಷಾಂತರ. ದೇರಂಬಳ ತ್ಯಾಂಪಣ್ಣ ಶೆಟ್ಟರ 'ಪಂಚವಟಿ' (1932). ಕೆಮ್ತೂರು ದೊಡ್ಡಣ್ಣ ಶೆಟ್ಟರ 'ಅಂಗದ ರಾಜಿ ಪರ್ಸಂಗೊ' (1954) - ಇವು ತುಳುವಿನ ಕೆಲವು ಹಳೆಯ ಪ್ರಸಂಗಗಳು. ಪಂದಿಬೆಟ್ಟು ವೆಂಕಟರಾಯರ 'ಕೋಟಿಚೆನ್ನಯ' (1939) ಎಂಬ ಕನ್ನಡ ಪ್ರಸಂಗ ತುಳು ಯಕ್ಷಗಾನದ ಜನಪ್ರಿಯತೆಗೆ ಕಾರಣವಾಯಿತು. ತುಳು ಮಹಾಕವಿ ಮಂದಾರ ಕೇಶವ ಭಟ್ಟರು ಪಾತರ್ಿಸುಬ್ಬನ 'ಪಾದುಕಾ ಪ್ರದಾನ' ಹಾಗೂ 'ಶೂರ್ಪನಖಾ ಪ್ರಕರಣ'ಗಳನ್ನು 'ಭರತನ ಮೋಕೆ ಬೊಕ್ಕ ಮಾಯೆದ ಶೂರ್ಪನಕಿ' ಎಂದು ಭಾಷಾಂತರಿಸಿದ್ದಾರೆ.

ಆಶಯ ಆಕೃತಿಗಳ ದೃಷ್ಟಿಯಿಂದ ತುಳು ಯಕ್ಷಗಾನ ಸಾಹಿತ್ಯಕ್ಕೆ ಘನತೆಯನ್ನು ತಂದವರು ಅಮೃತ ಸೋಮೇಶ್ವರರು. ಅಮೃತರ ಯಕ್ಷಗಾನ ಪ್ರಸಂಗದಲ್ಲಿ ಪುರಾಣದ ಪ್ರತೀಕ ಅಥವಾ ಜನಪದ ಕತೆಯ ಆಶಯದಷ್ಟೆ ಕವಿಯ ವೈಯಕ್ತಿಕ ಛಾಪು ಕೂಡ ಮುಖ್ಯವಾಗುತ್ತದೆ. 'ಅಮರ ಶಿಲ್ಪಿ ವೀರ ಕಲ್ಕುಡ' (1979), 'ಕಾಯಕಲ್ಪ' (1981), 'ಸಹಸ್ರ ಕವಚ ಮೋಕ್ಷ' (1982), 'ತರಿಪುರ ಮಥನ' (1984), 'ಮಹಾಕಾಲಿ ಮಗಧೇಂದ್ರ' (1985), 'ಮಹಾಶೂರ ಭೌಮಾಸುರ' (1987) - ಇವು ಅವರ ಕೆಲವು ಮುಖ್ಯ ಪ್ರಸಂಗಗಳು. ಅನಂತರಾಮ ಬಂಗಾಡಿ, ಪುರುಷೋತ್ತಮ ಪೂಂಜ, ಎ. ಎನ್. ಶೆಟ್ಟಿ, ನಿತ್ಯಾನಂದ ಕಾರಂತ - ಮತ್ತಿತರ ಹಲವು ಕವಿಗಳು ತುಳು ಯಕ್ಷಗಾನ ಪ್ರಸಂಗ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ.

ತುಳು ಯಕ್ಷಗಾನ, ಯಕ್ಷಗಾನ ವಸ್ತುವನ್ನು ಪುರಾಣಲೋಕದಿಂದ ಜಾನಪದ ಪೋಕಕ್ಕೆ ತಂದಿತು. ಇದರಿಂದ ತೆಂಕುತಿಟ್ಟಿನ ಈ ಯಕ್ಷಗಾನ ವೇಷಭೂಷಣದ ಮೇಲಾದ ದುಷ್ಪರಿಣಾಮಗಳ ಬಗ್ಗೆ ಯಕ್ಷಗಾನ ವಿಮರ್ಶಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತೆಂಕುತಿಟ್ಟಿನ ವೇಷಭೂಷಣ ಹಾಗೂ ತುಳು ಜಾನಪದ ರಂಗಭೂಮಿಯ ವೇಷಭೂಷಣಗಳ ಔಚಿತ್ಯಪೂರ್ಣ ಬೆಸುಗೆಯಿಂದ ತುಳುತಿಟ್ಟು ಎಂಬ ಪ್ರತ್ಯೇಕ ಕವಲನ್ನು ಬೆಳೆಸುವ ಪ್ರಯತ್ನ ಇನ್ನೂ ಆರಂಭದ ಹಂತದಲ್ಲಿದೆ.

TULU PROSE

ತುಳು ಗದ್ಯ

ಮುರಳೀಧರ ಉಪಾಧ್ಯ ಹಿರಿಯಡಕ

ಧರ್ಮಸ್ಥಳದ ಶ್ರೀಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದಲ್ಲಿ ತುಳು ಲಿಪಿಯಲ್ಲಿರುವ 489 ಹಸ್ತಪ್ರತಿಗಳಿವೆ. ಇವುಗಳಲ್ಲಿ ಹೆಚ್ಚಿನವುಗಳು ತುಳುಲಿಪಿಯಲ್ಲಿರುವ ಸಂಸ್ಕೃತ ಗ್ರಂಥಗಳು. ಮುದ್ರಣಯಂತ್ರಗಳು ಬಂದ ಮೇಲೆ ತುಳುವರು ಕನ್ನಡ ಲಿಪಿಯಲ್ಲಿ ತುಳುವಲ್ಲಿ ಬರೆಯತೊಡಗಿದರು. ಮುದ್ರಣಯಂತ್ರದಿಂದಾಗಿ ತುಳುನಾಡಿನಲ್ಲಿ ನೂರಾರು ಕನ್ನಡ ಪತ್ರಿಕೆಗಳು ಆರಂಭಗೊಂಡವು. ಆದರೆ ತುಳು ಪತ್ರಿಕೋದ್ಯಮ ಬೆಳೆಯಲಿಲ್ಲ. ಈಗ ಪ್ರಕಟವಾಗುತ್ತಿರುವ ಬೆರಳೆಣಿಕೆಯ ತುಳು ಪತ್ರಿಕೆಗಳು ಪ್ರಸಾರದ ಕೊರತೆಯಿಂದ ಸೊರಗುತ್ತಿವೆ. ತುಳು ಪತ್ರಿಕೋದ್ಯಮದ ದುಃಸ್ಥಿತಿಯಿಂದಾಗಿ ತುಳು ಗದ್ಯ ಸಮೃದ್ಧವಾಗಿಲ್ಲ.

ಡಾ| ಬಿ. ಎ. ವಿವೇಕ ರೈ ಅವರ 'ತುಳುಜನಪದ ಸಾಹಿತ್ಯ' (1985) ತುಳು ಜಾನಪದ ಸಂಶೋಧನೆಗೆ ನಾಂದಿ ಹಾಡಿದ ಮಹತ್ತ್ವದ ಕೃತಿ. ಡಾ| ಚಿನ್ನಪ್ಪ ಗೌಡ, ಡಾ| ಯು. ಪಿ. ಉಪಾಧ್ಯಾಯ, ಡಾ| ಸುಶೀಲ ಉಪಾಧ್ಯಾಯ, ಡಾ| ಪುರುಷೋತ್ತಮ ಬಿಳಿಮಲೆ, ಅಮೃತ ಸೋಮೇಶ್ವರ, ಡಾ| ಬಿ. ಶಿವರಾಮ ಶೆಟ್ಟಿ, ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್, ಡಾ| ವಾಮನ ನಂದಾವರ, ಡಾ| ಮೋಹನ ಕೋಟ್ಯಾನ್, ಬನ್ನಂಜೆ ಬಾಬು ಅಮೀನ್, ಡಾ| ಗಣನಾಥ ಎಕ್ಕಾರ್, ಕನರಾಡಿ ವಾದಿರಾಜ ಭಟ್, ಎ. ವಿ. ನಾವಡ, ಡಾ| ಗಾಯತ್ರಿ ನಾವಡ, ಪೀಟರ್ ಜೆ. ಕ್ಲಾಸ್, ಲೌರಿಹೊಂಕೊ, ಹೈಡ್ರೂನ್ ಬ್ರೂಕ್ನರ್, ಕು. ಶಿ. ಹರಿದಾಸ ಭಟ್ ಇವರೆಲ್ಲ ತುಳು ಜಾನಪದ ಅಧ್ಯಯನಕ್ಕೆ ಮೌಲಿಕ ಕೊಡುಗೆ ನೀಡಿದ್ದಾರೆ. ಇವರ ಗ್ರಂಥಗಳು ಕನ್ನಡ, ಇಂಗ್ಲೀಷ್ಗಳಲ್ಲಿ ಪ್ರಕಟವಾಗಿವೆ. ಭಾಷಾಶಾಸ್ತ್ರಜ್ಞರಾದ ಡಾ\ ಡಿ. ಎನ್. ಶಂಕರ ಭಟ್, ಡಾ| ಯು. ಪಿ. ಉಪಾಧ್ಯಾಯ, ಡಾ| ಕೆ. ಪದ್ಮನಾಭ ಕೇಕುಣ್ಣಾಯ, ಸೂಡ ಲಕ್ಷ್ಮೀನಾರಾಯಣ ಭಟ್, ಡಾ| ಎಂ. ರಾಮ, ಮಲ್ಲಿಕಾದೇವಿ, ಡಾ| ಕೆ. ವಿ. ಜಲಜಾಕ್ಷಿ, ಟಿ. ರಾಮಕೃಷ್ಣ ಶೆಟ್ಟಿ ಇವರೆಲ್ಲ ತುಳು ಭಾಷೆಯ ಕುರಿತು ಗ್ರಂಥಗಳನ್ನು, ಸಂಪ್ರಬಂಧನಗಳನ್ನು ಬರೆದಿದ್ದಾರೆ.

ಎಂ. ಜಾನಕಿ ಅವರ 'ತಿರ್ಗಾಟದ ತಿರ್ಲ್', ಡಿ. ಸುವಾಸಿನಿ ಶೆಟ್ಟಿ ಅವರ 'ದೇಸಾಂತ್ರೊಡು' ಇಂಥ ಒಂದೆರಡು ಪ್ರವಾಸ ಸಾಹಿತ್ಯ ಕೃತಿಗಳು ತುಳುವಿನಲ್ಲಿ ಪ್ರಕಟವಾಗಿವೆ. ಕೆದಂಬಾಡಿ ಜತ್ತಪ್ಪ ರೈಗಳು ಮುದ್ದಣ್ಣನ ಹಳಗನ್ನಡ ಕೃತಿ 'ಶ್ರೀರಾಮಾಶ್ವಮೇಧ'ವನ್ನು ತುಳುವಿಗೆ ಭಾಷಾಂತರಿಸಿದ್ದಾರೆ. ತುಳುಸಾಹಿತ್ಯ ಅಕಾಡೆಮಿಯ 'ಮರೆಯಬಾರದ ತುಳುವರು' ಮಾಲೆಯಲ್ಲಿ ಅ. ಬಾಲಕೃಷ್ಣ ಶೆಟ್ಟಿ ಪೊಳಲಿ ಅವರ 'ಎನ್. ಎ. ಶಿನಪ್ಪ ಹೆಗ್ಗಡೆ', ಮುರಳೀಧರ ಉಪಾಧ್ಯ ಹಿರಿಯಡಕ ಅವರ 'ಎಸ್. ಯು. ಪಣಿಯಾಡಿ', ಡಾ| ಪದ್ಮನಾಭ ಕೇಕುಣ್ಣಾಯರ 'ರೆವರೆಂಡ್ ಆಗಸ್ಟ್ಮೇನರ್', ಕೆ. ಲೀಲಾವತಿ ಅವರ 'ದೂಮಪ್ಪ ಮಾಸ್ಟರ್', ನರೇಂದ್ರ ರೈ ದೇರ್ಲ ಅವರ 'ನವಯುಗದ ಹೊನ್ನಯ್ಯ ಶೆಟ್ರ್', ಎಂ. ಪ್ರಭಾಕರ ಜೋಶಿಯವರ 'ಮಂದಾರ ಕೇಶವ ಬಟ್ರ್', ಕಯ್ಯಾರ ಕಿಞ್ಞಣ್ಣ ರೈ ಟವರ 'ನಾರಾಯಣ ಕಿಲ್ಲೆ' - ಇಂಥ ಹಲವು ಜೀವನ ಚರಿತ್ರೆಯ ಕೃತಿಗಳು ಪ್ರಕಟಗೊಂಡಿವೆ. ಮ. ವಿಠಲ ಪುತ್ತೂರು ಅವರ 'ಪನಿಪನಿ ತುಡರ್', ಎಸ್. ಬಿ. ಕುಂದರ್ ಅವರ 'ಪಿರ ತಿಗರ್್ ತೂನಗ' ಇಂಥ ಕೆಲವು ಗಮನಾರ್ಹ ಗದ್ಯಕೃತಿಗಳು ಪ್ರಕಟವಾಗಿವೆ.
 

TULU DRAMA

ತುಳು ನಾಟಕ

ಮುರಳೀಧರ ಉಪಾಧ್ಯ ಹಿರಿಯಡಕ

ತುಳುನಾಡಿನಲ್ಲಿ ಯಕ್ಷಗಾನ ಶತಮಾನಗಳಿಂದ ಜನಪ್ರಿಯ ರಂಗಕಲಾಮಾಧ್ಯ,ಮವಾಗಿ ಬೆಳೆದಿದೆ. ಸುಮಾರು ಐದುದಶಕಗಳಿಂದ ತುಳುನಾಟಕ ಜನಪ್ರಿಯವಾಗಿದೆ. ಮಾಧವ ತಿಂಗಳಾಯರ (1913-1934) 'ಜನಮಲರ್್' (1933) ತುಳುವಿನ ಪ್ರಥಮ ಪ್ರಕಟಿತ ನಾಟಕ. ಪ್ಲೇಗು, ಮಾರಿರೋಗಗಳು ಹಾಗೂ ಮೂಢನಂಬಿಕೆಗಳಿಂದ ತುಂಬಿದ್ದ ಇಪ್ಪತ್ತನೆಯ ಶತಮಾನದ ಆರಂಭದ ದಶಕಗಳ ತುಳು ಸಮಾಜವನ್ನು ತಿಂಗಳಾಯರು ಈ ನಾಟಕದಲ್ಲಿ ಚಿತ್ರಿಸಿದ್ದಾರೆ. ಕೆಮ್ತೂರು ದೊಡ್ಡಣ್ಣ ಶೆಟ್ಟರು ಹಾಗೂ ಕೆ. ಎನ್. ಟೈಲರ್ ತುಳು ನಾಟಕಗಳನ್ನು ಜನಪ್ರಿಯಗೊಳಿಸಿದರು. ನಾಟಕ ಕಂಪೆನಿಯೊಂದನ್ನು ನಡೆಸುತ್ತಿದ್ದ ದೊಡ್ಡಣ್ಣ ಶೆಟ್ಟರ ಹಲವು ನಾಟಕಗಳಲ್ಲಿ 'ಮುತ್ತನ ಮದ್ಮೆ', ಕಲ್ದಿನಕ್ಲೆ ಕಲ್ಪ', 'ಬೊಂಬಾಯಿದ ಕಂಡನೆ' - ನಾಟಕಗಳು ಜನಪ್ರಿಯವಾಗಿದ್ದವು. 'ಮುತ್ತನ ಮದ್ಮೆ' ಸಾವಿರಾರು ಪ್ರದರ್ಶನಗಳನ್ನು ಕಂಡಿತ್ತು. ದೊಡ್ಡಣ್ಣ ಶೆಟ್ಟರ ನಾಟಕಗಳ ಹಾಡುಗಳು ಜನರ ನಾಲಿಗೆಯಲ್ಲಿ ನಲಿದಾಡುತ್ತಿದ್ದವು.

ಜನಪ್ರಿಯ ಸಿನಿಮಾಗಳ ಅನುಕರಣೆ, ಸರಳೀಕೃತ ಪಾತ್ರಗಳು, ಲೈಂಗಿಕ ಶ್ಲೇಷೆಯ ಸಂಭಾಷಣೆಗಳು, ಡಜನ್ಗಟ್ಟಲೆ ಹಾಡುಕುಣಿತಗಳು, ಅತಿರೇಕದ ಹಾಸ್ಯ - ಇವು ಜನಪ್ರಿಯ ತುಳು ನಾಟಕಗಳ ಸಾಮಾನ್ಯ ಲಕ್ಷಣಗಳು. ನೂರಾರು ಪ್ರದರ್ಶನಗಳನ್ನು ಕಾಣುವ 'ಒರಿಯಡ್ದೊರಿ ಅಸಲ್'ನಂಥ ತುಳುನಾಟಕಗಳು ನಗರದ ಕೆಳಮಧ್ಯಮ ವರ್ಗದ ನೋವು ನಲಿವುಗಳನ್ನು ಚಿತ್ರಿಸುವ ಪ್ರಹಸನಗಳು. ಆನಪ್ರಿಯ ತುಳು ನಾಟಕಗಳು ಅಗ್ಗದ ಮನರಂಜನೆ ನೀಡುವ ಕೃತಿಗಳೆಂದು ಅವುಗಳನ್ನು ವಿಮಶರ್ಿಸದೆ ದೂರಸರಿಸುವುದು ಸರಿಯಲ್ಲ. ಈ ನಾಟಕಗಳು ಯಾಕೆ ಜನಪ್ರಿಯ ಎಂದು ಗಂಭೀರವಾಗಿ ಅಧ್ಯಯನ ಮಾಡಬೇಕಾಗಿದೆ. ವಿಮಶರ್ೆಯ ಆಧುನಿಕೋತ್ತರವಾದ ಗಂಭೀರ ಮತ್ತು ಜನಪ್ರಿಯ ಎಂಬ ವಗರ್ೀಕರಣವನ್ನೇ ನಿರಾಕರಿಸುತ್ತದೆ.

ಎಂ. ಎಸ್. ಇಬ್ರಾಹಿಂ, ಮಚ್ಛೇಂದ್ರನಾಥ್ ಪಾಂಡೇಶ್ವರ, ಪಿ. ಎಸ್. ರಾವ್ ಇವರು ನೂರಾರು ನಾಟಕಗಳನ್ನು ಬರೆದಿದ್ದಾರೆ. ಪ್ರದರ್ಶನಗೊಂಡ ಹೆಚ್ಚಿನ ಜನಪ್ರಿಯ ನಾಟಕಗಳು ಮುದ್ರಣಗೊಳ್ಳುವುದಿಲ್ಲ. ಆದರೆ ಪಿ. ಎಸ್. ರಾವ್ ಅವರ ಮೂವತ್ತಾರು ನಾಟಕಗಳು ಪ್ರಕಟಗೊಂಡಿವೆ. ಎಮ್. ಬಿ. ಸಾಲ್ಯಾನ್, ಕೆ. ಕೆ. ಗಟ್ಟಿ, ಗಂಗಾಧರ ಕಿದಿಯೂರು10, ಡಾ| ಸಂಜೀವ ದಂಡಕೇರಿ, ರಾಮ ಕಿರೋಡಿಯಾನ್ ಮತ್ತಿತರ ನೂರಾರು ನಾಟಕಕಾರರು ಜನಪ್ರಿಯ ನಾಟಕಗಳನ್ನು ಬರೆದಿದ್ದಾರೆ.

ಅಮೃತ ಸೋಮೇಶ್ವರ, ಡಿ. ಕೆ. ಚೌಟ, ಕೈಥರೀನ್ ರಾಡ್ರಗಸ್ ಹಾಗೂ ಮನು ಇಡ್ಯ ಜನಪ್ರಿಯತೆಯ ಹುಚ್ಚು ಹೊಳೆಯ ವಿರುದ್ಧ ಈಜಿದ ಮುಖ್ಯ ನಾಟಕಕಾರರು ಅಮೃತ ಸೋಮೇಶ್ವರ ಅವರು 'ಗೋಂದೊಳು' (1980), 'ರಾಯರಾವುತೆ' (1982), 'ಪುತ್ತೂರು ಪುತ್ತೊಳಿ' (1984) ಮತ್ತಿತರ ಹಲವು ನಾಟಕಗಳನ್ನು ಬರೆದಿದ್ದಾರೆ. ಬದುಕಿದ್ದಾಗ ಶೋಷಿಸಿ ಸತ್ತನಂತರ ಪೂಜಿಸಿ ಸಾಮಾಜಿಕ ಕ್ರೌರ್ಯ 'ಗೋಂದೊಳು' ನಾಟಕದ ವಸ್ತು. 'ರಾಯರಾವುತೆ' (1982) ಕನ್ನಡ ಜನಪದ ಕಾವ್ಯಗಳ ಕುಮಾರ ರಾಮನಂತಿದ್ದಾನೆ. 'ಪುತ್ತೂರ್ದ ಪುತ್ತೊಳಿ' (1984) ಬೈಲ್ಜಿಯನ್ ಕವಿ ಮಾರಿಸ್ ಮೆಟರ್ಲಿಂಕನ್ನ 'ಮೊನ್ನವನ್ನ'ದ ರೂಪಾಂತರ. ತುಳು ಜನಪದ ಸಾಹಿತ್ಯದ 'ಪಾಡ್ದನ'ವೊಂದರ ಆಧಾರದಿಂದ ಬರೆದಿರುವ ನಾಟಕ - 'ತುಳುನಾಡ ಕಲ್ಕುಡೆ' (1989). ಈ ನಾಟಕ ಊಳಿಗಮಾನ್ಯ ಸಮಾಜದ ಕ್ರೌರ್ಯವನ್ನು ಪ್ರಶ್ನಿಸುತ್ತದೆ, ಪ್ರತಿಭಟಿಸುತ್ತದೆ. ಅಮೃತರ ನಾಟಕಗಳಲ್ಲಿ ತುಳುನಾಡಿನ ಪ್ರಾದೇಶಿಕ ರಂಗು, ತುಳುಭಾಷೆಯ ಅಂತಃಸತ್ವ ತುಂಬಿದೆ.

'ಪಿಲಿಪತ್ತಿ ಗಡಸ್' (1997) ನಾಟಕದ ಡಿ. ಕೆ. ಚಔಟ (ಕಾವ್ಯನಾಮ - ಆನಂದಕೃಷ್ಣ) ತನ್ನ ಮೊದಲ ನಾಟಕದಿಂದ ನಿದರ್ೇಶಕರ, ವಿಮರ್ಶಕರ ಗಮನ ಸೆಳೆದಿದ್ದಾರೆ. ತುಳುನಾಡಿನ ಅವಿಭಕ್ತ ಕುಟುಂಬದ 'ಗುತ್ತಿನ ಮನೆ'ಯೊಂದು ಅದರ ಯಜಮಾನನ ಕಾಮುಕತೆಯಿಂದಾಗಿ ಅವನತಿಯತ್ತ ಸಾಗುವುದು ಈ ನಾಟಕದ ವಸ್ತು. ಘಟನೆಗಳನ್ನು ಒಂದೇ ದಿನ ನಡೆದಂತೆ ಸಂಯೋಜಿಸಿರುವುದರಲ್ಲಿ ನಾಟಕಕಾರರ ಕೌಶಲ ಕಾಣಿಸುತ್ತದೆ. ಕ್ಯಾಥರೀನ್ ರಾಡ್ರಿಗಸ್ ಅವರ 'ಸಿರಿತುಪ್ಪೆ' (1995)ಯಲ್ಲಿ ಹತ್ತು ರೇಡಿಯೋ ನಾಟಕಗಳಿವೆ. ತುಳು ಪಾಡ್ದನಗಳ ಆಧಾರದಿಂದ ಬರೆದ ಈ ಸಂಕಲನದ ಕೆಲವು ನಾಟಕಗಳು 'ಕಾಲಕ್ಕೆ ತಕ್ಕ ಕೋಲ' ಎಂಬ ತುಳು ಗಾದೆಯನ್ನು ನೆನಪಿಸುತ್ತವೆ. ಪಾಡ್ದನದ ವಸ್ತುಗಳಿಗೆ ಕಾಲಕ್ಕೆ ತಕ್ಕ ಹೊಸ ರೂಪ ಕೊಡುವುದರಲ್ಲಿ ಕ್ಯಾಥರೀನ್ ರಾಡ್ರಿಗಸ್ ಯಶಸ್ವಿಯಾಗಿದ್ದಾರೆ. ಜಾತಿ. ಧರ್ಮದ ಬೇಲಿಯನ್ನು ದಾಟುವ ಬಗ್ಗೆ ಚಿಂತಿಸುವ ಹೆಂಗಸರು 'ಬೇಲಿ' ನಾಟಕದಲ್ಲಿದ್ದಾರೆ. ಮನು ಇದ್ಯರ 'ತ್ರಿಶಂಕು' (1992) ನಾಟಕದ ನಾಯಕ - ಗುರ್ಕಾರ - ಕೇಡಿನ ಸಾಕಾರರೂಪದಂತಿದ್ದಾರೆ. ದುಷ್ಟತನದ ವಿರುದ್ಧದ ಜನಸಾಮಾನ್ಯರ ಹೋರಾಟವನ್ನು ಈ ನಾಟಕ ಚಿತ್ರಿಸುತ್ತದೆ. ಕುದ್ಕಾಡಿ ವಿಶ್ವನಾಥ ರೈ ಅವರ 'ಸಂಕ್ರಾನ್ತಿ' (1981) ಧನಿ - ಒಕ್ಕಲು ಸಂಬಂಧದ ಒಳ ಸುಳಿಗಳನ್ನು ಚಿತ್ರಿಸುತ್ತದೆ.

ಮಂದಾರ ಕೇಶವ ಭಟ್ಟರು ಭಾಸನ 'ಸ್ವಪ್ನವಾಸವದತ್ತ' ನಾಟಕವನ್ನು 'ಕನತ್ತಪೊಣ್ಣು' ಎಂದು ಭಾಷಾಂತರಿಸಿದ್ದಾರೆ. ಕೆದಂಬಾಡಿ ಜತ್ತಪ್ಪ ರೈ ಅವರು ಕುವೆಂಪು ಅವರ 'ಯಮನ ಸೋಲು', ರವೀದ್ರನಾಥ ಠಾಗೋರ್ ಅವರ 'ಕಾಬೂಲಿವಾಲಾ' ನಾಟಕಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕೆದಂಬಾಡಿಯವರ 'ಸೂದ್ರೆ ಏಕಲವ್ಯೆ' - ಕುವೆಂಪು ಅವರ 'ಬೆರಳ್ಗೆ ಕೊರಳ್', ಗೋವಿಂದ ಪೈಗಳ 'ಹೆಬ್ಬೆರಳು' ಈ ಎರಡೂ ಕನ್ನಡ ನಾಟಕಗಳಿಗೆ ಋಣಿಯಾಗಿದೆ. ಅಮೃತ ಸೋಮೇಶ್ವರ ಅವರ 'ಜೋಕುಮಾರ ಸ್ವಾಮಿ' (ಕನ್ನಡ ಮೂಲ - ಚಂದ್ರಶೇಖರ ಕಂಬಾರ), ಪ್ರೇಮಾನಂದ ಕಿಶೋರ್ ಅವರ - 'ಯಯಾತಿ' (ಕನ್ನಡ ಮೂಲ - ಗಿರೀಶ್ ಕಾರ್ನಡ್), ಎಚ್ಕೆ ಕಕರ್ೇರಾ ಅವರ 'ಪುರುಷೆ' (1998, ಮೂಲ ಮರಾಠಿ - ಜಯವಂತ ದಳ್ವಿ) ಇವು ಅಧ್ಯಯನ ಯೋಗ್ಯ ಭಾಷಾಂತರ ನಾಟಕಗಳು.
 

TULU POETRY

ತುಳು ಕಾವ್ಯ
ಮುರಳೀಧರ ಉಪಾಧ್ಯ ಹಿರಿಯಡಕ

ಎಂ. ಆರ್. ಸುಬ್ರಹ್ಮಣ್ಯ ಶಾಸ್ತ್ರಿಯವರ 'ತುಳು ಕನ್ಯೋಪದೇಶ' (1916) ಕೃತಿಗೆ ಆಧುನಿಕ ತುಳು ಕಾವ್ಯ ಚರಿತ್ರೆಯಲ್ಲಿ ಐತಿಹಾಸಿಕ ಮಹತ್ತ್ವವಿದೆ. ಇದು ಕನ್ನಡದ ಸಂಚಿಯ ಹೊನ್ನಮ್ಮನ 'ಹದಿಬದೆಯ ಧರ್ಮ'ದ ಮಾದರಿಯ ಕೃತಿ.
ಸ್ವಾತಂತ್ರ್ಯ ಹೋರಾಟಗಾರ, ಕವಿ, ಎಸ್. ನಾರಾಯಣ ಶೆಟ್ಟಿ ಕಿಲ್ಕೆ (1916) ಕೃತಿಗೆ ಎಸ್. ಯು. ಪಣಿಯಾಡಿಯವರ ತುಳು ಚಳವಳದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಕಿಲ್ಕೆಯವರು ತನ್ನ 'ಕಾನಿಗೆ' (1932) ಸಂಕಲನದಲ್ಲಿ ತುಳು ಕಾವ್ಯದಲ್ಲಿ ಸಂಸ್ಕೃತ ಭೂಯಿಷ್ಠವಲ್ಲದ ತುಳುವನ್ನು ಬಳಸಬೇಕು ಎಂಬ ಕುರಿತು ಎಚ್ಚರ ವಹಿಸಿದ್ದಾರೆ. ತುಳುನಾಡಿನ ಸಾಂಸ್ಕೃತಿಕ ವಿವರಗಳಿಂದ ತುಂಬಿರುವ 'ಮಂಡಲ-ಕಾನಿಗೆ' ಎಂಬ ಸುದೀರ್ಘ ಹಾಡು ತುಳುನಾಡ ನಾಡಗೀತೆಯಂತಿದೆ. ಕೆಲವು ಒಳ್ಳೆಯ ಶಿಶುಗೀತೆ-ಗಳನ್ನು ಕಿಲ್ಲೆಯವರು ಬರೆದಿದ್ದಾರೆ. ವಾದಿರಾಜ ಸ್ವಾಮಿಗಳ 'ದಶಾವತಾರ ಹಾಡು' ಇದನ್ನು 'ಪತ್ತವತಾರ'ವಾಗಿ ರೂಪಾಂತರಿಸುವುದರಲ್ಲಿ ಕಿಲ್ಲೆಯವರ ಭಾಷಾಧೋರಣೆಯನ್ನು ಗುರುತಿಸಬಹುದು.

ವಾದಿರಾಜ ಸ್ವಾಮಿ -
 'ಚಕ್ರವತರ್ಿ ಬಲಿಟ್ಟ, ಭೂಮಿ ನೆಟ್ಟಿನೇರ್ಗಾ
 ತತ್ರದಾರಿ ಅದಿತಿಪುತ್ರೆ ವಾಮನತ್ತಗಾ |

ಕಿಲ್ಲೆ -
 'ಚದುವು ಪಾತೆರೊಂದು ಮನ್ನ್ ನಟ್ಟಿನೇರ್ಗೆ
 ಪುದರ್ಗೊಂಜಿ ಗುಬ್ಬುದಾರ್ ಕುಂಟಮಾಣಿಗೆ |

'ತುಳುವಾಲ ಬಲಿಯೇಂದ್ರ' (1929)ದ ಪೊಳಲಿ ಶೀನಪ್ಪ ಹೆಗ್ಡೆ, 'ಕನ್ನಡಕೊ' ಸಂಕಲನದ ಎಂ. ಸಿ. ವಿ. ಶಮರ್ಾ, 'ಪತಿತೋದ್ಧರಣ ಪದ್ಯಾವಳಿ'ಯ ಎಚ್. ನಾರಾಯಣ ರಾವ್, 'ತುಳು ನೀತಿ ಪದ್ಯೊಲು' ಬರೆದ ಬಡಕಬೈಲು ಪರಮೇಶ್ವರಯ್ಯ, 'ತುಳು ಪದ್ಯಾವಳಿ'ಯ (1930) ಬಿ. ಮೋನಪ್ಪ ತಿಂಗಳಾಯ, ತುಳು ಪದ್ಯ ಮಾಲಿಕೆಯ (1933), ಕೆ. ಗಂಗಾಧರ ರಾಮಚಂದ್ರ, 'ಕುಂಬಳೆ ಸೀಮೆತ ಚರಿತ್ರೆ ಮತ್ತು ಸ್ತುತಿ ಪದ್ಯೊಲು' ಬರೆದ ದಾಮೋದರ ಪುಣಿಂಚತ್ತಾಯ, ಕೊರಡ್ಕಲ್ ಶ್ರೀನಿವಾಸರಾಯರು, ಉಡುಪಿ ಶ್ರೀಕಾಂತಾಚಾರ್ಯ, ಪಿ. ಸುಬ್ರಹ್ಮಣ್ಯ ಶಾಸ್ತ್ರಿ, ಕೆ. ಹೊನ್ನಯ್ಯ ಶೆಟ್ಟಿ, ಮುದ್ರಾಡಿ ಜನಾರ್ದನ ಆಚಾರ್ಯ, 'ಸತ್ಯದ ಬಿತ್ತೊ'ದ ಬಾಡೂರ ಜಗನ್ನಾಥ ರೈ, 'ತುಳು ಭಜನಾವಳಿ'ಯ ಸೀತಾನದಿ ಗಣಪಯ್ಯ ಶೆಟ್ಟಿ - ಇವರೆಲ್ಲ ತುಳು ಚಳವಳದ ಸಂದರ್ಭದಲ್ಲಿ ತುಳು ಕಾವ್ಯವನ್ನು ಸಮೃದ್ಧಗೊಳಿಸಿದರು. ಗಾಂಧೀವಾದಿ ನರ್ಕಳ ಮಾರಪ್ಪ ಶೆಟ್ಟರ 'ಅಮಲ್ ದೆಪ್ಪಡೆ' (1929) 'ಪೊಲರ್್ಕಂಟ್' (1930) ಸಂಕಲನಗಳಲ್ಲಿ ಸಮಾಜಸುಧಾರಣೆಯ ಉತ್ಸಾಹದಿಂದ ಬರೆದ ಎರಡು ಸೊಗಸಾದ ನೀತಿಪದ್ಯಗಳಿವೆ.

'ತುಳುವಿನಲ್ಲಿ ಏನಿದೆ?' ಎಂದು ಪ್ರಶ್ನಿಸುವವರಿಗೆ, 'ತುಳುವಿನಲ್ಲಿ ಮಂದಾರ ರಾಮಾಯಣ ಇದೆ' ಎಂದು ತುಳುವರು ಅಭಿಮಾನದಿಂದ ಉತ್ತರಿಸಬಲ್ಲರು. ಮಂದಾರ ಕೇಶವಭಟ್ಟರ (1918-1997) 'ಮಂದಾರ ರಾಮಾಯಣ' ತುಳುವಿನಲ್ಲಿ ಮಹಾಕಾವ್ಯ - ಕೇಶವ ಭಟ್ಟರು 'ಬೃಹತ್ಕಥೆ'ಯ ಗುಣಾಢ್ಯವನ್ನು ನೆನಪಿಸುವ ಕವಿ.

'ಮಂದಾರ ರಾಮಾನಯಣ'ದಲ್ಲಿ ಕವಿ ಕೆಲವು ಮುಖ್ಯ ಬಬಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಇಲ್ಲಿಯ ವಾಲ್ಮೀಕಿ ಒಬ್ಬ ಮಲೆ ಕುಡಿಯವನಾಗಿದ್ದನು. ಕ್ರೌಂಚವಧೆಯ ಪ್ರಸಂಗದ ಬದಲು ವಾಲ್ಮೀಕಿ ಕನಸಿನಲ್ಲಿ ಮಾನಸ ಪುತ್ರಿಯೊಬ್ಬಳ್ಳನ್ನು ಕಾಣುವ ಪ್ರಸಂಗ ಇದೆ.  ಮಂಥರೆಯ ಪ್ರಣಯ ಭಿಕ್ಷೆಯನ್ನು ರಾಮ ತಿರಸ್ಕರಿಸುತ್ತಾನೆ. ಮಥುರೆಯ ಚಾಡಿ ಮಾತು ಕೇಳಿದ ಕೈಕೇಯಿಯ ಹಠದಿಂದಾಗಿ ದಶರಥನ ಕನಸುಗಳು ಭಗ್ನಗೊಳ್ಳುತ್ತವೆ. ಮಲೆಕುಡಿಯ ಪಂಡಿತನ ವೇಷದಲ್ಲಿ ರಾವಣ, ಜಿಂಕೆಯ ವೇಷದಲ್ಲಿ ಶೂರ್ಪನಖಿ ಸೀತಾಪಹರಣಕ್ಕಾಗಿ ಬರುತ್ತಾರೆ. ಹನುಮಂತ ಈಜಿಕೊಂಡು ಕಡಲನ್ನು ದಾಟುತ್ತಾನೆ. ಸೀತೆಯನ್ನು ಭೇಟಿಯಾದ ವಿಭೀಷಣ - ಸರಮೆ ದಂಪತಿಗಳನ್ನು ರಾವಣ ಬಂಧನದಲ್ಲಿಡುತ್ತಾನೆ. ಸುಗ್ರೀವನ ಸೈನಿಕರು ಅಪ್ಪಣ್ಣನ ದೋಣಿಗಳಲ್ಲಿ ಕಡಲನ್ನು ದಾಟುತ್ತಾರೆ. ರಾವಣ ಕುಂಭಕರ್ಣರಿಗೆ ಮದ್ದು ಹಾಕಿಸಿ, ಅವನನ್ನು ಅತಿನಿದ್ದೆಯ ಬೆಪ್ಪನನ್ನಾಗಿ ಮಾಡಿದ್ದಾನೆ. ಕುಂಭಕರ್ಣನ ಬಂಧನವಾದ ಮೇಲೆ ರಾಮ ಅವನಿಗೆ ತೂಟಣ್ಣ ಪಂಡಿತರಿಂದ ಚಕಿತ್ಸೆ ಮಾಡಿಸುತ್ತಾನೆ. ಯುದ್ಧದಲಲ್ಲಿ ರಾವಣ ಸತ್ತಮೇಲೆ, ರಾಮ ಕುಂಭಕರ್ಣರನ್ನು ಅರಸನನ್ನಾಗಿ ಮಾಡುತ್ತಾನೆ. ಅಂಗದನ ಮದುವೆ ವಿಭೀಷಣನ ಮಗಳು ಸೋಮಕ್ಕನೊಡನೆ ನಡೆಯುತ್ತದೆ. ರಾಮ, ಸೀತೆ, ಲಕ್ಷ್ಮಣರೊಡನೆ ಶಬರಿ ಹಾಗೂ ಗುಹ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಬರುತ್ತಾರೆ. ಮಥುರೆಯ ತಾಯಿಯಾದ ಶಬರಿ ಮಗಳ ಕೃತ್ಯಕ್ಕೆ ಹೇಸಿ ಪಂಪಾಕ್ಷೇತ್ರಕ್ಕೆ ಹೋಗಿ ದೇವರ ಸೇವೆ ಮಾಡುತ್ತಿದ್ದಳೆಂದು ಕೊನೆಯಲ್ಲಿ ತಿಳಿಯುತ್ತದೆ.

'ಮಂದಾರ ರಾಮಾಯಣ' ವಾಸ್ತವವಾದ ಪ್ರಭಾವದಿಂದ ಪುರಾಣಭಂಜನೆಯ ಮಾರ್ಗ ಹಿಡಿದಿರುವ ಆಧುನಿಕ ಕಾವ್ಯ - ಬೈಗಳ ಭಾಷೆ, ಸಂಭಾಷಣೆ, ಯುದ್ಧವರ್ಣನೆಗಳಲ್ಲಿ 'ಮಂದಾರ ರಾಮಾಯಣ' ತುಳುನಾಡಿನ ರಾಮಾಯಣ-ವಾಗಿದೆ. ಜಾತಿಗಳು ಮಾತ್ರವಲ್ಲ, ಭಾಷೆಗಳೂ ಸಂಸ್ಕೃತಾನುಸರಣ ಮಾಡುತ್ತವೆ. ವಸ್ತುವಿನ ಆಯ್ಕೆಗಾಗಿ ಸಂಸ್ಕೃತಾನುಸರಣ ಮಾಡಿ ಅನಂತರ ನಿರೂಪಣೆಯಲ್ಲಿ 'ದೇಸಿಯೊಳ್ ಪುಗುವುದು' ಮಂದಾರ ರಾಮಾಯಣದ ವೈಶಿಷ್ಟ್ಯ. ಜಾನಪದ ಕಾವ್ಯಗಳ ('ಪಾಡ್ದನಗಳು') ಸತ್ವವನ್ನು ಹೀರಿಕೊಂಡು, ಸಮಕಾಲೀನ ತುಳುವಿಗೆ ಹತ್ತಿರವಾಗಿರುವ ಕೇಶವ ಭಟ್ಟರ ಶೈಲಿಯಲ್ಲಿ ಭಾಷೆಯನ್ನು ಅತ್ಯುನ್ನತಿಯತ್ತ ಒಯ್ಯುವ ಪ್ರತಿಭಾಶಾಲಿಯ ಮುನ್ನೋಟವಿದೆ. ಮಹಾಪರಂಪರೆಯ ರಾಮಾಯಣ-ವನ್ನು, ಕಿರುಪರಂಪರೆಯ ತುಳು ಭಾಷೆಯಲ್ಲಿ ಪುನರ್ ಸೃಷ್ಟಿಸುವುದ-ರಲ್ಲಿ ತಮ್ಮ ಕಾಲದ ಈ ಮಹಾಕವಿ ಯಶಷ್ವಿಯಾಗಿದ್ದಾರೆ. 'ಜಾಗಂಟೆ' (1991) ಸಂಕಲನದಲ್ಲಿ-ರುವ 'ಏಕಿನಿಕಣರ್ೆ' ಹಾಗೂ 'ಬೀರದ ಬೊಲ್ಪು' (1997) ಮಂದಾರ ಕೇಶವ ಭಟ್ಟರ ಕಥನ ಕವನಗಳು. ಕೃಷ್ಣನ ಬಾಲಲೀಲೆಗಳನ್ನು ವಣರ್ಿಸುವ 'ಬೀರದ ಬೊಲ್ಪು', ಸಾಂಗತ್ಯ, ಚೌಪದಿ, ಲಲಿತ ರಗಳೆ, ದ್ವಿಪದಿ - ಹೀಗೆ ಛಂದೋವೈವಿಧ್ಯದಿಂದ ಕೂಡಿರುವ ಸಾರ್ಥಕ ಕೃತಿ.

'ಆಲಡೆ' (1983), 'ಕುಡಲ ಮಲ್ಲಿಗೆ' (1998) ಸಂಕಲನಗಳ ಕವಿ ವೆಂಕಟರಾಜ ಪುಣಿಂಚತ್ತಾಯರು ಕೆಲವು ಒಳ್ಳೆಯ ಭಾವಗೀತೆಗಳನ್ನೂ ಬರೆದಿದ್ದಾರೆ. 'ಆಲಡೆ', 'ಉಂದೆನಾ ಬೇತನಾ', 'ಪಾರ್ತನೊ', ಬೊಳ್ಳಾರ ಮಾಣಿಕ', 'ಪಾವೆ ಬಂಡಿ', ಇವು ಪುಣಿಂಚತ್ತಾಯರ ಚಿಂತನಪರ ಕವನಗಳು. ಇವು ಅವರ ಪ್ರಾತಿನಿಧಿಕ ಕವನಗಳೂ ಹೌದು. 'ಆಲಡೆ' ಕವನದಲ್ಲಿ ಆದರ್ಶ ಭೂತಕಾಲವೊಂದನ್ನು ಕಳೆದುಕೊಂಡದ್ದರ ಕುರಿತ ವಿಷಾದ ಕಾಣಿಸುತ್ತದೆ. 'ಉಂದೆನಾ ಬೇತೆನಾ' ಕವನದಲ್ಲಿ ಕವಿ, ತುಳುನಾಡು ಒಂದು ಆದರ್ಶ ರಾಜ್ಯವಾಗಿತ್ತು ಎನ್ನುತ್ತಾರೆ. ತುಳುನಾಡಿನವರ ಸಾಂಸ್ಕೃತಿಕ ವಿಸ್ಮೃತಿಯನ್ನು ಕುರಿತು ವಿಷಾದಿಸುವ ಕವಿ, 'ಇಲ್ಲಿನ ಸಂಗತಿಗಳನ್ನು ತಿಳಿಯಲು ಜರ್ಮನಿಗೋ, ಇಟೆಲಿಗೋ ಹೋಗಬೇಕಾದೀತು' ಎಂದು ಎಚ್ಚರಿಸುತ್ತಾರೆ. ಪುಣಿಂಚತ್ತಾಯರ ಕವನಗಳಲ್ಲಿ ಪಾಂಡಿತ್ಯ ಪ್ರದರ್ಶನವಿಲ್ಲ. 'ತುಳುವಪ್ಪೆ'ಯ ಬಗೆಗಿನ ಭಕ್ತಿಯ ಅತಿರೇಕವೂ ಇಲ್ಲ. ತುಳುನಾಡಿನ ಭೂತಕಾಲ ಚೆನ್ನಾಗಿತ್ತು ಎಂದು ನಂಬುವ ಈ ಆಸ್ತಿಕ ಕವಿ ವರ್ತಮಾನ ಕಾಲದ ಸಾಂಸ್ಕೃತಿಕ ವೈರುಧ್ಯಗಳಿಗೆ ಕುರುಡಾಗಿಲ್ಲ.

'ತಂಬಿಲ' (1984) ಹಾಗೂ 'ರಂಗಿತ' (1987) ಇವು ಅಮೃತ ಸೋಮೇಶ್ವರ ಅವರ ಕವನ ಸಂಕಲನಗಳು. ಇವರು ಕೆಲವು ಚೆಲುವಿನ ಭಾವಗೀತೆಗಳನ್ನು, ಪ್ರಣಯಗೀತೆಗಳನ್ನು ಬರೆದಿದ್ದಾರೆ. 'ಭೂತಾರಾಧನೆಯ ಸಾಂಸ್ಕೃತಿಕ ಹೆಚ್ಚಳವನ್ನು ಗುರುತಿಸುವಾಗ ಕೇವಲ ಅದರ ಉದಾತ್ತ ಮುಖವನ್ನು ಮಾತ್ರ ನೋಡದೆ ಅದರೊಳಗಿರುವ ಸ್ವಾರ್ಥ ಹಾಗೂ ಶೋಷಣೆಯ ಮುಖವನ್ನು ನೋಡಬೇಕಾಗುತ್ತದೆ', ಎನ್ನುವ ಕವಿ ಅಮೃತ ಸೋಮೇಶ್ವರ ಅವರು ತುಳುನಾಡಿನ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುತ್ತಾರೆ.

'ಬಯ್ಯಮಲ್ಲಿಗೆ' (1981) ಸಂಕಲನದ ಪಾ. ವೆಂ. ಆಚಾರ್ಯರ ಕವನಗಳು ತಮ್ಮ ವೈಚಾರಿಕತೆಯಿಂದ ಗಮನ ಸೆಳೆಯುತ್ತವೆ. 'ಗೋಪಿ', 'ಬಡವು', 'ಅರ್ತ', 'ಬಯ್ಯಮಲ್ಲಿಗೆ' ಸಂಕಲನದ ಮುಖ್ಯ ಕವನಗಳು. ಪುರಾಣಗಳ ಕನಸಿನ ಲೋಕಕ್ಕೂ ನಮ್ಮ ದಿನನಿತ್ಯದ ಬದುಕಿಗೂ ವ್ಯತ್ಯಾಸವಿದೆ. 'ಭಾಗವತ'ದ ಗೋಪಿ ವಸ್ತ್ರಾಪ-ಹರಣ ಪ್ರಸಂಗವನ್ನು ನೆನಪಿಸುವ 'ಗೋಪಿ' ಕವನದಲ್ಲಿ ಗೋಪಿ ಎಷ್ಟು ಕಾದರೂ ಕೃಷ್ಣ ಬರುವುದೇ ಇಲ್ಲ. 'ಅರ್ತ' ಕವನದಲ್ಲಿ ಆಚಾರ್ಯರು ಬದುಕಿನ ಅರ್ಥವೇನೆಂದು ಚಿಂತಿಸುತ್ತಾರೆ. ಪಾ. ವೆಂ. ಆಚಾರ್ಯರ 'ಆಯೆ ಬತ್ತೆ ಉಂಬೆ ಬತ್ತೆ' ತುಳುವಿನ ಒಂದು ಅಸಾಧಾರಣ ಕವನ. ಈ ಕವನದ ಮೊದಲ ಭಾಗದಲ್ಲಿ ಕವಿ ಬುದ್ಧ, ಯೇಸು, ಗಾಂಧೀಜಿಯ ಸಂದೇಶವನ್ನು ನೆನಪಿಸುತ್ತಾರೆ. ಎರಡನೆಯ ಭಾಗದಲ್ಲಿ ಮಂತ್ರಗಳ ಅರ್ಥ ಮರೆತು, ರಸ್ತೆಗೆ ಬಂದು ಜಗಳಾಡುವ ಭಕ್ತರ ಚಿತ್ರಣವಿದೆ. ಮನುಷ್ಯರ ಯೋಗಕ್ಷೇಮಕ್ಕಾಗಿ ಸೃಷ್ಟಿಯಾದ ಧರ್ಮ ಹಲವು ಯುದ್ಧಗಳಿಗೆ ಕಾರಣವಾಗಿರುವುದನ್ನು, ಮನುಷ್ಯ ಇನ್ನೂ ಪ್ರಾಣಿಯಾಗಿಯೇ ಉಳಿದಿರುವುದನ್ನು ಕಂಡ ಕವಿಯ ವಿಷಾದ ಈ ಕವನದಲ್ಲಿದೆ.6
ಕನರಾಡಿ ವಾದಿರಾಜ ಭಟ್ಟರ 'ಜೀವನ ಪಾಡ್ದನ' (1989)ದಲ್ಲಿರುವ 'ಚಿನ್ನಕ್ಕ' ಆಧುನಿಕ ತುಳು ಸಾಹಿತ್ಯದ ಉತ್ತಮ ಕಥನ ಕವನಗಳಲ್ಲೊಂದು. ಅಸಹಾಯಕರಾದ ತಾಯಿ-ಮಗಳ ಈ ದುರಂತ ಕತೆಯನ್ನು ಕವಿ ಮನಸೆಳೆವ ರೂಪಕಗಳ ಮೂಲಕ, ಧ್ವನಿ ರಮ್ಯತೆಯೊಂದಿಗೆ ವಣರ್ಿಸುತ್ತಾರೆ. ತುಳು 'ಪಾಡ್ದನ'ಗಳ ಪರಂಪರೆಗಳು ಸೃಜನಶೀಲವಾಗಿ ಮುನ್ನಡೆಸುವ ಕವಿ ಪ್ರತಿಭೆ ಈ ಕಥನ ಕವನದಲ್ಲಿ ಕಾಣಿಸುತ್ತದೆ. ಬಿ. ದೂಮಪ್ಪ ಮಾಸ್ತರ್ ಅವರ 'ಮಾದಿರನ ಗಾದೆ' (1973) ಒಂದು ಹೊಸ ರೀತಿಯ ಕಾವ್ಯ ಪ್ರಯೋಗ. ತುಳು ಗಾದೆಗಳನ್ನು ಜನಪದ ಸಾಹಿತ್ಯದ ಮಾದಿರ ಪದಗಳ ಧಾಟಿಯಲ್ಲಿ ರೂಪಾಂತರಿಸಿ ಬರೆದಿರುವುದು ಇಲ್ಲಿನ ವೈಶಿಷ್ಟ್ಯ. ಕಯ್ಯಾರ ಕಿಞ್ಞಣ್ಣ ರೈಗಳು ಯೌವನದಲ್ಲಿ ಬರೆದ ತುಳು ಕವನಗಳು 'ಎನ್ನಪ್ಪ ತುಳುವಪ್ಪೆ' (1994) ಸಂಕಲನದಲ್ಲಿವೆ. ಕನ್ನಡದ 'ಪುಣ್ಯಕೋಟಿ'ಯನ್ನು ರೈಗಳು ಸೊಗಸಾಗಿ ತುಳುವಿಗೆ ಭಾಷಾಂತರಿಸಿದ್ದಾರೆ.

'ಪಿಂಗಾರ' (1986), 'ಸಂಕ್ರಾಂತಿ' (1989), 'ನಾಗಸಂಪಿಗೆ' (1994) ಸಂಕಲನಗಳ ಸುನೀತಾ ಶೆಟ್ಟಿ ಮುಂಬಯಿ ಮಹಾನಗರದಲ್ಲಿರುವ ತುಳು ಕವಯಿತ್ರಿ. ಈ ಕವಯಿತ್ರಿಯ ಮನದಾಳದಲ್ಲಿ ತುಳುನಾಡಿನ ನೆನಪುಗಳು, ಬಾಲ್ಯದ ವರ್ಣರಂಜಿತ ಕನಸುಗಳು ತುಂಬಿವೆ. ತುಳುನಾಡಿನ ಮಣ್ಣಿನ ವಾಸನೆಯಿರುವ ಶೈಲಿ, ನಾದಶಕ್ತಿ - ಅರ್ಥಶಕ್ತಿಗಳ ಸಂಗಮ, ಚಿಂತನಯೋಗ್ಯ ವಿಚಾರಗಳು, ಕಾವ್ಯಕೌಶಲ - ಇವು ಈ ಕವಯಿತ್ರಿಯ ವೈಶಿಷ್ಟ್ಯಗಳಾಗಿವೆ. ಜನಪದ  ಸಾಹಿತ್ಯದಿಂದ ಪ್ರೇರಣೆ ಪಡೆದಿರುವ 'ಪರತಿ - ಮಂಗಣೆ' ಕಥನ ಕವನ ಸುನೀತಾ ಶೆಟ್ಟಿ ಅವರ ಪ್ರಾತಿನಿಧಿಕ ಕೃತಿ. ಪ್ರಮೋದ ಸುವರ್ಣರ 'ಪದ-ರಂಗಿತ' (1996)ದಲ್ಲಿ ಸೊಗಸಾದ ಭಾವಗೀತೆಗಳಿವೆ. ಗಂಡನ್ನು ಕುರಿತು ಹೆಣ್ಣಿನ ಕನಸುಗಳು ಈ ಸಂಕಲನದ ಕವನಗಳಲ್ಲಿವೆ.

'ಪಚ್ಚೆಕುರಲ್' (1987), 'ದುನಿಪು' (1993) ಸಂಕಲನಗಳ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ಕೆಲವು ಸತ್ವಪೂರ್ಣ ಭಾವಗೀತೆಗಳನ್ನು ಬರೆದಿದ್ದಾರೆ. ಪಡಾರು ಮಹಾಬಲೇಶ್ವರ ಭಟ್ಟರ 'ಪಿಂಗಾರ' (1986), ರಸಿಕ ಪುತ್ತಿಗೆ ಅವರ 'ಪರಬನ ಮೋಕೆ' (1988), ಅ. ಬಾಲಕೃಷ್ಣ ಶೆಟ್ಟಿ, ಪೊಳಲಿ ಅವರ 'ಪೆಂಗಬೂಮನ ಪದೊಕುಲು', ಎಂ. ರತ್ನಕುಮಾರ್ ಅವರ 'ರತ್ನದ ಕರ್ಮ' (1979)-ಗಮನಾರ್ಹ ತುಳು ಕವನ ಸಂಕಲನಗಳು. ಪಿ. ಈಶ್ವರ್ ಭಟ್ ಪುತ್ತಿಗೆ ಅವರು ಬ್ರಾಹ್ಮಣರ ತುಳುವಿನಲ್ಲಿ, ರತ್ನಕುಮಾರ್ ಅವರು ಜೈನರ ತುಳುವಿನಲ್ಲಿ ಕವನಗಳನ್ನು ಬರೆದಿದ್ದಾರೆ. ಪುರ್ಪ (1987) ಮತ್ತು 'ಬಾನೊ ತೋರೊಂದುಂಡು' (1997) ಸಂಕಲನಗಳ ಎಸ್. ಪಿ. ಮಂಚಿ, 'ಬೀರ' (1997) ಸಂಕಲನದ ವಾಮನ ನಂದಾವರ, 'ಮದಿಮಾಲೆ ಪಾಡ್ದನ' (1995) ಸಂಕಲನದ ಆತ್ರಾಡಿ ಅಮೃತಾ ಶೆಟ್ಟಿ, 'ಕೂಕುಳು' (1994) ಸಂಕಲನದ ಜೆ. ತಿಮ್ಮ ಪೂಜಾರಿ ಗೇಯತೆ ಇಲ್ಲದ ಕವನಗಳನ್ನು ಬರೆಯುತ್ತಿದ್ದಾರೆ. ಎಸ್. ಪಿ. ಮಂಚಿಯವರ ಕವನಗಳಲ್ಲಿ ತೀಕ್ಷ್ಣವಾದ ರಾಜಕೀಯ ಸಾಮಾಜಿಕ ವಿಡಂಬನೆ ಇದೆ. 'ಅರ್ಲು ಕಬಿತೆಲು', 'ಪೊಲರ್ು ಕಬಿತೆಲು' (1990-ಸಂ. ಕೃಷ್ಣಾನಂದ ಹೆಗ್ಡೆ). 'ಪ್ರಾತಿನಿಧಿಕ ತುಳು ಕಬಿತೆಲು' (1994-ಸಂ. ವಸಂತಕುಮಾರ್ ಪೆರ್ಲ), 'ಪರ್ವ ಪರ್ಬದ ಕೆಲರ್ು ಕಬಿತೆಲು' (1997-ಸಂ. ಮುದ್ದು ಮೂಡುಬೆಳ್ಳೆ) - ಈ ಸಂಕಲನಗಳಲ್ಲಿ ತುಳು ಕವಿಗಳ ಪ್ರಾತಿನಿಧಿಕ ಕವನಗಳು ಸಿಗುತ್ತವೆ.

ಮೂಲ್ಕಿ ನರಸಿಂಗ ರಾಯರು (1875-1945) ತನ್ನ' ಗೀತೆ ಮಲ್ಲಿಗೆ' (1934)ಯಲ್ಲಿ 'ಭಗವದ್ಗೀತೆ'ಯನ್ನು ಪದ್ಯರೂಪದಲ್ಲಿ ತುಳುವಿಗೆ ಭಾಷಾಂತರಿಸಿದ್ದಾರೆ. ಎನ್. ಸೀತಾರಾಮ ಆಳ್ವರು ತನ್ನ 'ಗೀತೆದ ತಿರ್ಲ್' (1981) ಕೃತಿಯಲ್ಲಿ ಭಗವದ್ಗೀತೆಯ ಸಾರಾಂಶವನ್ನು ತುಳು ಭಾಮಿನಿ ಷಟ್ಪದಿಯಲ್ಲಿ ನೀಡಿದ್ದಾರೆ. ಕೆದಂಬಾಡಿ ಜತ್ತಪ್ಪ ರೈಗಳ 'ಅಜ್ಜಬಿರು' (1987, ಎಸ್. ವಿ. ಪರಮೇಶ್ವರ ಭಟ್ಟರ 'ಇಂದ್ರಚಾಪ' ಮತ್ತು ಇತರ ಕವನಗಳಅನುವಾದ.), 'ಕುಜಲಿ ಪೂಜೆ' (1989, ಉಮರ್ ಖಯ್ಯಾಮನ ರುಬಾಯತ್) 'ಅಸೆನಿಯಾಗೊ, ಕಾಂತಗೊ ಜೋಗಿ' (1994, ಕುವೆಂಪು ಅವರ 'ಕಿಂದರಿಜೋಗಿ'), 'ರತ್ನದ ಪದೊಕುಲು' (1979, ಜಿ. ಪಿ. ರಾಜರತ್ನಂ ಅವರ 'ರತ್ಬದ ಪದಗಳು), ಅ. ಬಾಲಕೃಷ್ಣ ಶೆಟ್ಟಿ ಪೊಳಲಿ ಅವರ 'ಪೊಡುಂಬ ತಿಂಮನ ಕಗ್ಗ' (1988, ಡಿ. ವಿ. ಜಿ. ಅವರ 'ಮಂಕುತಿಮ್ಮನ ಕಗ್ಗ'), ಅಮೃತ ಸೋಮೇಶ್ವರ ಅವರ 'ಮೋಕೆದ ಬೀರೆ ಲೆಮಿನ್ಕಾಯೆ' (1985, ಫಿನ್ಲೆಂಡಿನ ಜನಪದ ಮಹಾಕಾವ್ಯ 'ಕಾಲೆವಾಲ'ದ ಒಂದು ಭಾಗ) ಕಬ್ಬಿನೆಲೆ ವಸಂತ ಭಾರಧ್ವಾಜರ 'ಪುರಂದರ ದಾಸೆರೆ ಪದೊಕುಲು' (1999) - ಇಂಥ ಕೃತಿಗಳಿಂದ ತುಳು ಕಾವ್ಯ ಸಮೃದ್ಧಗೊಂಡಿದೆ. ಕೆ. ಟಿ. ಗಟ್ಟಿಯವರು 'ಎನ್ನ ಮೋಕೆದ ಪೊಣ್ಣು' (1997) ಸಂಕಲನದಲ್ಲಿ ಷೇಕ್ಸಪಿಯರ್, ಜಾನ್ಡನ್, ಮಿಲ್ಟನ್, ವಿಲಿಯಂ ಬ್ಲೇಕ್, ವಡ್ಸ್ವತರ್್, ಬೈರನ್, ಕೀಟ್ಸ್, ಬ್ರೌನಿಂಗ್, ಯೇಟ್ಸ್ ಮತ್ತಿತರ ಕವಿಗಳ ಐವತ್ತೊಂದು ಪ್ರೇಮ ಕವನಗಳನ್ನು ತುಳುವಿಗೆ ಭಾಷಾಂತರಿಸಿದ್ದಾರೆ. ಭಾಷಾಂತರ ಕೃತಿ ತನ್ನ ಪೂರ್ವಜನ್ಮವನ್ನು ಮರೆಯಬಾರದು ಎಂಬುದು ಗಟ್ಟಿಯವರ ನಿಲುವು.

ಕೆಲಿಂಜ ಸೀತಾರಾಮ ಆಳ್ವರ ತುಳು 'ಹರಿಶ್ಚಂದ್ರ ಕಾವ್ಯೊ' (1994) ತುಳು ಕಾವ್ಯದ ಮುನ್ನಡೆಯಲ್ಲಿ ಒಂದು ದಿಟ್ಟ ಹೆಜ್ಜೆ. ಕನ್ನಡ ಮೂಲದಲ್ಲಿ ವಾರ್ಧಕ ಷಟ್ಪದಿಯಲ್ಲಿರುವ ಈ ಕಾವ್ಯವನ್ನು ತುಳು ಸಾಂಗತ್ಯದಲ್ಲಿ ಬರೆದಿರುವುದಲ್ಲಿಯೇ ಆಳ್ವರ ಪ್ರಯೋಗಶೀಲತೆ ಕಾಣೀಸುತ್ತದೆ. ಇದೊಂದು ಸೃಜನಶೀಲ ಪುನರ್ ಸೃಷ್ಟಿ. ಕೆಲಿಂಜ ಸೀತಾರಾಮ ಆಳ್ವರು ತುಳುವಿಗೆ ಭಾಷಾಂತರಿಸಿರುವ ಕುಮಾರವ್ಯಾಸ ಭಾರತ ಅಪ್ರಕಟಿತವಾಗಿ ಉಳಿದಿದೆ. ಡಿ. ವೇದವತಿ ಲಕ್ಷ್ಮೀಶನ 'ಜೈಮಿನಿ ಭಾರತ'ವನ್ನು ತುಳು 'ಜೈಮಿನಿ ಭಾರತೊ' (1999) ಎಂಬ ಹಎಸರಿನಲ್ಲಿ ಭಾಷಾಂತರಿಸಿದ್ದಾರೆ. ವಾಧಕ ಷಟ್ಪದಿಯ ಸ್ಥೂಲರೂಪವನ್ನು ಉಳಿಸಿಕೊಂಡಿರುವ ಇವರು ಕಾವ್ಯವನ್ನು ಅಲ್ಲಲ್ಲಿ ಸಂಕ್ಷೇಪಿಸಿದ್ದಾರೆ. ಎನ್. ಪಿ. ಶೆಟ್ಟಿಯವರ 'ಬತ್ತೆ ಕೆತ್ತರ ಉತ್ತರೆ' (1992) ಕುಮಾರ ವ್ಯಾಸ ಭಾರತದ ಆಧಾರದಿಂದ ತುಳು ಭಾಮಿನಿ ಷಟ್ಪದಿಯಲ್ಲಿ ಬರೆದಿರುವ ಪುಟ್ಟ ಕಾವ್ಯ. ತುಳುನಾಡಿನಲ್ಲಿ ಕನ್ನಡದ ಪ್ರಭಾವ ದಟ್ಟವಾಗಿದೆ. ಕನ್ನಡ ಕೃತಿಗಳ ಭಾಷಾಂತರಗಳ ಮೂಲಕ ತುಳು ಕಾವ್ಯದಲ್ಲಿ ಸೃಜನಶೀಲ ಪ್ರಯೋಗಗಳನ್ನು, ಕಾವ್ಯ ಪರಂಪರೆಯೊಂದನ್ನು ಬೆಳೆಸಲು ತುಳುಕವಿಗಳು ಪ್ರಯತ್ನಿಸುತ್ತಿದ್ದಾರೆ. ಮಂದಾರ ಕೇಶವ ಭಟ್ಟರು ತನ್ನ 'ಮಂದಾರ ರಾಮಾಯಣ'ವನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

ಕಿಲ್ಲೆ ನಾರಾಯಣ ಶೆಟ್ಟರು ತನ್ನ ತುಳು ಕಾವ್ಯದ ದಿಕ್ಸೂಚಿ ಕೃತಿ 'ಕಾನಿಗೆ' (1932)ಯಲ್ಲಿ ಕೆಲವು ಶಿಶುಗೀತೆಗಳನ್ನು ಬರೆದಿದ್ದರು. ಕನರಾಡಿ ವಾದಿರಾಜ ಭಟ್ಟರ 'ಜೋಕುಳೆ ಪದೊಕುಲು' (1992), ಪ್ರಮೋದ ಕೆ. ಸುವರ್ಣ 'ತಾಟಿ ತೆಂಬರೆ' (1999) ಕೃತಿಗಳಲ್ಲಿ ತುಳು ಮಕ್ಕಳು ಕುಣಿದಾಡಿಕೊಂಡು ಹಾಡಬಹುದಾದ ಅಂದ-ಚೆಂದದ ಶಿಶುಗೀತೆಗಳಿವೆ. ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ತುಳು ಜಾನಪದ ಸಾಹಿತ್ಯವನ್ನು ಆಧರಿಸಿದ ಅನೇಕ ಗದ್ಯಕೃತಿಗಳನ್ನು ಮಕ್ಕಳಿಗಾಗಿ ಪ್ರಕಟಿಸಿದೆ.