Tuesday, November 16, 2010

TULU DICTIONARY

ತುಳು ನಿಘಂಟು

ಮುರಳೀಧರ ಉಪಾಧ್ಯ ಹಿರಿಯಡಕ

ಜರ್ಮನ್ ಕ್ರಿಶ್ಚಿಯನ್ ಮಿಶನರಿ ರೆ| ಆಗಸ್ಟ ಮ್ಯಾನರ್ ರಚಿಸಿದ 'ತುಳು-ಇಂಗ್ಲಿಷ್ ನಿಘಂಟು' (1886) ತುಳುವಿನ ಪ್ರಥಮ ಶಬ್ದಕೋಶ. ಈ ನಿಘಂಟಿನಲ್ಲಿ ಹತ್ತೊಂಬತ್ತು ಸಾವಿರ ಶಬ್ದಗಳಿವೆ. ಮ್ಯಾನರ್ ಅವರ 'ಇಂಗ್ಲಿಷ್-ತುಳು ನಿಘಂಟು' 1888ರಲ್ಲಿ ಪ್ರಕಟವಾಯಿತು. ಮ್ಯಾನರ್ ಅವರ ನಿಘಂಟಿನಲ್ಲಿದ್ದ ಸಂಸ್ಕೃತ ಶಬ್ದಗಳನ್ನು ತೆಗೆದು ಹಾಕಿ, ಪರಿಷ್ಕರಿಸಿದ ಹೊಸ 'ತುಳು-ಇಂಗ್ಲಿಷ್ ನಿಘಂಟ'ನ್ನು ಎಂ. ಮರಿಯಪ್ಪ ಭಟ್ ಹಾಗೂ ಎ. ಶಂಕರ ಕೆದಲಾಯರು 1967ರಲ್ಲಿ ಸಂಪಾದಿಸಿದರು.

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಪ್ರಕಟಿಸಿರುವ ಆರು ಬೃಹತ್ ಸಂಪುಟಗಳ ನಿಘಂಟಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶಬ್ದಗಳಿವೆ. ಡಾ| ಯು. ಪಿ. ಉಪಾಧ್ಯಾಯರ ನೇತೃತ್ವದ ಸಂಪಾದಕ ಮಂಡಳಿಯ ಹದಿನೆಂಟು ವರ್ಷಗಳ (1979-1997) ಭಗೀರಥ ಪ್ರಯತ್ನದ ಫಲವಾಗಿ ಈ ನಿಘಂಟು ಸಿದ್ಧಗೊಂಡಿದೆ. ತುಳುನಾಡಿನ ನೂರಾರು ಹಳ್ಳಿಗಳಲ್ಲಿ ಕ್ಷೇತ್ರಕಾರ್ಯ ನಡೆಸಿ, ಜನರ ಮಾತು - ಕತೆಯಲ್ಲಿದ್ದ ಅಲಿಖಿತ ಪರಂಪರೆಯ ಶಬ್ದಗಳನ್ನು ಸಂಗ್ರಹಿಸಿರುವುದು ಈ ನಿಘಂಟಿನ ಅಗ್ಗಳಿಕೆಯಾಗಿದೆ. ತುಳುನಾಡಿನ ವಿವಿಧ ಸಾಮಾಜಿಕ ವರ್ಗದವರು ಬಳಸುವ ಆಧಾರಭೂತ ಶಬ್ದಾವಳಿ, ಬೇಸಾಯ,ಮೀನುಗಾರಿಕೆ ಮತ್ತಿತರ ವೃತ್ತಿ ಕಸುಬುಗಳ ಸನ್ನಿವೇಶಗಳಲ್ಲಿ ಬಳಸುವ ತಾಂತ್ರಿಕ ಪದಗಳು, ಭೂತಾರಾಧನೆಯಂಥ ಧಾಮರ್ಿಕ ಆಚರಣೆಗಳಲ್ಲಿ ಬಳಸುವ ಸಾಂಸ್ಕೃತಿಕ ಪದಗಳು, ಪ್ರಾಚೀನ ಕಾವ್ಯ - ಜನಪದ ಕಾವ್ಯಗಳಲ್ಲಿರುವ ಪದಗಳು, ತುಳುವಿನ ಕುಲನಾಮಗಳು, ಸ್ಥಳನಾಮಗಳು ಇವೆಲ್ಲವನ್ನೂ ಒಳಗೊಂಡಿರುವ ಈ ತುಳು ನಿಘಂಟು ಒಂದು ಸಂಸ್ಕೃತಿ ಕೋಶ. ಈ ನಿಘಂಟು ತುಳು ಶಬ್ದಗಳನ್ನು ಕನ್ನಡ ಲಿಪಿಯಲ್ಲಿಯೂ, ರೋಮನ್ ಲಿಪಿಯಲ್ಲಿಯೂ ಉಲ್ಲೇಖಿಸಿ ಸಮಾನಾರ್ಥ ಪದಗಳನ್ನು, ಅರ್ಥಭೇದಗಳನ್ನು, ಸಂಬಂಧಪಟ್ಟ ಸಮಾನಪದ, ನುಡಿಗಟ್ಟು ಗಾದೆಗಳನ್ನು, ಕನ್ನಡ, ತಮಿಳು, ಕೊಡವ, ಮಲೆಯಾಳ ಮುಂತಾದ ಸೋದರ ಭಾಷೆಗಳಲ್ಲಿರುವ ಜ್ಞಾತಿ ಪದಗಳನ್ನು ಕೊಡುತ್ತದೆ. ಭಾರತದ ಭಾಷೆಗಳ ಆಧುನಿಕ ಇತಿಹಾಸದಲ್ಲಿ ತುಳು ನಿಘಂಟಿನ ರಚನೆ ಒಂದು ಅತ್ಯುನ್ನತ ಘಟನೆ. ಇಪ್ಪತ್ತೊಂದನೆಯ ಶತಮಾನದಲ್ಲಿ ರೂಪುಗೊಳ್ಳಲಿರುವ ಭಾರತೀಯ ನಿಘಂಟುಗಳಿಗೆ ಇದು ಮಾರ್ಗದಶರ್ಿ ನಕ್ಷತ್ರವಾಗಲಿದೆ, ಚಿರಂಜೀವಿಯಾಗಲಿದೆ.

ಆಧುನಿಕ ತುಳುನಾಡಿನ ಸಾಹಿತ್ಯದ ಒಂದು ಶತಮಾನದ ಇತಿಹಾಸವನ್ನು ಅವಲೋಕಿಸುವಾಗ ಕನ್ನಡ ಕವಿ ಬೇಂದ್ರೆಯವರ ಕವನವೊಂದರ ಸಾಲುಗಳು ನೆನಪಾಗುತ್ತವೆ - 'ಕತೆ ಆಯಿತೇ ಅಣ್ಣ ಬಹಳ ಸಣ್ಣ, ಕತೆಯ ಮೈಗಿಂತ ಮಿಗಿಲದರ ಬಣ್ಣ'. ಯಿದ್ದಿಶ್, ತುಳುವಿನಂತೆ ಕೆಲವು ಲಕ್ಷಜನ ಮಾತನಾಡುವ ಭಾಷೆ. ಈ ಭಾಷೆಯ ಕತೆಗಾರ ಐಸಾಕ್ ಭಾಷೆವಿಸ್ ಸಿಂಗರ್ 1978ರಲಿ ನೋಬೆಲ್ ಬಹುಮಾನ ಪಡೆದರು. ನೋಬೆಲ್ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಸಿಂಗರ್ ತನ್ನ ಯಿದ್ದಿಶ ಭಾಷೆಯ ಬಗ್ಗೆ ನುಡಿದ ಮಾತುಗಳು ತುಳು ಭಾಷೆ - ಸಾಹಿತ್ಯಕ್ಕೂ ಚೆನ್ನಾಗಿ ಅನ್ವಯಿಸುತ್ತವೆ.

ನನಗೆ ಯಿದ್ದಿಶ್ ಭಾಷೆ ಹಾಗೂ ಅದನ್ನು ಮಾತನಾಡುವ ಜನತೆ ಬೇರೆ - ಬೇರೆಯಲ್ಲವೆನ್ನಿಸಿದೆ. ಯಿದ್ದಿಶ್ ಭಾಷೆಯಲ್ಲಿ ಬನಿ, ಜೀವನೋತ್ಸಾಹ ಸಹನೆ ಅಲ್ಲಿನ ಜನರ ಬದುಕಿನಿಂದ ಬಂದದ್ದು. ಈ ಭಾಷೆ ಪ್ರಕಟಿಸುವ ಮಾನವನ ಬಗೆಗಿನ ಗೌರವ ಘನತೆಯೂ ಆ ಬದುಕಿನ ಫಲವೇ ಆಗಿದೆ. ಯಿದ್ದಿಶ್ನಲ್ಲಿ ಆರೋಗ್ಯಕರ ವಿನೋದವಿದೆ, ದಿನನಿತ್ಯದ ಬದುಕಿನ ಬಗ್ಗೆ ಅಪಾರ ಗೌರವವಿದೆ. ಪ್ರೀತಿ ಸಾಹಸಗಳನ್ನು ಅದು ಒಪ್ಪಿ ಆಲಂಗಿಸಿಕೊಳ್ಳುತ್ತದೆ. ಯಿದ್ದಿಶ್ ಮನೋಭಾವ ತೀರ ಒರಟಾದುದಲ್ಲ. ಯಶಸ್ಸನ್ನು ಅದು ಕೊಡುಗೆಯಾಗಿ ಪಡೆಯಲು ಸಿದ್ಧವಿಲ್ಲ. ಸಾಧನೆಯ ಮೂಲಕ ಗಳಿಸಿಕೊಳ್ಳಲು ಹಂಬಲಿಸುತ್ತದೆ. ಅದು ಯಾವುದನ್ನೂ ತನ್ನ ಹಕ್ಕೆಂದು ಪಡೆಯದೆ ಗೊಂದಲಗಳ ನಡುವೆ ಮೂಡುವ, ವಿನಾಶದ ಮಧ್ಯೆ ಅರಳುವ ಸೃಷ್ಟಿ ಶಕತಿಯ ಬಗ್ಗೆ ಗಾಢ ವಿಶ್ವಾಸ ಹೊಂದಿದೆ. ಯಿದ್ದಿಶ್ ಇನ್ನೂ ಸತ್ತಿಲ್ಲ. ಜಗತ್ತು ಕಾಣದ ಅದ್ಭುತ ಸಂಪತ್ತು ಅದರಲ್ಲಿದೆ. 

No comments:

Post a Comment