ತುಳು ಗದ್ಯ
ಮುರಳೀಧರ ಉಪಾಧ್ಯ ಹಿರಿಯಡಕ
ಧರ್ಮಸ್ಥಳದ ಶ್ರೀಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದಲ್ಲಿ ತುಳು ಲಿಪಿಯಲ್ಲಿರುವ 489 ಹಸ್ತಪ್ರತಿಗಳಿವೆ. ಇವುಗಳಲ್ಲಿ ಹೆಚ್ಚಿನವುಗಳು ತುಳುಲಿಪಿಯಲ್ಲಿರುವ ಸಂಸ್ಕೃತ ಗ್ರಂಥಗಳು. ಮುದ್ರಣಯಂತ್ರಗಳು ಬಂದ ಮೇಲೆ ತುಳುವರು ಕನ್ನಡ ಲಿಪಿಯಲ್ಲಿ ತುಳುವಲ್ಲಿ ಬರೆಯತೊಡಗಿದರು. ಮುದ್ರಣಯಂತ್ರದಿಂದಾಗಿ ತುಳುನಾಡಿನಲ್ಲಿ ನೂರಾರು ಕನ್ನಡ ಪತ್ರಿಕೆಗಳು ಆರಂಭಗೊಂಡವು. ಆದರೆ ತುಳು ಪತ್ರಿಕೋದ್ಯಮ ಬೆಳೆಯಲಿಲ್ಲ. ಈಗ ಪ್ರಕಟವಾಗುತ್ತಿರುವ ಬೆರಳೆಣಿಕೆಯ ತುಳು ಪತ್ರಿಕೆಗಳು ಪ್ರಸಾರದ ಕೊರತೆಯಿಂದ ಸೊರಗುತ್ತಿವೆ. ತುಳು ಪತ್ರಿಕೋದ್ಯಮದ ದುಃಸ್ಥಿತಿಯಿಂದಾಗಿ ತುಳು ಗದ್ಯ ಸಮೃದ್ಧವಾಗಿಲ್ಲ.
ಡಾ| ಬಿ. ಎ. ವಿವೇಕ ರೈ ಅವರ 'ತುಳುಜನಪದ ಸಾಹಿತ್ಯ' (1985) ತುಳು ಜಾನಪದ ಸಂಶೋಧನೆಗೆ ನಾಂದಿ ಹಾಡಿದ ಮಹತ್ತ್ವದ ಕೃತಿ. ಡಾ| ಚಿನ್ನಪ್ಪ ಗೌಡ, ಡಾ| ಯು. ಪಿ. ಉಪಾಧ್ಯಾಯ, ಡಾ| ಸುಶೀಲ ಉಪಾಧ್ಯಾಯ, ಡಾ| ಪುರುಷೋತ್ತಮ ಬಿಳಿಮಲೆ, ಅಮೃತ ಸೋಮೇಶ್ವರ, ಡಾ| ಬಿ. ಶಿವರಾಮ ಶೆಟ್ಟಿ, ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್, ಡಾ| ವಾಮನ ನಂದಾವರ, ಡಾ| ಮೋಹನ ಕೋಟ್ಯಾನ್, ಬನ್ನಂಜೆ ಬಾಬು ಅಮೀನ್, ಡಾ| ಗಣನಾಥ ಎಕ್ಕಾರ್, ಕನರಾಡಿ ವಾದಿರಾಜ ಭಟ್, ಎ. ವಿ. ನಾವಡ, ಡಾ| ಗಾಯತ್ರಿ ನಾವಡ, ಪೀಟರ್ ಜೆ. ಕ್ಲಾಸ್, ಲೌರಿಹೊಂಕೊ, ಹೈಡ್ರೂನ್ ಬ್ರೂಕ್ನರ್, ಕು. ಶಿ. ಹರಿದಾಸ ಭಟ್ ಇವರೆಲ್ಲ ತುಳು ಜಾನಪದ ಅಧ್ಯಯನಕ್ಕೆ ಮೌಲಿಕ ಕೊಡುಗೆ ನೀಡಿದ್ದಾರೆ. ಇವರ ಗ್ರಂಥಗಳು ಕನ್ನಡ, ಇಂಗ್ಲೀಷ್ಗಳಲ್ಲಿ ಪ್ರಕಟವಾಗಿವೆ. ಭಾಷಾಶಾಸ್ತ್ರಜ್ಞರಾದ ಡಾ\ ಡಿ. ಎನ್. ಶಂಕರ ಭಟ್, ಡಾ| ಯು. ಪಿ. ಉಪಾಧ್ಯಾಯ, ಡಾ| ಕೆ. ಪದ್ಮನಾಭ ಕೇಕುಣ್ಣಾಯ, ಸೂಡ ಲಕ್ಷ್ಮೀನಾರಾಯಣ ಭಟ್, ಡಾ| ಎಂ. ರಾಮ, ಮಲ್ಲಿಕಾದೇವಿ, ಡಾ| ಕೆ. ವಿ. ಜಲಜಾಕ್ಷಿ, ಟಿ. ರಾಮಕೃಷ್ಣ ಶೆಟ್ಟಿ ಇವರೆಲ್ಲ ತುಳು ಭಾಷೆಯ ಕುರಿತು ಗ್ರಂಥಗಳನ್ನು, ಸಂಪ್ರಬಂಧನಗಳನ್ನು ಬರೆದಿದ್ದಾರೆ.
ಎಂ. ಜಾನಕಿ ಅವರ 'ತಿರ್ಗಾಟದ ತಿರ್ಲ್', ಡಿ. ಸುವಾಸಿನಿ ಶೆಟ್ಟಿ ಅವರ 'ದೇಸಾಂತ್ರೊಡು' ಇಂಥ ಒಂದೆರಡು ಪ್ರವಾಸ ಸಾಹಿತ್ಯ ಕೃತಿಗಳು ತುಳುವಿನಲ್ಲಿ ಪ್ರಕಟವಾಗಿವೆ. ಕೆದಂಬಾಡಿ ಜತ್ತಪ್ಪ ರೈಗಳು ಮುದ್ದಣ್ಣನ ಹಳಗನ್ನಡ ಕೃತಿ 'ಶ್ರೀರಾಮಾಶ್ವಮೇಧ'ವನ್ನು ತುಳುವಿಗೆ ಭಾಷಾಂತರಿಸಿದ್ದಾರೆ. ತುಳುಸಾಹಿತ್ಯ ಅಕಾಡೆಮಿಯ 'ಮರೆಯಬಾರದ ತುಳುವರು' ಮಾಲೆಯಲ್ಲಿ ಅ. ಬಾಲಕೃಷ್ಣ ಶೆಟ್ಟಿ ಪೊಳಲಿ ಅವರ 'ಎನ್. ಎ. ಶಿನಪ್ಪ ಹೆಗ್ಗಡೆ', ಮುರಳೀಧರ ಉಪಾಧ್ಯ ಹಿರಿಯಡಕ ಅವರ 'ಎಸ್. ಯು. ಪಣಿಯಾಡಿ', ಡಾ| ಪದ್ಮನಾಭ ಕೇಕುಣ್ಣಾಯರ 'ರೆವರೆಂಡ್ ಆಗಸ್ಟ್ಮೇನರ್', ಕೆ. ಲೀಲಾವತಿ ಅವರ 'ದೂಮಪ್ಪ ಮಾಸ್ಟರ್', ನರೇಂದ್ರ ರೈ ದೇರ್ಲ ಅವರ 'ನವಯುಗದ ಹೊನ್ನಯ್ಯ ಶೆಟ್ರ್', ಎಂ. ಪ್ರಭಾಕರ ಜೋಶಿಯವರ 'ಮಂದಾರ ಕೇಶವ ಬಟ್ರ್', ಕಯ್ಯಾರ ಕಿಞ್ಞಣ್ಣ ರೈ ಟವರ 'ನಾರಾಯಣ ಕಿಲ್ಲೆ' - ಇಂಥ ಹಲವು ಜೀವನ ಚರಿತ್ರೆಯ ಕೃತಿಗಳು ಪ್ರಕಟಗೊಂಡಿವೆ. ಮ. ವಿಠಲ ಪುತ್ತೂರು ಅವರ 'ಪನಿಪನಿ ತುಡರ್', ಎಸ್. ಬಿ. ಕುಂದರ್ ಅವರ 'ಪಿರ ತಿಗರ್್ ತೂನಗ' ಇಂಥ ಕೆಲವು ಗಮನಾರ್ಹ ಗದ್ಯಕೃತಿಗಳು ಪ್ರಕಟವಾಗಿವೆ.
No comments:
Post a Comment