Tuesday, November 16, 2010

TULU POETRY

ತುಳು ಕಾವ್ಯ
ಮುರಳೀಧರ ಉಪಾಧ್ಯ ಹಿರಿಯಡಕ

ಎಂ. ಆರ್. ಸುಬ್ರಹ್ಮಣ್ಯ ಶಾಸ್ತ್ರಿಯವರ 'ತುಳು ಕನ್ಯೋಪದೇಶ' (1916) ಕೃತಿಗೆ ಆಧುನಿಕ ತುಳು ಕಾವ್ಯ ಚರಿತ್ರೆಯಲ್ಲಿ ಐತಿಹಾಸಿಕ ಮಹತ್ತ್ವವಿದೆ. ಇದು ಕನ್ನಡದ ಸಂಚಿಯ ಹೊನ್ನಮ್ಮನ 'ಹದಿಬದೆಯ ಧರ್ಮ'ದ ಮಾದರಿಯ ಕೃತಿ.
ಸ್ವಾತಂತ್ರ್ಯ ಹೋರಾಟಗಾರ, ಕವಿ, ಎಸ್. ನಾರಾಯಣ ಶೆಟ್ಟಿ ಕಿಲ್ಕೆ (1916) ಕೃತಿಗೆ ಎಸ್. ಯು. ಪಣಿಯಾಡಿಯವರ ತುಳು ಚಳವಳದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಕಿಲ್ಕೆಯವರು ತನ್ನ 'ಕಾನಿಗೆ' (1932) ಸಂಕಲನದಲ್ಲಿ ತುಳು ಕಾವ್ಯದಲ್ಲಿ ಸಂಸ್ಕೃತ ಭೂಯಿಷ್ಠವಲ್ಲದ ತುಳುವನ್ನು ಬಳಸಬೇಕು ಎಂಬ ಕುರಿತು ಎಚ್ಚರ ವಹಿಸಿದ್ದಾರೆ. ತುಳುನಾಡಿನ ಸಾಂಸ್ಕೃತಿಕ ವಿವರಗಳಿಂದ ತುಂಬಿರುವ 'ಮಂಡಲ-ಕಾನಿಗೆ' ಎಂಬ ಸುದೀರ್ಘ ಹಾಡು ತುಳುನಾಡ ನಾಡಗೀತೆಯಂತಿದೆ. ಕೆಲವು ಒಳ್ಳೆಯ ಶಿಶುಗೀತೆ-ಗಳನ್ನು ಕಿಲ್ಲೆಯವರು ಬರೆದಿದ್ದಾರೆ. ವಾದಿರಾಜ ಸ್ವಾಮಿಗಳ 'ದಶಾವತಾರ ಹಾಡು' ಇದನ್ನು 'ಪತ್ತವತಾರ'ವಾಗಿ ರೂಪಾಂತರಿಸುವುದರಲ್ಲಿ ಕಿಲ್ಲೆಯವರ ಭಾಷಾಧೋರಣೆಯನ್ನು ಗುರುತಿಸಬಹುದು.

ವಾದಿರಾಜ ಸ್ವಾಮಿ -
 'ಚಕ್ರವತರ್ಿ ಬಲಿಟ್ಟ, ಭೂಮಿ ನೆಟ್ಟಿನೇರ್ಗಾ
 ತತ್ರದಾರಿ ಅದಿತಿಪುತ್ರೆ ವಾಮನತ್ತಗಾ |

ಕಿಲ್ಲೆ -
 'ಚದುವು ಪಾತೆರೊಂದು ಮನ್ನ್ ನಟ್ಟಿನೇರ್ಗೆ
 ಪುದರ್ಗೊಂಜಿ ಗುಬ್ಬುದಾರ್ ಕುಂಟಮಾಣಿಗೆ |

'ತುಳುವಾಲ ಬಲಿಯೇಂದ್ರ' (1929)ದ ಪೊಳಲಿ ಶೀನಪ್ಪ ಹೆಗ್ಡೆ, 'ಕನ್ನಡಕೊ' ಸಂಕಲನದ ಎಂ. ಸಿ. ವಿ. ಶಮರ್ಾ, 'ಪತಿತೋದ್ಧರಣ ಪದ್ಯಾವಳಿ'ಯ ಎಚ್. ನಾರಾಯಣ ರಾವ್, 'ತುಳು ನೀತಿ ಪದ್ಯೊಲು' ಬರೆದ ಬಡಕಬೈಲು ಪರಮೇಶ್ವರಯ್ಯ, 'ತುಳು ಪದ್ಯಾವಳಿ'ಯ (1930) ಬಿ. ಮೋನಪ್ಪ ತಿಂಗಳಾಯ, ತುಳು ಪದ್ಯ ಮಾಲಿಕೆಯ (1933), ಕೆ. ಗಂಗಾಧರ ರಾಮಚಂದ್ರ, 'ಕುಂಬಳೆ ಸೀಮೆತ ಚರಿತ್ರೆ ಮತ್ತು ಸ್ತುತಿ ಪದ್ಯೊಲು' ಬರೆದ ದಾಮೋದರ ಪುಣಿಂಚತ್ತಾಯ, ಕೊರಡ್ಕಲ್ ಶ್ರೀನಿವಾಸರಾಯರು, ಉಡುಪಿ ಶ್ರೀಕಾಂತಾಚಾರ್ಯ, ಪಿ. ಸುಬ್ರಹ್ಮಣ್ಯ ಶಾಸ್ತ್ರಿ, ಕೆ. ಹೊನ್ನಯ್ಯ ಶೆಟ್ಟಿ, ಮುದ್ರಾಡಿ ಜನಾರ್ದನ ಆಚಾರ್ಯ, 'ಸತ್ಯದ ಬಿತ್ತೊ'ದ ಬಾಡೂರ ಜಗನ್ನಾಥ ರೈ, 'ತುಳು ಭಜನಾವಳಿ'ಯ ಸೀತಾನದಿ ಗಣಪಯ್ಯ ಶೆಟ್ಟಿ - ಇವರೆಲ್ಲ ತುಳು ಚಳವಳದ ಸಂದರ್ಭದಲ್ಲಿ ತುಳು ಕಾವ್ಯವನ್ನು ಸಮೃದ್ಧಗೊಳಿಸಿದರು. ಗಾಂಧೀವಾದಿ ನರ್ಕಳ ಮಾರಪ್ಪ ಶೆಟ್ಟರ 'ಅಮಲ್ ದೆಪ್ಪಡೆ' (1929) 'ಪೊಲರ್್ಕಂಟ್' (1930) ಸಂಕಲನಗಳಲ್ಲಿ ಸಮಾಜಸುಧಾರಣೆಯ ಉತ್ಸಾಹದಿಂದ ಬರೆದ ಎರಡು ಸೊಗಸಾದ ನೀತಿಪದ್ಯಗಳಿವೆ.

'ತುಳುವಿನಲ್ಲಿ ಏನಿದೆ?' ಎಂದು ಪ್ರಶ್ನಿಸುವವರಿಗೆ, 'ತುಳುವಿನಲ್ಲಿ ಮಂದಾರ ರಾಮಾಯಣ ಇದೆ' ಎಂದು ತುಳುವರು ಅಭಿಮಾನದಿಂದ ಉತ್ತರಿಸಬಲ್ಲರು. ಮಂದಾರ ಕೇಶವಭಟ್ಟರ (1918-1997) 'ಮಂದಾರ ರಾಮಾಯಣ' ತುಳುವಿನಲ್ಲಿ ಮಹಾಕಾವ್ಯ - ಕೇಶವ ಭಟ್ಟರು 'ಬೃಹತ್ಕಥೆ'ಯ ಗುಣಾಢ್ಯವನ್ನು ನೆನಪಿಸುವ ಕವಿ.

'ಮಂದಾರ ರಾಮಾನಯಣ'ದಲ್ಲಿ ಕವಿ ಕೆಲವು ಮುಖ್ಯ ಬಬಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಇಲ್ಲಿಯ ವಾಲ್ಮೀಕಿ ಒಬ್ಬ ಮಲೆ ಕುಡಿಯವನಾಗಿದ್ದನು. ಕ್ರೌಂಚವಧೆಯ ಪ್ರಸಂಗದ ಬದಲು ವಾಲ್ಮೀಕಿ ಕನಸಿನಲ್ಲಿ ಮಾನಸ ಪುತ್ರಿಯೊಬ್ಬಳ್ಳನ್ನು ಕಾಣುವ ಪ್ರಸಂಗ ಇದೆ.  ಮಂಥರೆಯ ಪ್ರಣಯ ಭಿಕ್ಷೆಯನ್ನು ರಾಮ ತಿರಸ್ಕರಿಸುತ್ತಾನೆ. ಮಥುರೆಯ ಚಾಡಿ ಮಾತು ಕೇಳಿದ ಕೈಕೇಯಿಯ ಹಠದಿಂದಾಗಿ ದಶರಥನ ಕನಸುಗಳು ಭಗ್ನಗೊಳ್ಳುತ್ತವೆ. ಮಲೆಕುಡಿಯ ಪಂಡಿತನ ವೇಷದಲ್ಲಿ ರಾವಣ, ಜಿಂಕೆಯ ವೇಷದಲ್ಲಿ ಶೂರ್ಪನಖಿ ಸೀತಾಪಹರಣಕ್ಕಾಗಿ ಬರುತ್ತಾರೆ. ಹನುಮಂತ ಈಜಿಕೊಂಡು ಕಡಲನ್ನು ದಾಟುತ್ತಾನೆ. ಸೀತೆಯನ್ನು ಭೇಟಿಯಾದ ವಿಭೀಷಣ - ಸರಮೆ ದಂಪತಿಗಳನ್ನು ರಾವಣ ಬಂಧನದಲ್ಲಿಡುತ್ತಾನೆ. ಸುಗ್ರೀವನ ಸೈನಿಕರು ಅಪ್ಪಣ್ಣನ ದೋಣಿಗಳಲ್ಲಿ ಕಡಲನ್ನು ದಾಟುತ್ತಾರೆ. ರಾವಣ ಕುಂಭಕರ್ಣರಿಗೆ ಮದ್ದು ಹಾಕಿಸಿ, ಅವನನ್ನು ಅತಿನಿದ್ದೆಯ ಬೆಪ್ಪನನ್ನಾಗಿ ಮಾಡಿದ್ದಾನೆ. ಕುಂಭಕರ್ಣನ ಬಂಧನವಾದ ಮೇಲೆ ರಾಮ ಅವನಿಗೆ ತೂಟಣ್ಣ ಪಂಡಿತರಿಂದ ಚಕಿತ್ಸೆ ಮಾಡಿಸುತ್ತಾನೆ. ಯುದ್ಧದಲಲ್ಲಿ ರಾವಣ ಸತ್ತಮೇಲೆ, ರಾಮ ಕುಂಭಕರ್ಣರನ್ನು ಅರಸನನ್ನಾಗಿ ಮಾಡುತ್ತಾನೆ. ಅಂಗದನ ಮದುವೆ ವಿಭೀಷಣನ ಮಗಳು ಸೋಮಕ್ಕನೊಡನೆ ನಡೆಯುತ್ತದೆ. ರಾಮ, ಸೀತೆ, ಲಕ್ಷ್ಮಣರೊಡನೆ ಶಬರಿ ಹಾಗೂ ಗುಹ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಬರುತ್ತಾರೆ. ಮಥುರೆಯ ತಾಯಿಯಾದ ಶಬರಿ ಮಗಳ ಕೃತ್ಯಕ್ಕೆ ಹೇಸಿ ಪಂಪಾಕ್ಷೇತ್ರಕ್ಕೆ ಹೋಗಿ ದೇವರ ಸೇವೆ ಮಾಡುತ್ತಿದ್ದಳೆಂದು ಕೊನೆಯಲ್ಲಿ ತಿಳಿಯುತ್ತದೆ.

'ಮಂದಾರ ರಾಮಾಯಣ' ವಾಸ್ತವವಾದ ಪ್ರಭಾವದಿಂದ ಪುರಾಣಭಂಜನೆಯ ಮಾರ್ಗ ಹಿಡಿದಿರುವ ಆಧುನಿಕ ಕಾವ್ಯ - ಬೈಗಳ ಭಾಷೆ, ಸಂಭಾಷಣೆ, ಯುದ್ಧವರ್ಣನೆಗಳಲ್ಲಿ 'ಮಂದಾರ ರಾಮಾಯಣ' ತುಳುನಾಡಿನ ರಾಮಾಯಣ-ವಾಗಿದೆ. ಜಾತಿಗಳು ಮಾತ್ರವಲ್ಲ, ಭಾಷೆಗಳೂ ಸಂಸ್ಕೃತಾನುಸರಣ ಮಾಡುತ್ತವೆ. ವಸ್ತುವಿನ ಆಯ್ಕೆಗಾಗಿ ಸಂಸ್ಕೃತಾನುಸರಣ ಮಾಡಿ ಅನಂತರ ನಿರೂಪಣೆಯಲ್ಲಿ 'ದೇಸಿಯೊಳ್ ಪುಗುವುದು' ಮಂದಾರ ರಾಮಾಯಣದ ವೈಶಿಷ್ಟ್ಯ. ಜಾನಪದ ಕಾವ್ಯಗಳ ('ಪಾಡ್ದನಗಳು') ಸತ್ವವನ್ನು ಹೀರಿಕೊಂಡು, ಸಮಕಾಲೀನ ತುಳುವಿಗೆ ಹತ್ತಿರವಾಗಿರುವ ಕೇಶವ ಭಟ್ಟರ ಶೈಲಿಯಲ್ಲಿ ಭಾಷೆಯನ್ನು ಅತ್ಯುನ್ನತಿಯತ್ತ ಒಯ್ಯುವ ಪ್ರತಿಭಾಶಾಲಿಯ ಮುನ್ನೋಟವಿದೆ. ಮಹಾಪರಂಪರೆಯ ರಾಮಾಯಣ-ವನ್ನು, ಕಿರುಪರಂಪರೆಯ ತುಳು ಭಾಷೆಯಲ್ಲಿ ಪುನರ್ ಸೃಷ್ಟಿಸುವುದ-ರಲ್ಲಿ ತಮ್ಮ ಕಾಲದ ಈ ಮಹಾಕವಿ ಯಶಷ್ವಿಯಾಗಿದ್ದಾರೆ. 'ಜಾಗಂಟೆ' (1991) ಸಂಕಲನದಲ್ಲಿ-ರುವ 'ಏಕಿನಿಕಣರ್ೆ' ಹಾಗೂ 'ಬೀರದ ಬೊಲ್ಪು' (1997) ಮಂದಾರ ಕೇಶವ ಭಟ್ಟರ ಕಥನ ಕವನಗಳು. ಕೃಷ್ಣನ ಬಾಲಲೀಲೆಗಳನ್ನು ವಣರ್ಿಸುವ 'ಬೀರದ ಬೊಲ್ಪು', ಸಾಂಗತ್ಯ, ಚೌಪದಿ, ಲಲಿತ ರಗಳೆ, ದ್ವಿಪದಿ - ಹೀಗೆ ಛಂದೋವೈವಿಧ್ಯದಿಂದ ಕೂಡಿರುವ ಸಾರ್ಥಕ ಕೃತಿ.

'ಆಲಡೆ' (1983), 'ಕುಡಲ ಮಲ್ಲಿಗೆ' (1998) ಸಂಕಲನಗಳ ಕವಿ ವೆಂಕಟರಾಜ ಪುಣಿಂಚತ್ತಾಯರು ಕೆಲವು ಒಳ್ಳೆಯ ಭಾವಗೀತೆಗಳನ್ನೂ ಬರೆದಿದ್ದಾರೆ. 'ಆಲಡೆ', 'ಉಂದೆನಾ ಬೇತನಾ', 'ಪಾರ್ತನೊ', ಬೊಳ್ಳಾರ ಮಾಣಿಕ', 'ಪಾವೆ ಬಂಡಿ', ಇವು ಪುಣಿಂಚತ್ತಾಯರ ಚಿಂತನಪರ ಕವನಗಳು. ಇವು ಅವರ ಪ್ರಾತಿನಿಧಿಕ ಕವನಗಳೂ ಹೌದು. 'ಆಲಡೆ' ಕವನದಲ್ಲಿ ಆದರ್ಶ ಭೂತಕಾಲವೊಂದನ್ನು ಕಳೆದುಕೊಂಡದ್ದರ ಕುರಿತ ವಿಷಾದ ಕಾಣಿಸುತ್ತದೆ. 'ಉಂದೆನಾ ಬೇತೆನಾ' ಕವನದಲ್ಲಿ ಕವಿ, ತುಳುನಾಡು ಒಂದು ಆದರ್ಶ ರಾಜ್ಯವಾಗಿತ್ತು ಎನ್ನುತ್ತಾರೆ. ತುಳುನಾಡಿನವರ ಸಾಂಸ್ಕೃತಿಕ ವಿಸ್ಮೃತಿಯನ್ನು ಕುರಿತು ವಿಷಾದಿಸುವ ಕವಿ, 'ಇಲ್ಲಿನ ಸಂಗತಿಗಳನ್ನು ತಿಳಿಯಲು ಜರ್ಮನಿಗೋ, ಇಟೆಲಿಗೋ ಹೋಗಬೇಕಾದೀತು' ಎಂದು ಎಚ್ಚರಿಸುತ್ತಾರೆ. ಪುಣಿಂಚತ್ತಾಯರ ಕವನಗಳಲ್ಲಿ ಪಾಂಡಿತ್ಯ ಪ್ರದರ್ಶನವಿಲ್ಲ. 'ತುಳುವಪ್ಪೆ'ಯ ಬಗೆಗಿನ ಭಕ್ತಿಯ ಅತಿರೇಕವೂ ಇಲ್ಲ. ತುಳುನಾಡಿನ ಭೂತಕಾಲ ಚೆನ್ನಾಗಿತ್ತು ಎಂದು ನಂಬುವ ಈ ಆಸ್ತಿಕ ಕವಿ ವರ್ತಮಾನ ಕಾಲದ ಸಾಂಸ್ಕೃತಿಕ ವೈರುಧ್ಯಗಳಿಗೆ ಕುರುಡಾಗಿಲ್ಲ.

'ತಂಬಿಲ' (1984) ಹಾಗೂ 'ರಂಗಿತ' (1987) ಇವು ಅಮೃತ ಸೋಮೇಶ್ವರ ಅವರ ಕವನ ಸಂಕಲನಗಳು. ಇವರು ಕೆಲವು ಚೆಲುವಿನ ಭಾವಗೀತೆಗಳನ್ನು, ಪ್ರಣಯಗೀತೆಗಳನ್ನು ಬರೆದಿದ್ದಾರೆ. 'ಭೂತಾರಾಧನೆಯ ಸಾಂಸ್ಕೃತಿಕ ಹೆಚ್ಚಳವನ್ನು ಗುರುತಿಸುವಾಗ ಕೇವಲ ಅದರ ಉದಾತ್ತ ಮುಖವನ್ನು ಮಾತ್ರ ನೋಡದೆ ಅದರೊಳಗಿರುವ ಸ್ವಾರ್ಥ ಹಾಗೂ ಶೋಷಣೆಯ ಮುಖವನ್ನು ನೋಡಬೇಕಾಗುತ್ತದೆ', ಎನ್ನುವ ಕವಿ ಅಮೃತ ಸೋಮೇಶ್ವರ ಅವರು ತುಳುನಾಡಿನ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುತ್ತಾರೆ.

'ಬಯ್ಯಮಲ್ಲಿಗೆ' (1981) ಸಂಕಲನದ ಪಾ. ವೆಂ. ಆಚಾರ್ಯರ ಕವನಗಳು ತಮ್ಮ ವೈಚಾರಿಕತೆಯಿಂದ ಗಮನ ಸೆಳೆಯುತ್ತವೆ. 'ಗೋಪಿ', 'ಬಡವು', 'ಅರ್ತ', 'ಬಯ್ಯಮಲ್ಲಿಗೆ' ಸಂಕಲನದ ಮುಖ್ಯ ಕವನಗಳು. ಪುರಾಣಗಳ ಕನಸಿನ ಲೋಕಕ್ಕೂ ನಮ್ಮ ದಿನನಿತ್ಯದ ಬದುಕಿಗೂ ವ್ಯತ್ಯಾಸವಿದೆ. 'ಭಾಗವತ'ದ ಗೋಪಿ ವಸ್ತ್ರಾಪ-ಹರಣ ಪ್ರಸಂಗವನ್ನು ನೆನಪಿಸುವ 'ಗೋಪಿ' ಕವನದಲ್ಲಿ ಗೋಪಿ ಎಷ್ಟು ಕಾದರೂ ಕೃಷ್ಣ ಬರುವುದೇ ಇಲ್ಲ. 'ಅರ್ತ' ಕವನದಲ್ಲಿ ಆಚಾರ್ಯರು ಬದುಕಿನ ಅರ್ಥವೇನೆಂದು ಚಿಂತಿಸುತ್ತಾರೆ. ಪಾ. ವೆಂ. ಆಚಾರ್ಯರ 'ಆಯೆ ಬತ್ತೆ ಉಂಬೆ ಬತ್ತೆ' ತುಳುವಿನ ಒಂದು ಅಸಾಧಾರಣ ಕವನ. ಈ ಕವನದ ಮೊದಲ ಭಾಗದಲ್ಲಿ ಕವಿ ಬುದ್ಧ, ಯೇಸು, ಗಾಂಧೀಜಿಯ ಸಂದೇಶವನ್ನು ನೆನಪಿಸುತ್ತಾರೆ. ಎರಡನೆಯ ಭಾಗದಲ್ಲಿ ಮಂತ್ರಗಳ ಅರ್ಥ ಮರೆತು, ರಸ್ತೆಗೆ ಬಂದು ಜಗಳಾಡುವ ಭಕ್ತರ ಚಿತ್ರಣವಿದೆ. ಮನುಷ್ಯರ ಯೋಗಕ್ಷೇಮಕ್ಕಾಗಿ ಸೃಷ್ಟಿಯಾದ ಧರ್ಮ ಹಲವು ಯುದ್ಧಗಳಿಗೆ ಕಾರಣವಾಗಿರುವುದನ್ನು, ಮನುಷ್ಯ ಇನ್ನೂ ಪ್ರಾಣಿಯಾಗಿಯೇ ಉಳಿದಿರುವುದನ್ನು ಕಂಡ ಕವಿಯ ವಿಷಾದ ಈ ಕವನದಲ್ಲಿದೆ.6
ಕನರಾಡಿ ವಾದಿರಾಜ ಭಟ್ಟರ 'ಜೀವನ ಪಾಡ್ದನ' (1989)ದಲ್ಲಿರುವ 'ಚಿನ್ನಕ್ಕ' ಆಧುನಿಕ ತುಳು ಸಾಹಿತ್ಯದ ಉತ್ತಮ ಕಥನ ಕವನಗಳಲ್ಲೊಂದು. ಅಸಹಾಯಕರಾದ ತಾಯಿ-ಮಗಳ ಈ ದುರಂತ ಕತೆಯನ್ನು ಕವಿ ಮನಸೆಳೆವ ರೂಪಕಗಳ ಮೂಲಕ, ಧ್ವನಿ ರಮ್ಯತೆಯೊಂದಿಗೆ ವಣರ್ಿಸುತ್ತಾರೆ. ತುಳು 'ಪಾಡ್ದನ'ಗಳ ಪರಂಪರೆಗಳು ಸೃಜನಶೀಲವಾಗಿ ಮುನ್ನಡೆಸುವ ಕವಿ ಪ್ರತಿಭೆ ಈ ಕಥನ ಕವನದಲ್ಲಿ ಕಾಣಿಸುತ್ತದೆ. ಬಿ. ದೂಮಪ್ಪ ಮಾಸ್ತರ್ ಅವರ 'ಮಾದಿರನ ಗಾದೆ' (1973) ಒಂದು ಹೊಸ ರೀತಿಯ ಕಾವ್ಯ ಪ್ರಯೋಗ. ತುಳು ಗಾದೆಗಳನ್ನು ಜನಪದ ಸಾಹಿತ್ಯದ ಮಾದಿರ ಪದಗಳ ಧಾಟಿಯಲ್ಲಿ ರೂಪಾಂತರಿಸಿ ಬರೆದಿರುವುದು ಇಲ್ಲಿನ ವೈಶಿಷ್ಟ್ಯ. ಕಯ್ಯಾರ ಕಿಞ್ಞಣ್ಣ ರೈಗಳು ಯೌವನದಲ್ಲಿ ಬರೆದ ತುಳು ಕವನಗಳು 'ಎನ್ನಪ್ಪ ತುಳುವಪ್ಪೆ' (1994) ಸಂಕಲನದಲ್ಲಿವೆ. ಕನ್ನಡದ 'ಪುಣ್ಯಕೋಟಿ'ಯನ್ನು ರೈಗಳು ಸೊಗಸಾಗಿ ತುಳುವಿಗೆ ಭಾಷಾಂತರಿಸಿದ್ದಾರೆ.

'ಪಿಂಗಾರ' (1986), 'ಸಂಕ್ರಾಂತಿ' (1989), 'ನಾಗಸಂಪಿಗೆ' (1994) ಸಂಕಲನಗಳ ಸುನೀತಾ ಶೆಟ್ಟಿ ಮುಂಬಯಿ ಮಹಾನಗರದಲ್ಲಿರುವ ತುಳು ಕವಯಿತ್ರಿ. ಈ ಕವಯಿತ್ರಿಯ ಮನದಾಳದಲ್ಲಿ ತುಳುನಾಡಿನ ನೆನಪುಗಳು, ಬಾಲ್ಯದ ವರ್ಣರಂಜಿತ ಕನಸುಗಳು ತುಂಬಿವೆ. ತುಳುನಾಡಿನ ಮಣ್ಣಿನ ವಾಸನೆಯಿರುವ ಶೈಲಿ, ನಾದಶಕ್ತಿ - ಅರ್ಥಶಕ್ತಿಗಳ ಸಂಗಮ, ಚಿಂತನಯೋಗ್ಯ ವಿಚಾರಗಳು, ಕಾವ್ಯಕೌಶಲ - ಇವು ಈ ಕವಯಿತ್ರಿಯ ವೈಶಿಷ್ಟ್ಯಗಳಾಗಿವೆ. ಜನಪದ  ಸಾಹಿತ್ಯದಿಂದ ಪ್ರೇರಣೆ ಪಡೆದಿರುವ 'ಪರತಿ - ಮಂಗಣೆ' ಕಥನ ಕವನ ಸುನೀತಾ ಶೆಟ್ಟಿ ಅವರ ಪ್ರಾತಿನಿಧಿಕ ಕೃತಿ. ಪ್ರಮೋದ ಸುವರ್ಣರ 'ಪದ-ರಂಗಿತ' (1996)ದಲ್ಲಿ ಸೊಗಸಾದ ಭಾವಗೀತೆಗಳಿವೆ. ಗಂಡನ್ನು ಕುರಿತು ಹೆಣ್ಣಿನ ಕನಸುಗಳು ಈ ಸಂಕಲನದ ಕವನಗಳಲ್ಲಿವೆ.

'ಪಚ್ಚೆಕುರಲ್' (1987), 'ದುನಿಪು' (1993) ಸಂಕಲನಗಳ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ಕೆಲವು ಸತ್ವಪೂರ್ಣ ಭಾವಗೀತೆಗಳನ್ನು ಬರೆದಿದ್ದಾರೆ. ಪಡಾರು ಮಹಾಬಲೇಶ್ವರ ಭಟ್ಟರ 'ಪಿಂಗಾರ' (1986), ರಸಿಕ ಪುತ್ತಿಗೆ ಅವರ 'ಪರಬನ ಮೋಕೆ' (1988), ಅ. ಬಾಲಕೃಷ್ಣ ಶೆಟ್ಟಿ, ಪೊಳಲಿ ಅವರ 'ಪೆಂಗಬೂಮನ ಪದೊಕುಲು', ಎಂ. ರತ್ನಕುಮಾರ್ ಅವರ 'ರತ್ನದ ಕರ್ಮ' (1979)-ಗಮನಾರ್ಹ ತುಳು ಕವನ ಸಂಕಲನಗಳು. ಪಿ. ಈಶ್ವರ್ ಭಟ್ ಪುತ್ತಿಗೆ ಅವರು ಬ್ರಾಹ್ಮಣರ ತುಳುವಿನಲ್ಲಿ, ರತ್ನಕುಮಾರ್ ಅವರು ಜೈನರ ತುಳುವಿನಲ್ಲಿ ಕವನಗಳನ್ನು ಬರೆದಿದ್ದಾರೆ. ಪುರ್ಪ (1987) ಮತ್ತು 'ಬಾನೊ ತೋರೊಂದುಂಡು' (1997) ಸಂಕಲನಗಳ ಎಸ್. ಪಿ. ಮಂಚಿ, 'ಬೀರ' (1997) ಸಂಕಲನದ ವಾಮನ ನಂದಾವರ, 'ಮದಿಮಾಲೆ ಪಾಡ್ದನ' (1995) ಸಂಕಲನದ ಆತ್ರಾಡಿ ಅಮೃತಾ ಶೆಟ್ಟಿ, 'ಕೂಕುಳು' (1994) ಸಂಕಲನದ ಜೆ. ತಿಮ್ಮ ಪೂಜಾರಿ ಗೇಯತೆ ಇಲ್ಲದ ಕವನಗಳನ್ನು ಬರೆಯುತ್ತಿದ್ದಾರೆ. ಎಸ್. ಪಿ. ಮಂಚಿಯವರ ಕವನಗಳಲ್ಲಿ ತೀಕ್ಷ್ಣವಾದ ರಾಜಕೀಯ ಸಾಮಾಜಿಕ ವಿಡಂಬನೆ ಇದೆ. 'ಅರ್ಲು ಕಬಿತೆಲು', 'ಪೊಲರ್ು ಕಬಿತೆಲು' (1990-ಸಂ. ಕೃಷ್ಣಾನಂದ ಹೆಗ್ಡೆ). 'ಪ್ರಾತಿನಿಧಿಕ ತುಳು ಕಬಿತೆಲು' (1994-ಸಂ. ವಸಂತಕುಮಾರ್ ಪೆರ್ಲ), 'ಪರ್ವ ಪರ್ಬದ ಕೆಲರ್ು ಕಬಿತೆಲು' (1997-ಸಂ. ಮುದ್ದು ಮೂಡುಬೆಳ್ಳೆ) - ಈ ಸಂಕಲನಗಳಲ್ಲಿ ತುಳು ಕವಿಗಳ ಪ್ರಾತಿನಿಧಿಕ ಕವನಗಳು ಸಿಗುತ್ತವೆ.

ಮೂಲ್ಕಿ ನರಸಿಂಗ ರಾಯರು (1875-1945) ತನ್ನ' ಗೀತೆ ಮಲ್ಲಿಗೆ' (1934)ಯಲ್ಲಿ 'ಭಗವದ್ಗೀತೆ'ಯನ್ನು ಪದ್ಯರೂಪದಲ್ಲಿ ತುಳುವಿಗೆ ಭಾಷಾಂತರಿಸಿದ್ದಾರೆ. ಎನ್. ಸೀತಾರಾಮ ಆಳ್ವರು ತನ್ನ 'ಗೀತೆದ ತಿರ್ಲ್' (1981) ಕೃತಿಯಲ್ಲಿ ಭಗವದ್ಗೀತೆಯ ಸಾರಾಂಶವನ್ನು ತುಳು ಭಾಮಿನಿ ಷಟ್ಪದಿಯಲ್ಲಿ ನೀಡಿದ್ದಾರೆ. ಕೆದಂಬಾಡಿ ಜತ್ತಪ್ಪ ರೈಗಳ 'ಅಜ್ಜಬಿರು' (1987, ಎಸ್. ವಿ. ಪರಮೇಶ್ವರ ಭಟ್ಟರ 'ಇಂದ್ರಚಾಪ' ಮತ್ತು ಇತರ ಕವನಗಳಅನುವಾದ.), 'ಕುಜಲಿ ಪೂಜೆ' (1989, ಉಮರ್ ಖಯ್ಯಾಮನ ರುಬಾಯತ್) 'ಅಸೆನಿಯಾಗೊ, ಕಾಂತಗೊ ಜೋಗಿ' (1994, ಕುವೆಂಪು ಅವರ 'ಕಿಂದರಿಜೋಗಿ'), 'ರತ್ನದ ಪದೊಕುಲು' (1979, ಜಿ. ಪಿ. ರಾಜರತ್ನಂ ಅವರ 'ರತ್ಬದ ಪದಗಳು), ಅ. ಬಾಲಕೃಷ್ಣ ಶೆಟ್ಟಿ ಪೊಳಲಿ ಅವರ 'ಪೊಡುಂಬ ತಿಂಮನ ಕಗ್ಗ' (1988, ಡಿ. ವಿ. ಜಿ. ಅವರ 'ಮಂಕುತಿಮ್ಮನ ಕಗ್ಗ'), ಅಮೃತ ಸೋಮೇಶ್ವರ ಅವರ 'ಮೋಕೆದ ಬೀರೆ ಲೆಮಿನ್ಕಾಯೆ' (1985, ಫಿನ್ಲೆಂಡಿನ ಜನಪದ ಮಹಾಕಾವ್ಯ 'ಕಾಲೆವಾಲ'ದ ಒಂದು ಭಾಗ) ಕಬ್ಬಿನೆಲೆ ವಸಂತ ಭಾರಧ್ವಾಜರ 'ಪುರಂದರ ದಾಸೆರೆ ಪದೊಕುಲು' (1999) - ಇಂಥ ಕೃತಿಗಳಿಂದ ತುಳು ಕಾವ್ಯ ಸಮೃದ್ಧಗೊಂಡಿದೆ. ಕೆ. ಟಿ. ಗಟ್ಟಿಯವರು 'ಎನ್ನ ಮೋಕೆದ ಪೊಣ್ಣು' (1997) ಸಂಕಲನದಲ್ಲಿ ಷೇಕ್ಸಪಿಯರ್, ಜಾನ್ಡನ್, ಮಿಲ್ಟನ್, ವಿಲಿಯಂ ಬ್ಲೇಕ್, ವಡ್ಸ್ವತರ್್, ಬೈರನ್, ಕೀಟ್ಸ್, ಬ್ರೌನಿಂಗ್, ಯೇಟ್ಸ್ ಮತ್ತಿತರ ಕವಿಗಳ ಐವತ್ತೊಂದು ಪ್ರೇಮ ಕವನಗಳನ್ನು ತುಳುವಿಗೆ ಭಾಷಾಂತರಿಸಿದ್ದಾರೆ. ಭಾಷಾಂತರ ಕೃತಿ ತನ್ನ ಪೂರ್ವಜನ್ಮವನ್ನು ಮರೆಯಬಾರದು ಎಂಬುದು ಗಟ್ಟಿಯವರ ನಿಲುವು.

ಕೆಲಿಂಜ ಸೀತಾರಾಮ ಆಳ್ವರ ತುಳು 'ಹರಿಶ್ಚಂದ್ರ ಕಾವ್ಯೊ' (1994) ತುಳು ಕಾವ್ಯದ ಮುನ್ನಡೆಯಲ್ಲಿ ಒಂದು ದಿಟ್ಟ ಹೆಜ್ಜೆ. ಕನ್ನಡ ಮೂಲದಲ್ಲಿ ವಾರ್ಧಕ ಷಟ್ಪದಿಯಲ್ಲಿರುವ ಈ ಕಾವ್ಯವನ್ನು ತುಳು ಸಾಂಗತ್ಯದಲ್ಲಿ ಬರೆದಿರುವುದಲ್ಲಿಯೇ ಆಳ್ವರ ಪ್ರಯೋಗಶೀಲತೆ ಕಾಣೀಸುತ್ತದೆ. ಇದೊಂದು ಸೃಜನಶೀಲ ಪುನರ್ ಸೃಷ್ಟಿ. ಕೆಲಿಂಜ ಸೀತಾರಾಮ ಆಳ್ವರು ತುಳುವಿಗೆ ಭಾಷಾಂತರಿಸಿರುವ ಕುಮಾರವ್ಯಾಸ ಭಾರತ ಅಪ್ರಕಟಿತವಾಗಿ ಉಳಿದಿದೆ. ಡಿ. ವೇದವತಿ ಲಕ್ಷ್ಮೀಶನ 'ಜೈಮಿನಿ ಭಾರತ'ವನ್ನು ತುಳು 'ಜೈಮಿನಿ ಭಾರತೊ' (1999) ಎಂಬ ಹಎಸರಿನಲ್ಲಿ ಭಾಷಾಂತರಿಸಿದ್ದಾರೆ. ವಾಧಕ ಷಟ್ಪದಿಯ ಸ್ಥೂಲರೂಪವನ್ನು ಉಳಿಸಿಕೊಂಡಿರುವ ಇವರು ಕಾವ್ಯವನ್ನು ಅಲ್ಲಲ್ಲಿ ಸಂಕ್ಷೇಪಿಸಿದ್ದಾರೆ. ಎನ್. ಪಿ. ಶೆಟ್ಟಿಯವರ 'ಬತ್ತೆ ಕೆತ್ತರ ಉತ್ತರೆ' (1992) ಕುಮಾರ ವ್ಯಾಸ ಭಾರತದ ಆಧಾರದಿಂದ ತುಳು ಭಾಮಿನಿ ಷಟ್ಪದಿಯಲ್ಲಿ ಬರೆದಿರುವ ಪುಟ್ಟ ಕಾವ್ಯ. ತುಳುನಾಡಿನಲ್ಲಿ ಕನ್ನಡದ ಪ್ರಭಾವ ದಟ್ಟವಾಗಿದೆ. ಕನ್ನಡ ಕೃತಿಗಳ ಭಾಷಾಂತರಗಳ ಮೂಲಕ ತುಳು ಕಾವ್ಯದಲ್ಲಿ ಸೃಜನಶೀಲ ಪ್ರಯೋಗಗಳನ್ನು, ಕಾವ್ಯ ಪರಂಪರೆಯೊಂದನ್ನು ಬೆಳೆಸಲು ತುಳುಕವಿಗಳು ಪ್ರಯತ್ನಿಸುತ್ತಿದ್ದಾರೆ. ಮಂದಾರ ಕೇಶವ ಭಟ್ಟರು ತನ್ನ 'ಮಂದಾರ ರಾಮಾಯಣ'ವನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

ಕಿಲ್ಲೆ ನಾರಾಯಣ ಶೆಟ್ಟರು ತನ್ನ ತುಳು ಕಾವ್ಯದ ದಿಕ್ಸೂಚಿ ಕೃತಿ 'ಕಾನಿಗೆ' (1932)ಯಲ್ಲಿ ಕೆಲವು ಶಿಶುಗೀತೆಗಳನ್ನು ಬರೆದಿದ್ದರು. ಕನರಾಡಿ ವಾದಿರಾಜ ಭಟ್ಟರ 'ಜೋಕುಳೆ ಪದೊಕುಲು' (1992), ಪ್ರಮೋದ ಕೆ. ಸುವರ್ಣ 'ತಾಟಿ ತೆಂಬರೆ' (1999) ಕೃತಿಗಳಲ್ಲಿ ತುಳು ಮಕ್ಕಳು ಕುಣಿದಾಡಿಕೊಂಡು ಹಾಡಬಹುದಾದ ಅಂದ-ಚೆಂದದ ಶಿಶುಗೀತೆಗಳಿವೆ. ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ತುಳು ಜಾನಪದ ಸಾಹಿತ್ಯವನ್ನು ಆಧರಿಸಿದ ಅನೇಕ ಗದ್ಯಕೃತಿಗಳನ್ನು ಮಕ್ಕಳಿಗಾಗಿ ಪ್ರಕಟಿಸಿದೆ.

No comments:

Post a Comment