ತುಳುವ ಸಾಹಿತ್ಯಮಾಲೆ
ಪಣಿಯಾಡಿಯವರು ತುಳು ಚಳವಳದ ಒಂದು ಐತಿಹಾಸಿಕ ಮಹತ್ತ್ವದ ಕೆಲಸ 'ತುಳುವ ಸಾಹಿತ್ಯಮಾಲೆ'. 'ತುಳುವ ಸಾಹಿತ್ಯಮಾಲೆ'ಯಲ್ಲಿ ಪಣಿಯಾಡಿಯವರು ಪ್ರಕಟಿಸಿದ ಪುಸ್ತಕಗಳಿವು -
1. ಬಡಕಬೈಲ್ ಪರಮೇಶ್ವರಯ್ಯ (ಜನನ 1881) ಅವರ 'ತುಳು ಕಿಟ್ನರಾಜಿ ಪರ್ಸಂಗೊ' (ಯಕ್ಷಗಾನ ಪ್ರಸಂಗ - 1929)
2. ಪೊಳಲಿ ಶೀನಪ್ಪ ಹೆಗ್ಡೆ (1889-1966) ಅವರ 'ತುಳುವಾಲ ಬಲಿಯೇಂದ್ರ' (ಖಂಡ ಕಾವ್ಯ - 1929)
3. ಸತ್ಯಮಿತ್ರ ಬಂಗೇರರ 'ಅಳಿಯ ಸಂತಾನ ಕಟ್ಟ್‌ದ ಗುಟ್ಟು' (ಸಂಶೋಧನೆ - 1929)
4. ಕೆ.ಬಿ. ನಾರಾಯಣ ಶೆಟ್ಟಿ ಕಿಲ್ಲೆ (1901-1953) ಅವರ 'ಕಾನಿಗೆ' (ಕವನ ಸಂಕಲನ - 1932)
5. ಎಸ್. ಯು. ಪಣಿಯಾಡಿಯವರ - 'ತುಳು ವ್ಯಾಕರಣ' (1932)
6. ಮಾಧವ ತಿಂಗಳಾಯರ (1913-1934) 'ಜನಮರ್ಲ್' (ನಾಟಕ - 1933)
7. ಎಂ. ವಿಠಲ ಹೆಗ್ಡೆ ಅವರ 'ಮದ್ಮಳತ್ತ್ ಮದ್ಮಯೆ' (ನೀಳ್ಗತೆ - 1933)
8. ಪೊಳಲಿ ಶೀನಪ್ಪ ಹೆಗ್ಡೆ ಅವರ 'ಬಂಗಾರ್‌ದಂಗಿದ ಕತೆ' (ನೀಳ್ಗತೆ - 1933)
9. ತುಳು ಪದ್ಯಮಾಲಿಕೆ
10. ಪೊಳಲಿ ಶೀನಪ್ಪ ಹೆಗ್ಡೆ ಅವರ - 'ಮಿತ್ಯ ನಾರಾಯಣ ಕತೆ' (ಕಾದಂಬರಿ 1935)
11. ಎಸ್. ಯು. ಪಣಿಯಾಡಿಯವರ - 'ಸತೀ ಕಮಲೆ' (ಕಾದಂಬರಿ - 1936)
ತುಳುವ ಸಾಹಿತ್ಯಮಾಲೆಯ ಪ್ರಕಟಣೆಗಳನ್ನು ನೋಡುವಾಗ ಅವುಗಳಲ್ಲಿ ಎರಡು ಕಾದಂಬರಿಗಳು, ಎರಡು ಕವನ ಸಂಕಲನಗಳು, ಎರಡು ನೀಳ್ಗತೆಗಳು, ಒಂದು ವ್ಯಾಕರಣ ಕೃತಿ, ಒಂದು ಸಂಶೋಧನ ಗ್ರಂಥ, ಒಂದು ನಾಟಕ, ಒಂದು ಖಂಡ ಕಾವ್ಯ ಹಾಗೂ ಒಂದು ಯಕ್ಷಗಾನ ಪ್ರಸಂಗ ಇವೆ.
ಬಾಸೆಲ್ ಮಿಶನ್‍ನವರ ಮುದ್ರಣಾಲಯ 1841ರಲ್ಲಿ ಮಂಗಳೂರಿನಲ್ಲಿ ಆರಂಭಗೊಂಡಿತು. ತುಳು 'ಮತ್ತಾಯನ 'ಸುವಾರ್ತೆಯನ್ನು ಬಾಸೆಲ್ ಮಿಶನ್ 1842ರಲ್ಲಿ ಪ್ರಕಟಿಸಿತು. ರೆ.ಜೆ.ಜೆ. ಅಮ್ಮನ್ನರ 'ಸತ್ಯವೇದ' ತುಳು ಭಾಷಾಂತರ, ರೆ. ಕ್ಯಾಮರೆರ್‌ರ 'ತುಳು ಕೀರ್ತನೆಗಳು', ರೆ. ಆಗಸ್ಟ್‌ಮ್ಯಾನರ್‌ರ 'ತುಳು-ಇಂಗ್ಲಿಷ್ ನಿಘಂಟು (1886), 'ಇಂಗ್ಲಿಷ್-ತುಳು ನಿಘಂಟು' (1888), ಜೋನ್ ಜೇಮ್ಸ್ ಬ್ರಿಗೆಲ್‍ರ 'ತುಳು ವ್ಯಾಕರಣ', ಗಾಬ್ರಿಯಲ್ ಬಂಗೇರರ 'ಒಂದು ಸಾವಿರ ತುಳು ಗಾದೆಗಳು' (1896) - ಈ ಪುಸ್ತಕಗಳು ಬಾಸೆಲ್ ಮಿಶನ್‍ನಲ್ಲಿಪ್ರಕಟವಾದುವು. ತುಳು ಗಾದೆಗಳ ಸಂಗ್ರಹ, ಕ್ರೈಸ್ತ ಸಾಹಿತ್ಯದ ತುಳು ಭಾಷಾಂತರದ ಕೆಲಸಗಳನ್ನು ಬಾಸೆಲ್ ಮಿಶನ್ ಆರಂಭಿಸಿತು. ಬಾಸೆಲ್ ಮಿಶನ್‍ನವರು ತುಳು ಚಳವಳಕ್ಕೆ ಪ್ರೇರಣೆ ನೀಡಿದರು. ತನ್ನ 'ತುಳುವ ಸಾಹಿತ್ಯಮಾಲೆ'ಯಲ್ಲಿ ಕತೆ, ಕವನ, ಕಾದಂಬರಿ, ನಾಟಕ, ಸಂಶೋಧನೆ, ವ್ಯಾಕರಣ - ಇಂಥ ಪುಸ್ತಕಗಳನ್ನು ಪ್ರಕಟಿಸಿ ಪಣಿಯಾಡಿಯವರು ತುಳುವಿನ ನವೋದಯಕ್ಕೆ ನಾಂದಿ ಹಾಡಿದರು, ಪಂಚಾಂಗ ಕಟ್ಟಿದರು.
ತುಳು ಚಳವಳದ ಒಂದು ಕಾರ್ಯಕ್ರಮವಾಗಿ ಪಣಿಯಾಡಿಯವರು ತುಳುನಾಡಿನ ಕನ್ನಡ ಪತ್ರಿಕೆಗಳಲ್ಲಿ ತುಳು ಪುರವಣಿ ಪ್ರಕಟಿಸುವ ಯೋಜನೆ ಮಾಡಿದರು. ಉಡುಪಿಯ, ಕೆ. ಹೊನ್ನಯ್ಯ ಶೆಟ್ಟರ ಸಂಪಾದಕತ್ವದ 'ನವಯುಗ' ವಾರಪತ್ರಿಕೆ 1936-39ರಲ್ಲಿ ತುಳು ಪುರವಣಿಯನ್ನು ಪ್ರಕಟಿಸುತ್ತಿತ್ತು. 'ನವಯುಗ' ಪತ್ರಿಕೆ 1940ರ ವರೆಗೆ ಪಣಿಯಾಡಿಯವರ ತುಳುನಾಡು ಪ್ರೆಸ್‍ನಲ್ಲಿ ಮುದ್ರಣಗೊಳ್ಳುತ್ತಿತ್ತು. ಕೊರಡ್ಕಲ್ ಶ್ರೀನಿವಾಸ ರಾವ್ ಮತ್ತು ಇತರ ಸಾಹಿತಿಗಳ ಕನ್ನಡ ಕೃತಿಗಳನ್ನು ಪಣಿಯಾಡಿಯವರು ತನ್ನ ಸಪ್ಪ್ಲೈ ಏಜೆನ್ಸಿ ಸಂಸ್ಥೆಯಿಂದ ಪ್ರಕಟಿಸಿದರು. ಶಿವಮೊಗ್ಗದ ಕೂಡಲಿ ಚಿದಂಬರಂ ಅವರ 'ವಿಚಾರವಾಹಿನಿ' ಮಾಸಪತ್ರಿಕೆ ಪಣಿಯಾಡಿಯವರ ಪ್ರೆಸ್‍ನಲ್ಲಿ ಅಚ್ಚಾಗುತ್ತಿತ್ತು.
- ಮುರಳೀಧರ ಉಪಾಧ್ಯ
mupadhyatulu.blogspot.com.
No comments:
Post a Comment