Monday, October 18, 2010

Tulu Movement - S U Paniyadi (ತುಳು ಚಳವಳ)

Tulu-3-2010

ತುಳು ಚಳವಳ

ಬಾಸೆಲ್ ಮಿಶನ್‍ನವರ ತುಳು ಪ್ರಕಟಣೆಗಳು ಪಣಿಯಾಡಿಯವರಿಗೆ ಪ್ರೇರಣೆ ನೀಡಿದುವು; ಅವರು ತನ್ನ ತಾಯ್ನುಡಿಯ ಭವಿಷ್ಯವನ್ನು ಕುರಿತು ಗಂಭೀರವಾಗಿ ಯೋಚಿಸುವಂತೆ ಮಾಡಿದುವು. ತನ್ನ 'ತುಳು ವ್ಯಾಕರಣ' (1937) ಪುಸ್ತಕದ ಮುನ್ನುಡಿಯಲ್ಲಿ ಪಣಿಯಾಡಿಯವರು ಹೀಗೆ ಬರೆದಿದ್ದಾರೆ -

ಸಣ್ಣದಿಂದಲೂ ನನಗೆ ತುಳುವರ ಮೇಲೂ ತುಳುನಾಡಿನ ಮೇಲೂ, ತುಳು ಬಾಷೆಯ ಮೇಲೂ ಪ್ರೇಮವು ವಿಶೇಷವಾಗಿತ್ತು. ಯಾರಾದರೂ ತುಳುವರನ್ನಾಗಲಿ, ತುಳು ಭಾಷೆಯನ್ನಾಗಲಿ ಹೀಯಾಳಿಸಿದರೆ ನನ್ನ ಮನಸ್ಸಿಗೆ ತುಂಬಾ ಬೇಸರವಾಗುತ್ತಿತ್ತು. ಚಿಕ್ಕ ಪ್ರಾಯದಲ್ಲೇ ನನ್ನ ಜನ್ಮಸ್ಥಾನವನ್ನು ಬಿಟ್ಟು ವಿದ್ಯಾಭ್ಯಾಸಕ್ಕೆ ಮೈಸೂರು ದೇಶಕ್ಕೆ ಹೋದುದರಿಂದ ಅಲ್ಲಿಯ ಕೆಲಜನರಿಗೆ ತುಳು ಭಾಷೆಯ ಮೇಲೆ ಇರುವ ಬುದ್ಧಿಯನ್ನು ನೋಡಿ ಖೇದವಾಗುತ್ತಿತ್ತು. ಆದರೆ ಅವರಿಗೆ ಉತ್ತರ ಕೊಡುವಷ್ಟು ತಿಳುವಳಿಕೆಯ ನನ್ನಲ್ಲಿಲ್ಲವಾಗಿದ್ದರೂ ತುಳು ಭಾಷೆಯ ಪ್ರೇಮವು ಮಾತ್ರ ಹೆಚ್ಚಾಗುತ್ತಿತ್ತು. ಸುಮಾರು 1916ನೇ ಇಸವಿಯಲ್ಲಿ 'ತುಳು ಬಾಷೆಯಲ್ಲಿ ಕೆಲವು ಪುಸ್ತಕಗಳನ್ನು ಬರೆದು ಪ್ರಕಟಿಸಬೇಕು' ಎಂಬ ಸಂಕಲ್ಪವು ಮಾತ್ರ ತಲೆದೋರಿತು. ಈ ಉದ್ದೇಶವನ್ನು ನೆರವೇರಿಸುವುದು ಹೇಗೆಂಬುದು ನನಗೆ ಗೊತ್ತಿರಲಿಲ್ಲ. ಮದ್ರಾಸಿನಲ್ಲಿ ನಾನು ಕಲಿಯುತ್ತಿದ್ದಾಗ ಆಗಾಗ್ಯೆ 'ಕೊನೆಮಾರಾ' ಲೈಬ್ರೇರಿಗೆ ಹೋಗಿ ಅನೇಕ ಪುಸ್ತಕಗಳನ್ನು ನೋಡಿ ತುಳುವರು, ತುಳುನಾಡು ಮತ್ತು ತುಳು ಭಾಷೆ ವಿಷಯವಾಗಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಲಿಕ್ಕೆ ಹತ್ತಿದೆನು. ಸುಮಾರು 1918ನೇ ಇಸವಿಯಲ್ಲಿ ಡಾಕ್ಟರ್ ಕಾಲ್ಡ್‌ವೆಲ್‍ರವರು ಬರೆದ ದ್ರಾವಿಡ ಭಾಷೆಗಳ ತುಲನಾತ್ಮಕ ವ್ಯಾಕರಣವನ್ನು ಓದಲಿಕ್ಕೆ ಹತ್ತಿದೆನು. (Dr. Cadwell's 'Comparative Grammar of the Dravidian Languages). ಅದನ್ನು ಓದುವಾಗ "Next in the list of cultivated Dravidian Languages stands Tulu or Tuluva. The claim of this peculiar and very interesting language to be ranked amongst the cultivated members of the family may perhaps be regarded as open to question, seeing that it is destitute of a literature in the proper sense of the term and never had a character of its own." "Not withstanding its want of literature, Tulu is one of the most highly developed languages of the Dravidian family."(ವ್ಯವಸಾಯ ಮಾಡಲ್ಪಟ್ಟ ದ್ರಾವಿಡ ಭಾಷೆಗಳಲ್ಲಿ ತುಳುವೂ ಒಂದಾಗಿದೆ. ಒಂದು ರೀತಿಯಲ್ಲಿರುವ ಮತ್ತು ವಿಶೇಷವಾದ ಅಭಿರುಚಿಯನ್ನು ಹುಟ್ಟಿಸುವ ಈ ಭಾಷೆಯನ್ನು ವ್ಯವಸಾಯ ಹೊಂದಿದ ಭಾಷೆಗಳ ಸಾಲಿನಲ್ಲಿ ಹಾಕುವುದಕ್ಕೆ ಆಕ್ಷೇಪ ಬರಬಹುದು. ಏತಕ್ಕೆಂದರೆ ಸಾಹಿತ್ಯವೆಂಬ ಶಬ್ದದ ಅರ್ಥಕ್ಕೆ ಒಳಪಡುವ ಗ್ರಂಥಗಳು ಈ ಭಾಷೆಯಲ್ಲಿ ಸಿಕ್ಕುವುದಿಲ್ಲ ಮತ್ತು ಲಿಪಿಯೂ ಇಲ್ಲ ಸಾಹಿತ್ಯದ ಬೇಡಿಕೆಯ ಅಗತ್ಯವಿದ್ದರೂ ತುಳು ಭಾಷೆಯು ಹೆಚ್ಚು ಸಂಸ್ಕಾರ ಹೊಂದಿ ಅಭಿವೃದ್ಧಿಗೆ ಬಂದ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ.)
- ಎಂಬ ಈ ಅಭಿಪ್ರಾಯವನ್ನು ಓದಿದೊಡನೆ ನನಗೆ ತುಂಬಾ ಹುರುಪು ಉಂಟಾಯಿತು. ಆದರೆ ಈ ತರದ ಅಭಿಪ್ರಾಯವನ್ನು ಕೊಡಲು ಮೂಲ ಕಾರಣವೇನೆಂಬುದು ನನಗೆ ತಿಳಿಯದೆ ಹೋಯಿತು. ಆದರೂ ಮಾತೃಭಾಷೆಯ ಸೇವೆಯನ್ನು ಮಾಡಬೇಕೆಂದು ಸಂಕಲ್ಪಿಸಿದ ನನಗೆ ಆಶೆಯು ಹೆಚ್ಚಿತು. ಕೆಲವು ವಿದ್ವಾಂಸರ ಕೈಯಲ್ಲಿ ಚರ್ಚಿಸಿದರೂ ಸಮರ್ಪಕವಾದ ಉತ್ತರವು ದೊರೆಯದೆ ಹೋಯಿತು. ಪರೀಕ್ಷೆಗಳ ಗಲಾಟೆಯಿಂದಲೂ, ಇನ್ನಿತರ ತೊಂದರೆಗಳಿಂದಲೂ ನನ್ನ ಕೆಲಸವನ್ನು ಹೆಚ್ಚು ಮುಂದುವರಿಸಲು ಅವಕಾಶವಿಲ್ಲದೆ ಹೋಯಿತು. ಆದರೆ ಸಂದರ್ಭವೊದಗಿದ ಹಾಗೆಲ್ಲ ಅನೇಕರ ಕೂಡೆ ಚರ್ಚಿಸುತ್ತಿದ್ದೆನು. ಕೆಲವರು ನನ್ನನ್ನು ಹುಚ್ಚನೆಂದೂ, ಕೆಲವರು ಅನಾವಶ್ಯಕ ಕೆಲಸವಿದು ಎಂದೂ ಮತ್ತೆ ಕೆಲವರು ಸಾಯುತ್ತಿರುವ ಭಾಷೆಯನ್ನು ಬದುಕಿಸಬಾರದೆಂದೂ ಹೇಳುತ್ತಿದ್ದರಷ್ಟೆ ವಿನಹ ಯಾರೂ ಸಹಾನುಭೂತಿಯನ್ನು ತೋರಿಸಲಿಲ್ಲ. ಒಬ್ಬರಿಬ್ಬರು ಮಾತ್ರ ಮೂರು ನಾಲ್ಕು ಕವಿತೆಗಳನ್ನು ನನಗಾಗಿ ಮಾಡಿಕೊಟ್ಟರು.

1920ರಲ್ಲಿ ನಾನು ಬರೋಡಾ ಲೈಬ್ರರಿಯಲ್ಲಿ ನೌಕರಿಗೆ ಸೇರಿದ ಮೇಲೆ ಅವಕಾಶವು ಸಿಕ್ಕಿತು. ಪುಸ್ತಕಗಳ ಸಹಾಯವೂ ತುಂಬಾ ಇತ್ತು. ರೆವರೆಂಡ್ ಜೆ. ಬ್ರಿಗೆಲ್‍ರವರು ಬರೆದು 1872ರಲ್ಲಿ ಪ್ರಕಟಿಸಿದ ತುಳು ವ್ಯಾಕರಣವನ್ನು, ಸುಮಾರು 1856ರಲ್ಲಿ ರೆವರೆಂಡ್ ಕ್ಯಾಮರೆರ್‌ರವರು ಸುರುಮಾಡಿ ರೆವರೆಂಡ್ ಎ. ಮೇನ್ನರವರು ಮುಗಿಸಿ 1888ರಲ್ಲಿ ಅವರೇ ಪ್ರಕಟಿಸಿದ ಇಂಗ್ಲಿಷ್-ತುಳು ಶಬ್ದಕೋಶವನ್ನೂ ತರಿಸಿ ತುಳು ಭಾಷೆಯನ್ನು ಸರಿಯಾಗಿ ಕಲಿಯಲಾರಂಭಿಸಿದೆನು. ರೆವರೆಂಡ್ ಬ್ರಿಗೆಲ್‍ರವವರ ವ್ಯಾಕರಣದಲ್ಲಿಯೂ, ಶಬ್ದಕೋಶಗಳಲ್ಲಿಯೂ ಸಂಪೂರ್ಣ ತೃಪ್ತಿಯು ಬಾರದೆ ಹೋಯಿತು. ಮಿಶನರಿಗಳು ಬರೆದು ಪ್ರಕಟಿಸಿದ ಕೆಲ ಪುಸ್ತಕಗಳನ್ನೂ ಓದಿದೆನು. ಅವರು ವಿದೇಶೀಯರಾಗಿದ್ದು ಈ ಬಡಭಾಷೆಯ ಮೇಲೆ ಮಾಡಿದ ಕೆಲಸವನ್ನು ನೋಡಿ ಅತ್ಯಾನಂದವಾಯಿತು. ಮತ್ತು ನನ್ನ ಈ ಕೃತಿಗೆ ಮೂಲಗುರುಗಳು ಅವರೇ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ. ಆಗಲೇ ಸರಿಯಾದ ತುಳು ವ್ಯಾಕರಣವನ್ನೊಂದು ಬರೆಯಬೇಕೆಂದು ಸಂಕಲ್ಪಿಸಿದೆನು. ಕೂಡಲೇ ಸಾಧ್ಯವಿಲ್ಲದುದರಿಂದ ಅದಕ್ಕೆ ಬೇಕಾದ ಸಂಗ್ರಹಗಳನನ್ನು ಮಾಡುತ್ತಿದ್ದೆನು. 1921ರಲ್ಲಿ ಮಾದರಿಗಾಗಿ 'ಸತೀ ಕಮಲೆ' ಎಂಬ ನಾವೆಲನ್ನು ತುಳು ಭಾಷೆಯಲ್ಲಿ ಬರೆದೆನು. (ಹಣದ ಅಡಚಣೆಯಿಂದ ಇನ್ನೂ ಪ್ರಕಟಿಸಲಿಕ್ಕಾಗಲಿಲ್ಲ) ಅದೇ ಸಮಯದಲ್ಲಿ ಕೆಲವು ಸ್ನೇಹಿತರ ಮತ್ತು ಕೆಲವು ಬಂಧುಗಳ ಕೂಡ ತುಳು ಭಾಷೆಯಲ್ಲಿಯೇ ಪತ್ರವ್ಯವಹಾರವನ್ನು ನಡೆಸುತ್ತಿದ್ದೆನು. ನನ್ನ ಮಾತೃಭಾಷೆಯ ಸೇವೆಯ ಕೆಲಸದಲ್ಲಿ ತನ್ನ ಶಕ್ತಿಮೀರಿ ಕೆಲಸವನ್ನು ಮಾಡುವದಾಗಿ ನನ್ನನ್ನು ಪ್ರೋತ್ಸಾಹಿಸಿದವರ ಪೈಕಿ ಮೊದಲನೆಯವರು ಶ್ರೀಯುತ ಎನ್. ಎ. ಶೀನಪ್ಪ ಹೆಗ್ಗಡೆಯವರು. ಅಂದಿನಿಂದ - 1921ರಿಂದ ತನ್ನಿಂದ ಆದಷ್ಟು ಕೆಲಸವನ್ನು ಅವರು ಮಾಡುತ್ತಲೇ ಇದ್ದಾರೆ.
ಮಾತೃಭಾಷೆಯ ಪ್ರೇಮದಿಂದಲೂ, ರಾಜಕೀಯ ಪರಿಸ್ಥಿತಿಯಿಂದಲೂ ಎಷ್ಟೇ ಆರ್ಥಿಕ ಅಡಚಣೆ ಇದ್ದರೂ ನನ್ನ ಕೆಲಸಕ್ಕೆ ತಿಲಾಂಜಲಿಯನ್ನು ಕೊಟ್ಟು 1923 ಫೆಬ್ರವರಿಯಿಂದ ವ್ಯಾಪಾರ ವೃತ್ತಿಯನ್ನು ಅವಲಂಬಿಸಿ ಉಡುಪಿಯಲ್ಲೆ ಇರತೊಡಗಿದೆನು. ಈ ವಿಚಾರವೂ, ರಾಜಕೀಯ ವಿಷಯವೂ ಒಟ್ಟೊಟ್ಟಿಗೆ ಬೆರಕುತ್ತಿದ್ದುದರಿಂದಲೂ, ಜನಸಹಾಯವೂ, ಧನಸಹಾಯವೂ ಕಮ್ಮಿಯಾದುದರಿಂದಲೂ ಹೆಚ್ಚಿನ ಕೆಲಸವನ್ನು ಮಾಡಿ ನನ್ನ ಧ್ಯೇಯವನ್ನು ಮುಂದವರಿಸಲು ಆಗದಿದ್ದರೂ, ನನ್ನ ಹುಚ್ಚನ್ನು ಅನೇಕರಿಗೆ ಹಚ್ಚಿಸಿ ನನ್ನ ಅಭಿಪ್ರಾಯಕ್ಕೆ ಅನುಕೂಲವಿರುವ ಸಂಖ್ಯೆಯು ಹೆಚ್ಚಾಗುವಂತೆ ಪ್ರಯತ್ನಪಡುತ್ತಿದ್ದೆನು. ಶ್ರೀ ಶ್ರೀ ಪೇಜಾವರ ಸ್ವಾಮಿಯವರ ಉದಾರ ಸಹಾಯದಿಂದ ಮೂರು ಪುಸ್ತಕಗಳನ್ನು 'ತುಳುವ ಸಾಹಿತ್ಯಮಾಲೆ'ಯಲ್ಲಿ ಪ್ರಕಟಿಸಿದೆನು (ಎಸ್. ಯು. ಪಣಿಯಾಡಿ, 'ತುಳು ವ್ಯಾಕರಣ', 1932).

ಪಣಿಯಾಡಿಯವರು ಉಲ್ಲೇಖಿಸಿರವ ಸ್ವಾಮಿಗಳು - ಪೇಜಾವರ ಮಠದ ಮೂವತ್ತೆರಡನೆಯ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವಮಾನ್ಯ ತೀರ್ಥರು. ಈ ಸ್ವಾಮಿಗಳು ತುಳುವ ಸಾಹಿತ್ಯಮಾಲೆಯ ಆಶ್ರಯದಾತರಾಗಿದ್ದರು.
ಪೊಳಲಿ ಶೀನಪ್ಪ ಹೆಗಡೆಯವರು ತನ್ನ ತುಳು ಕಾದಂಬರಿ 'ಮಿತ್ಯ ನಾರಾಯಣ ಕತೆ'ಯ ಮುನ್ನುಡಿಯಲ್ಲಿ ಪಣಿಯಾಡಿಯವರ ಕುರಿತು, ನಾನು ವೆಲ್ಲೂರು ಜೈಲಿನಲ್ಲಿದ್ದಾಗ ಅದೇ ಜೈಲಿಗೆ ನಮ್ಮ ಜಿಲ್ಲೆಯ ಸುಮಾರು ಇಪ್ಪತ್ತು ಮಂದಿಯನ್ನು ಕಳುಹಿಸಿದರು. ಅವರಲ್ಲಿ ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯರೂ, ಕೂಳೂರಿನ ಕಿಲ್ಲೆ ನಾರಾಯಣ ಶೆಟ್ಟರೂ ಇದ್ದರು. ನಿದ್ದೆ ಬಾರದ ಒಂದು ರಾತ್ರಿ ಕಿಲ್ಲೆ ನಾರಾಯಣ ಶೆಟ್ಟರು ಒಂದು ಕತೆ ಹೇಳಿದರು. ಮರುದಿನ, ಬೇರೆ ಕೆಲಸವೇನೂ ಇಲ್ಲದ್ದರಿಂದ ನಾನು ಕತೆಯನ್ನು ಬರೆಯತೊಡಗಿದೆ. ಆಮೇಲೆ, ನಾನು ಹೇಳಿದ ತುಳುನಾಡಿನ 'ಎರಿಬೆರ್ಮೆರ್' ದೈವಕತೆಯನ್ನು ಕೇಳಿ ತುಳು ಭಾಷೆಯ ಅಂದ-ಚಂದವನ್ನು ನೆನೆದು, ಕಿಲ್ಲೆಯವರು ತುಳುವಿನಲ್ಲಿ ಚಂದ-ಚಂದದ ನಲುವತ್ತೆಂಟು ಹಾಡುಗಳನ್ನು - 'ಕಾನಿಗೆ' ಸಂಕಲನವನ್ನು ಬರೆದರು. ಇದನ್ನು ನೋಡಿ ಪಣಿಯಾಡಿಯವರು ನಮ್ಮನ್ನು ಇನ್ನಷ್ಟು ಪ್ರೋತ್ಸಾಹಿಸಿದರು (ಪೊಳಲಿ ಶೀನಪ್ಪ ಹೆಗಡೆ - 'ಮಿತ್ಯ ನಾರಾಯಣ ಕತೆ' - 1935) ಎಂದಿದ್ದಾರೆ.

- ಮುರಳೀಧರ ಉಪಾಧ್ಯ
mupadhyatulu.blogspot.com

1. ಎಸ್.ಯು. ಪಣಿಯಾಡಿ (ಕನ್ನಡ - 1997)
- ಮುರಳೀಧರ ಉಪಾಧ್ಯ ಹಿರಿಯಡಕ
ಪ್ರಸರಾಂಗ, ಮಂಗಳೂರು ವಿಶ್ವವಿದ್ಯಾನಿಲಯ

2. ಎಸ್.ಯು. ಪಣಿಯಾಡಿ (ತುಳು - 1996)
- ಮುರಳೀಧರ ಉಪಾಧ್ಯ ಹಿರಿಯಡಕ
ಪ್ರ. - ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು

No comments:

Post a Comment