ತುಳುವ ಮಹಾಸಭೆ
'ತುಳುವ ಮಹಾಸಭೆ'ಯ ವಿಜ್ಞಾಪನೆಯಲ್ಲಿ ಪಣಿಯಾಡಿಯವರು ಬರೆದಿರುವ ಒಂದು ಲೇಖನ ಇದೆ. ತುಳು ಭಾಷೆ, ತುಳು ಚಳವಳ, ತುಳುನಾಡನ್ನು ಕುರಿತ ಪಣಿಯಾಡಿಯವರ ಚಿಂತನೆಗಳು ಈ ಲೇಖನದಲ್ಲಿ ಸ್ಪಷ್ಟವಾಗಿದೆ. ಪಣಿಯಾಡಿಯವರ ಲೇಖನದ ಪೂರ್ಣಪಾಠ ಹೀಗಿದೆ -
ದೇಶಾಭಿಮಾನಿಗಳೇ, ಕೆಲವು ವರ್ಷಗಳಿಂದ ತುಳುವರಲ್ಲಿ ಒಂದು ವಿಧವಾದ ಜಾಗೃತಿಯುಂಟಾಗಿ ಅಲ್ಲಲ್ಲಿ ವಾದ-ವಿವಾದಗಳು ಮಾತ್ರ ನಡೆಯುತ್ತಿದ್ದರೂ ಸಂಘಟಿತವಾದ ಯಾವ ಕಾರ್ಯವನ್ನೂ ಉಪಕ್ರಮಿಸಲಿಲ್ಲ. ಅದೇ ಪ್ರಬಲವಾಗಿ ಇತ್ತೀಚೆಗೆ ಜಿಲ್ಲೆಯ ಕೆಲವು ಪತ್ರಿಕೆಗಳಲ್ಲಿ ಕೆಲವು ಲೇಖನಗಳು ಪ್ರಕಟವಾದವು. ಇದರಿಂದ ಸಂಪೂರ್ಣ ಅಂಶಗಳು ಚರ್ಚಿಸಲ್ಪಡದಿದ್ದರೂ ಕೆಲವಂಶಗಳು ಚರ್ಚಿಸಲ್ಪಟ್ಟವು. ಇದರ ಫಲವಾಗಿ ಕೆಲವರಿಗೆ ಸ್ಫೂರ್ತಿಯೂ , ಧೈರ್ಯವೂ ಬಂದು 'ತುಳುವ ಮಹಾಸಭೆ'ಯೆಂಬ ಸಂಸ್ಥೆಯನ್ನು ಡಿಸ್ಟ್ರಿಕ್ಟ್ ಬೋರ್ಡ್ ಮೆಂಬರರಾದ ಡಾಕ್ಟರ್ ಯು. ರಾಮಚಂದ್ರ ರಾಯರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯವರು ಇದೇ 23-9-1928ರಲ್ಲಿ ಉಡುಪಿಯಲ್ಲಿ ಸ್ಥಾಪಿಸಿದರು. ಇದರ ಕಾರ್ಯಕ್ಷೇತ್ರವು ಉಡುಪಿಯು ಮಾತ್ರವಿರದೆ ಇಡೀ ತುಳುನಾಡು ಕಾರ್ಯಕ್ಷೇತ್ರವಾಗಿದೆ. ಅಂದರೆ ಇದರ ಸಭೆಗಳನ್ನು ತುಳುನಾಡಿನ ಯಾವದೇ ಭಾಗದಲ್ಲಿ ಜರಗಿಸಬಹುದು. ತುಳುನಾಡಿನ ಎಲ್ಲರೂ ಸದಸ್ಯರಾಗಬಹುದು. ಕಾರ್ಯಾಲಯವೂ ಎಲ್ಲಿಗೆ ಬೇಕಾದರೂ ಒಯ್ಯಲ್ಪಡಬಹುದು. ಆದರೆ ಇಂತಹ ಸಂಸ್ಥೆಯ ಆವಶ್ಯಕತೆಯ ವಿಷಯದಲ್ಲಿಯೂ, ಉದ್ದೇಶದ ವಿಷಯದಲ್ಲಿಯೂ ಕೆಲವರಿಗೆ ಸಂದೇಹವೂ, ಕೆಲವರಿಗೆ ಅಪಾರ್ಥಗಳೂ ಉಂಟಾಗಿರುವುದರಿಂದ ಆ ವಿಷಯದಲ್ಲಿ ನಾವು ಸ್ವಲ್ಪ ಪ್ರಸ್ತಾಪನೆಯನ್ನು ಮಾಡುವುದು ಅತ್ಯಗತ್ಯದ ಸಂಗತಿಯಾಗಿದೆ.
'ತುಳುವರು' ಎಂದರೆ ಯಾರು? ತುಳುವರ ವಿಷಯವಾದ ಯಾವ ಮಾತನ್ನೆತ್ತಬೇಕಾದರೂ ಮೊತ್ತಮೊದಲು ತುಳುವರು ಯಾರು ಎಂಬುದನ್ನು ವಿಮರ್ಶೆ ಮಾಡಬೇಕಾಗಿದೆ. ಏಕೆಂದರೆ, ತುಳುವರ ವಿಷಯವಾಗಿ ಅಪಾರ್ಥಗಳು ಅಲ್ಲಲ್ಲಿ ಕಲ್ಪಿಸಲ್ಪಟ್ಟಿವೆ. ತುಳುವರ ವಿಷಯವಾಗಿ ನಿಜವಾದ ಕಲ್ಪನೆಯು ತುಳುನಾಡಿನ ಕೆಲವರಿಗೂ, ತುಳುನಾಡಿನ ಹೊರಗಿನವರಿಗೂ ಇಲ್ಲ. ತುಳುವರೆಂದರೆ ಬ್ರಾಹ್ಮಣರು ಮಾತ್ರ ಎಂಬ ಕೆಲವರ ಕಲ್ಪನೆಯು ಕೇವಲ ನಿರಾಧಾರವಾದದ್ದು. ತುಳುವನ್ನು ಮಾತಾಡುವವರು ಬ್ರಾಹ್ಮಣರು ಮಾತ್ರವಲ್ಲ, ಇತರ ಎಲ್ಲಾ ಜಾತಿಯವರೂ ಇದ್ದಾರೆ. ತುಳುವರೆಂದರೆ ವಿಶಿಷ್ಟ ಜಾತಿಯವರೆಂದು ಕೆಲವರಿಗೆ ಭಾವನೆಯು ಉಂಟು; ಅದು ತೀರಾ ಸುಳ್ಳು. ತುಳುವನ್ನು ಮಾತಾಡುವವರಲ್ಲಿ ಒಂದೆರಡು ಜಾತಿಯವರೇ ಇರದೆ, ಅನೇಕ ಜಾತಿಯವರೂ ಇದ್ದಾರೆ. ಬ್ರಾಹ್ಮಣ, ಬಂಟ, ವಿಶ್ವಕರ್ಮ, ಮೊಗವೀರ, ಬಿಲ್ಲವ, ಹೊಲೆಯ ಮುಂತಾದ ಮುಖ್ಯ ಜಾತಿಗಳೂ, ಇತರ ಅನೇಕ ಜಾತಿಗಳೂ ಇದ್ದಾವೆ. ತುಳುವರೆಂದರೆ ಒಂದೇ ಧರ್ಮದವರೆಂದೂ, ಒಂದೇ ಪಂಥದವರೆಂದೂ ಹೇಳಲಿಕ್ಕೆ ಬರುವಂತಿಲ್ಲ. ಶೈವ, ವೈಷ್ಣವ, ಮಾಧ್ವ, ಭಾಗವತ, ಶಾಕ್ತ, ಜೈನ, ಬೌದ್ಧ, ಕ್ರೈಸ್ತ, ಮಹಮ್ಮದೀಯ ಮುಂತಾದ ಧರ್ಮಗಳೂ, ಪಂಥಗಳೂ ತುಳುವರಲ್ಲಿ ಉಂಟು. ಮತ್ತು ತುಳು ಮಾತನ್ನಾಡುವ ದೇಶವೊಂದು ಬೇರೆಯಿದ್ದು ಅಲ್ಲಿಂದ ಈ ಜನರು ಇಲ್ಲಿಗೆ ಬಂದು ಆವಾಸಮಾಡಿಕೊಂಡು ಇರುವದೂ ಅಲ್ಲ. ಈ ಭೂಭಾಗಕ್ಕೆ ಬಹಳ ಪ್ರಾಚೀನ ಕಾಲದಿಂದಲೂ ತುಳು ಎಂಬ ವ್ಯವಹಾರವಿತ್ತು. ಇಲ್ಲಿ ಮಾತನಾಡುತ್ತಿದ್ದ ಮತ್ತು ಇರುವ ಭಾಷೆಗೆ ತುಳು ಭಾಷೆಯೆಂದೂ ಬಹಳ ಕಾಲದಿಂದ ವ್ಯವಹಾರವಿತ್ತು. ಆದುದರಿಂದಲೇ ತುಳು ದೇಶದಲ್ಲಿದ್ದು, ತುಳು ಭಾಷೆಯನ್ನಾಡುವ ಜನಾಂಗಕ್ಕೆ ತೌಳವ ಅಥವಾ ತುಳುವ ಎಂಬ ವ್ಯವಹಾರವು ಬಂದಿದೆ. ಆದುದರಿಂದಲೇ ಬಹಳ ಪ್ರಾಚೀನ ಕಾಲದಲ್ಲಿ ಇಲ್ಲಿಂದ ಹೋಗಿ ತಮಿಳು ದೇಶದಲ್ಲಿ ನೆಲಸಿದರೂ, ತುಳು ಭಾಷೆಯನ್ನು ಬಿಟ್ಟು ತಮಿಳು ಭಾಷೆಯನ್ನೇ ಆಡುತ್ತಿದ್ದರೂ ತಮಿಳು ದೇಶದಲ್ಲಿರುವ ಅದೊಂದು ಪ್ರಖ್ಯಾತವಾದ ಜಾತಿಯು ಇನ್ನೂ ತುಳುವ ನಲ್ಲಾಳ ಎಂಬ ತಮ್ಮ ಹೆಸರನ್ನು ಮರೆತಿಲ್ಲ. ತುಳುವನ್ನೇ ಮಾತೃಭಾಷೆಯನ್ನಾಗಿಟ್ಟುಕೊಂಡು ಇರುವ ಜನರ ಸಂಖ್ಯೆಯು 1921ನೇ ಇಸ್ವಿ ಖಾನೇಸುಮಾರಿಯಲ್ಲಿ 5,79,342 ಇತ್ತು. ಅವರಲ್ಲಿ 41,517 ಮಾತ್ರ ನಮ್ಮ ಜಿಲ್ಲೆಯನ್ನು ಬಿಟ್ಟು ಬಾಕಿ ಕಡೆಗಳಲ್ಲಿರುವವರು. ಹೆಚ್ಚಾಗಿ ಹಾಸನ, ಕಡೂರು, ಶಿವಮೊಗ್ಗಾ, ಮಲಬಾರ್, ಕೊಚ್ಚಿ, ತ್ರಾವಣಕೋರ್, ಬೊಂಬಾಯಿ, ಮದ್ರಾಸ್‍ಗ ಳಲ್ಲಿರುವವರು. ತುಳುವರ ಸಂಖ್ಯೆಯು ಕಮ್ಮಿಯಾಗುತ್ತಾ ಬರುವದಕ್ಕೆ ಕೆಲವು ಕಾರಣಗಳುಂಟು. 1. ಪರಸ್ಥಳಗಳಿಗೆ ಹೋಗಿ ಆವಾಸಮಾಡುವವರು ಹೆಚ್ಚಾಗಿ ತಮ್ಮ ಮಾತೃಭಾಷೆ ಕನ್ನಡವೆಂದು ಹೇಳುತ್ತಾರೆ. 2. ತುಳುವರೆಂದು ಹೇಳಲಿಕ್ಕೆ ನಾಚಿಕೊಂಡು ಇಲ್ಲಿಯೂ ಕೆಲವರು ಮನೆಯಲ್ಲಿಯೂ ಕನ್ನಡ ಭಾಷೆಯನ್ನೇ ಉಪಯೋಗಿಸಿಕೊಂಡು ಕನ್ನಡಿಗರೆಂದು ಪರಿಗಣಿಸಲ್ಪಡುತ್ತಾರೆ. 3. 'ಬಾಸೆಲ್ ಮಿಶನ್', ಕರ್ನಾಟಕ ಮಿಶನ್' ಎಂದು ಪರಿವರ್ತನೆಯಾದಂದಿನಿಂದ ಮಿಶನರಿಗಳಲ್ಲಿಯೂ ಕೆಲವರು ತುಳು ಭಾಷೆಯನ್ನು ಬಿಟ್ಟು ಕನ್ನಡ ಭಾಷೆಯನ್ನು ಅವಲಂಬಿಸುತ್ತಿದ್ದಾರೆ. 4. ಕೆಥೋಲಿಕ್ ಕ್ರಿಶ್ಚಿಯನ್ ಮತಕ್ಕೆ ಸೇರಿದವರಂತೂ ಸಂಪೂರ್ಣವಾಗಿ ತುಳು ಭಾಷೆಯನ್ನು ಬಿಟ್ಟು ಕೊಂಕಣಿ ಭಾಷೆಯನ್ನೇ ಅವಲಂಬಿಸುತ್ತಾರೆ. 5. ಮಹಮ್ಮದೀಯ ಮತಕ್ಕೆ ಸೇರಿದವರೂ ವಿಶೇಷವಾಗಿ ಹಿಂದೂಸ್ಥಾನೀ ಭಾಷೆಯನ್ನೋ, ಮಲಯಾಳಿ ಭಾಷೆಯನ್ನೋ ಅವಲಂಬಿಸುತ್ತಾರೆ. ಈ ತರದ ವಿಚಿತ್ರ ಸ್ಥಿತಿಗಳಿಂದ ತುಳು ಭಾಷೆಯನ್ನಾಡುವವರ ಸಂಖ್ಯೆಯು ಹೆಚ್ಚಿನ ಅಭಿವೃದ್ಧಿಗೆ ಬಾರದಿದ್ದುದು ಆಶ್ಚರ್ಯವಲ್ಲ. ಆದರೆ ತುಳುನಾಡಿನಲ್ಲಿ ಆವಾಸಮಾಡಿಕೊಂಡು, ಬೇರೆ ಭಾಷೆಗಳನ್ನು ಮಾತಾಡುವವರಿಗೂ ಹೆಚ್ಚಾಗಿ ತುಳು ಭಾಷೆಯು ತಿಳಿದೇ ಇರುವುದು. ಆದುದರಿಂದಲೇ ನಾವು ತುಳುವರೆಂದರೆ ಈಗಿನ ಧೋರಣೆ ಅನುಸರಿಸಿ 1. ತುಳುವೇ ಮಾತೃಭಾಷೆಯಾಗಿ ಉಳ್ಳವರು. 2. ತುಳುವನ್ನು ತಿಳಿದವರು. 3. ತುಳುನಾಡಿನ ಆವಾಸಿಗಳು ಎಂದು ಮೂರು ವಿಧವಾದ ಅರ್ಥವನ್ನು ಮಾಡಿದ್ದೇವೆ. ಅಂದರೆ ತುಳುನಾಡಿನಲ್ಲಿ ಹೆಚ್ಚುಕಮ್ಮಿ 10 ಲಕ್ಷ ಜನರು ಆವಾಸಮಾಡಿಕೊಂಡಿದ್ದಾರೆ. ಆದುದರಿಂದ ತುಳುವರೆಂದರೆ ಕರ್ನಾಟಕ, ಆಂಧ್ರ, ತಮಿಳು, ಬಂಗಾಳಿ, ಗೂರ್ಜರ ಮುಂತಾದ ಶಬ್ಕಗಳಿಗೆ ಅನ್ವಯಿಸಲ್ಪಡುವದರಂತೆಯೇ ಅರ್ಥಮಾಡಬೇಕಷ್ಟೇ ವಿನಹ ಬೇರೆ ಯಾವ ವಿಧವಾದ ಅರ್ಥವನ್ನು ಮಾಡುವುದು ಉಚಿತವಲ್ಲ.

ತುಳುನಾಡು: ಈ ಭೂಭಾಗವು ಈಗಲೀಗ ನಮ್ಮಿಂದ ಕಲ್ಪಿಸಲ್ಪಡುವದಲ್ಲ. ಬಹಳ ಪ್ರಾಚೀನ ಕಾಲದಿಂದಲೂ ನಮ್ಮ ಭೂಭಾಗಕ್ಕೆ ತುಳು ಎಂದು ಹೆಸರಿತ್ತು. ಪ್ರಾಚೀನ ಗ್ರಂಥಳಲ್ಲಿ ಅದರ ಗಡಿಗಳು ಕೂಡಾ ವಿವರಿಸಲ್ಪಟ್ಟಿದ್ದವು. ಆದರೆ ಈಗಿನ ಗಡಿಗಳಿಗೂ ಆಗಿನ ಗಡಿಗಳಿಗೂ ಸ್ವಲ್ಪ ಹೆಚ್ಚುಕಮ್ಮಿ ಬರಲಿಕ್ಕೆ ಸಾಕು. ಅದೊಂದು ದೋಷವಲ್ಲ. ಬಹಳ ಕಾಲದಿಂದಲೂ ತುಳುನಾಡಿನ ವೈಶಿಷ್ಟ್ಯವನ್ನು ತುಳುವರಸರು ಕಾದುಕೊಂಡಿದ್ದರು. ತುಳುನಾಡಿಗೆ ಕೆಲವೆಡೆಯಲ್ಲಿ ಕೊಂಕಣವೆಂಬ ವ್ಯವಹಾರವೂ ಮತ್ತೆ ಕೆಲವೆಡೆ ಕೇರಳವೆಂಬ ವ್ಯವಹಾರವೂ, ಈಗಿನ ಕರ್ನಾಟಕವೆಂಬ ವ್ಯವಹಾರವೂ ತುಳುನಾಡಿನ ತುಳುತ್ವವನ್ನು ಅಪಹರಿಸಲಾರವು. ಕರ್ನಾಟಕದ ಸಾಮ್ರಾಜ್ಯದ ಕೆಳಗೆ ತುಳುನಾಡು ಬಂದ ಮೇಲೆ ತುಳುವರು ತಮ್ಮ ವೈಶಿಷ್ಟ್ಯವನ್ನೂ, ಸಂಸ್ಕೃತಿಯನ್ನೂ ಕಾಪಾಡಿಕೊಂಡಿದ್ದರೂ, ಬ್ರಿಟಿಷರ ಆಳಿಕೆ ಬಂದ ಮೇಲೆ ಕರ್ನಾಟಕ ಧೋರಣವೇ ಹೆಚ್ಚಾಗಿ, ಮೊದಲು ಕನ್ನಡ ಜಿಲ್ಲೆಯೆಂದೂ, ಈಗಿನ ದಕ್ಷಿಣ ಕನ್ನಡ ಜಿಲ್ಲೆಯೆಂದೂ ವ್ಯವಹಾರ ಬಂದು, ಇಲ್ಲಿಯ ಸ್ಥಿತಿಗತಿಗಳನ್ನು ನೋಡಿ ತಿಳಿದುಕೊಳ್ಳುವವರಿಗೆ ಇದು 'ಕರ್ನಾಟಕ'ವೆಂಬ ಬೋಧವಾಗುವುದು ಹೆಚ್ಚಿನ ಆಶ್ಚರ್ಯದ ಸಂಗತಿಯಲ್ಲ. ಹಾಗೆಯೇ ಪಶ್ಚಿಮ ಕರಾವಳಿಯ ಏಳು ವಿಭಾಗಗಳನ್ನೂ ಒಂದು ಕಡೆ ಕೊಂಕಣವೆಂದೂ, ಮತ್ತೊಂದು ಕಡೆ ಕೇರಳವೆಂದೂ ಉಲ್ಲೇಖಿಸಿದ್ದು ಕೇರಳ ಕೊಂಕಣಗಳ ಅಭಿಮಾನಿಗಳಿದ್ದಿರಬಹುದು. ಅಥವಾ ಆಯಾ ಉಲ್ಲೇಖಗಳ ಸಮಯದಲ್ಲಿ ಕೊಂಕಣ ಸಾಮ್ರಾಜ್ಯಾಂತರ್ಗತವಾಗಿಯೂ, ಕೇರಳ ಸಾಮ್ರಾಜ್ಯಾಂತರ್ಗತವಾಗಿಯೂ ಇದ್ದಿರಬಹುದೆಂದು ಊಹಿಸಬಹುದು. ಆದರೂ ಆ ಎರಡು ಉಲ್ಲೇಖಗಳು 'ತುಳು' ದೇಶದ ಅಸ್ತಿತ್ವವನ್ನು ಅಲ್ಲಗಳೆಯುವುದಿಲ್ಲ. ಈ ವಿಷಯದಲ್ಲಿ ಹೆಚ್ಚಿನ ವಿವರವು ಇಲ್ಲಿ ಅಗತ್ಯವಿಲ್ಲದಿರುವುದರಿಂದ 'ತುಳುನಾಡು' ಎಂಬ ಭೂಭಾಗವು ಅದೇ ಹೆಸರಿಂದ ಬಹಳ ಪ್ರಾಚೀನ ಕಾಲದಿಂದಲೂ ಇತ್ತೆಂದೂ, ಕರ್ನಾಟಕ-ಕೊಂಕಣ-ಕೇರಳಗಳಲ್ಲಿ ಸೇರಿದ್ದಲ್ಲವೆಂದೂ ಸಿದ್ಧಾಂತವನ್ನು ಮಾತ್ರ ಹೇಳುವೆವು. ತುಳುನಾಡಿನ ಅಸ್ತಿತ್ವವು ನೆರೆಕರೆಯ ದೇಶಗಳಂತೆ ಬಹಳ ಪ್ರಾಚೀನ ಕಾಲದಿಂದಲೂ ಇತ್ತೆಂಬುದು ನಿರ್ವಿವಾದ.
ತುಳು ಭಾಷೆ: ತುಳು ಭಾಷೆಯು ತುಳು ದೇಶ, ತುಳುವರಷ್ಟೇ ಪ್ರಾಚೀನ ಭಾಷೆಯಾಗಿದೆ. ತುಳು ಭಾಷೆಯೆಂದರೆ ಕರ್ನಾಟಕದ ಅಪಭ್ರಂಶವೆಂದು ಕಲ್ಪನೆ ತೀರಾ ನಿರಾಧಾರವಾದದ್ದು. ದ್ರಾವಿಡ ಭಾಷೆಗಳ ಚರಿತ್ರೆಯನ್ನು ವಿಮರ್ಶಿ ಸಿದರೂ, ಭಾಷಾಶಾಸ್ತ್ರ ದೃಷ್ಟಿಯಿಂದ ವಿಮರ್ಶಿ ಸಿದರೂ, ತುಳು ಭಾಷೆಯು ಯಾವದರ ಅಪಭ್ರಂಶವಲ್ಲವೆಂದೂ, ತಮಿಳು-ಕರ್ನಾಟಕ -ಆಂಧ್ರ-ಮಲಯಾಳಗಳಂತೆಯೇ ಸ್ವತಂತ್ರ ಭಾಷೆಯೆಂದೂ, ಎಲ್ಲವೂ ಮೂಲ ದ್ರಾವಿಡ ಭಾಷೆಯಿಂದ ಉಂಟಾದದ್ದೆಂದೂ ಭಾಷಾತತ್ವ ವಿಮರ್ಶಕರಿಗೆ ತಿಳಿಯದ ವಿಷಯವಲ್ಲ. ಇದೂ ಅಲ್ಲದೆ ಉಚ್ಚಾರಣೆಯ ಭೇದದಿಂದ ಒಂದೇ ಶಬ್ದಕ್ಕೆ ಅರ್ಥಭೇದವು ಬರುವ ವೈಚಿತ್ರ್ಯವನ್ನು ನೋಡಿದರೆ ತುಳು ಭಾಷೆಯ ವೈಶಿಷ್ಟ್ಯವು ಕಂಡುಬರುವುದು. ತುಳು ಭಾಷೆಯನ್ನು ಶಾಸ್ತ್ರೀಯ ದೃಷ್ಟಿಯಿಂದ ಕಲಿಯದ ವಿನಹ ಅದರ ಸ್ವಾರಸ್ಯವು ಕಂಡುಬರಲಿಕ್ಕಿಲ್ಲ. ಇನ್ನು ತುಳು ಭಾಷೆಯ ಸಾಹಿತ್ಯ ವಿಚಾರದಲ್ಲಿ ಪ್ರಕೃತಕ್ಕೆ ಇತ್ತಲಾಗಿನ ಕೆಲವು ಗ್ರಂಥಗಳಲ್ಲದೆ ಬೇರೆ ಯಾವುದೂ ಸಿಕ್ಕುವುದಿಲ್ಲ. ಇದರ ಪ್ರಾಚೀನ ಸಾಹಿತ್ಯದ ವಿಷಯದಲ್ಲಿ ಭಾಷಾಶಾಸ್ತ್ರಕಾರರಲ್ಲಿ ಮತಗಳು ಭಿನ್ನವಾಗಿವೆ. ಅದು ಹೇಗೂ ಇರಲಿ. ಲಿಪಿಯ ಮಟ್ಟಿಗೆ ತುಳು ಲಿಪಿಯೆಂಬುದು ಪ್ರತ್ಯೇಕವೇ ಉಂಟು. ಕನ್ನಡ-ತೆಲುಗು ಲಿಪಿಗಳಿಗೆ ಇರುವಷ್ಟೇ ಭೇದವು ತುಳು-ಮಲಯಾಳ ಲಿಪಿಗಳಿಗೆ ಇರುವುದು, ಮಾತಾಡುವ ಜನಸಂಖ್ಯೆ ದೃಷ್ಟಿಯಿಂದ ಹಿಂದೂಸ್ಥಾನದ ಭಾಷೆಗಳಲ್ಲಿ ತುಳು ಭಾಷೆಯು 21ನೆಯ ಸ್ಥಾನವನ್ನು ಹೊಂದುತ್ತದೆ. ಹಿಂದಿನ ಸಾಹಿತ್ಯವು ದೊರೆಯದಿರುವ ಕಾರಣದಿಂದ ಮುಂದೆ ಸಾಹಿತ್ಯವನ್ನು ಅಭಿವೃದ್ಧಿ ಮಾಡಬಾರದು ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಇನ್ನೂ ಮೇಲೆ ಹೇಳಿದ ವಿಚಾರಗಳಲ್ಲಿ ವಿಚಾರಣೀಯಗಳಾದ ಎಷ್ಟೋ ಸಂಗತಿಗಳಿಂದ ವಿಚಾರಿಸುವ.
ತುಳುವರ ಸದ್ಯ:ಸ್ಥಿತಿ: ತುಳುವರು ತಮ್ಮ ಸರ್ವಸ್ವವನ್ನು ಕಳಕೊಂಡುದರಿಂದ ಅವರಲ್ಲಿ ಸ್ವಾಭಿಮಾನದ ಚಿಹ್ನೆಯೇ ಇಲ್ಲವಾಗಿದೆ. ಮನೆಯಲ್ಲಾಡುವ ಭಾಷೆ ಒಂದು, ಹೊರಗೆ ವ್ಯವಹಾರ ಮಾಡಬೇಕಾದುದೊಂದು, ಈ ಪ್ರಕಾರ ಭಾಷಾಭೇದ ಬಂದುದರಿಂದ ಎಷ್ಟೋ ತುಳುವರು ಸಾರ್ವಜನಿಕ ಸಂಸ್ಥೆಗಳಲ್ಲಿ ತಮ್ಮ ಅಭಿಪ್ರಾಯವನ್ನು ಪ್ರಕಟಿಸಲು ಅಸಮರ್ಥರಾಗಿರುತ್ತಾರೆ. ಅದರಿಂದ ಎಷ್ಟೋ ಪ್ರಮಾದಗಳು ಸಂಭವಿಸಿ ಹೋಗುತ್ತವೆ. ಸಾರ್ವಜನಿಕ ಸಂಸ್ಥೆಗಳಲ್ಲಿಯೂ ಇಂಗ್ಲಿಷಿನಲ್ಲಿಯೊ, ಕನ್ನಡದಲ್ಲಿಯೊ ಭಾಷಣಗಳನ್ನೂ, ಚರ್ಚೆಗಳನ್ನೂ ನಡೆಸುವುದರಿಂದ ಅನೇಕ ತುಳುವರಿಗೆ ಅರ್ಥವಾಗದೇನೇ ಹೋಗುತ್ತದೆ. ಎಲ್ಲರೂ ಕನ್ನಡವನ್ನು ಕಲಿತವರಾಗಿಲ್ಲ; ಸ್ವಲ್ಪ ಕಲಿತವರಿಗೂ ತಿಳಿಯುವಂಥಾದ್ದಲ್ಲ, ಹೀಗಾಗಿ ತುಳುವರಿಗೆ ಆಗುವ ಕಷ್ಟವೂ, ನಷ್ಟವೂ ಅಷ್ಟಿಷ್ಟಲ್ಲ, ಅಂತಹ ಸಂದರ್ಭಗಳಲ್ಲಿ ತುಳು ಭಾಷೆಯನ್ನು ಉಪಯೋಗಿಸುವುದು ಕೂಡ ತಪ್ಪೆಂಬ ಕಲ್ಪನೆಯೂ ಕೂಡ ಅನೇಕ ತುಳುವರಿಗೆ ಬಂದುಹೋಗಿದೆ. ಇಡೀ ನಮ್ಮ ನಾಡಿನಲ್ಲಿ ಕಾಂಗ್ರೆಸ್ ಚಳವಳ ಒಂದನ್ನು ಬಿಟ್ಟರೆ, ಸಾರ್ವಜನಿಕವಾದ ಸಂಸ್ಥೆಯು ಬೇರೆ ಯಾವುದೂ ಇಲ್ಲ. ಬೇಂಕ್, ಸೊಸೈಟಿ ಮುಂತಾದವುಗಳನ್ನು ಬಿಟ್ಟರೆ ಒತ್ತಟ್ಟಿಗೆ ಸೇರುವುದೇ ಅಸಂಭವವಾಗಿದೆ. ಕಾಂಗ್ರೆಸ್ ಚಳವಳವು ಕೇವಲ ರಾಜಕೀಯವಾಗಿರುವುದರಿಂದ ಅಭಿಪ್ರಾಯಭೇದಗಳಿಂದಲೂ, ಇನ್ನಿತರ ಕಾರಣಗಳಿಂದಲೂ ಎಲ್ಲರೂ ಸೇರುವುದಿಲ್ಲ. ಸಾಲದಿದ್ದುಕ್ಕಾಗಿ ಜಾತಿವಾರು ಸಂಸ್ಥೆಗಳು ಅನೇಕವಿದ್ದು, ಅವುಗಳು ಎಲ್ಲ ತುಳುವರನ್ನು ಆದಷ್ಟು ಬೇರೆ ಬೇರೆಯಾಗಿ ಇರಿಸಲಿಕ್ಕಾಗಿ ಸಾಧಕವಾಗಿವೆ. ತಾವು ಕರ್ನಾಟಕರೆಂಬ ಬೋಧೆಯಾಗುವುದು ಅಸಾಧ್ಯವಾದುದರಿಂದಲೂ, ತುಳುವರಾಗಿ ಯಾವ ಚಳವಳವನ್ನೂ ಮಾಡಲಿಕ್ಕಿಲ್ಲದಿದ್ದುದರಿಂದಲೂ ತ್ರಿಶಂಕು ಸ್ವರ್ಗದಲ್ಲಿದ್ದಂತೆ ಇದ್ದಾರೆ. ಆದುದರಿಂದ ತುಳುವರಾಗಿ ಯಾವ ಚಳವಳವನ್ನೂ ಮಾಡಲಿಕ್ಕೆ ಬರುತ್ತದೆಂದೂ, ತುಳು ಭಾಷೆಯಲ್ಲಿಯೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಅಸಭ್ಯವಾಗುವುದಿಲ್ಲವೆಂದೂ ತಿಳಿಸುವುದು ಆದ್ಯ ಕರ್ತವ್ಯವಾಗಿದೆ. ತುಳುವರಿಗೆ ತಮಿಳರಿಂದಲೂ, ಕರ್ನಾಟಕರಿಂದಲೂ ಸಿಕ್ಕುವ ಆದರಾಭಿಮಾನಿಗಳು ಮತ್ತು ಸಮತಾಬುದ್ಧಿಯ ಅವರವರ ಕೂಡೆ ಒಡನಾಟ ಮಾಡಿದವರಿಗೆ ಮಾತ್ರ ಗೊತ್ತು. ಎಷ್ಟೇ ಯೋಗ್ಯತೆಯಿದ್ದರೂ ತುಳುವನೆಂಬ ಕಾರಣದಿಂದ ಮಾತ್ರ ಎಷ್ಟೋ ಸಲ ಕಷ್ಟಪಡಬೇಕಾಗುತ್ತದೆ. ಇದಕ್ಕೆ ಮೂಲಕಾರಣವು ತುಳುವರು ಅಸಂಘಟಿತರಾಗಿರುವುದೂ, ಸ್ವಾಭಿಮಾನ ಶೂನ್ಯರಾಗಿರುವುದೂ ಆಗಿದೆ. ಆದುದರಿಂದ ತಾವು ತುಳುವರು ತುಳುನಾಡಿನಲ್ಲಿ ತುಳು ಭಾಷೆಯಿಂದಲೇ ಸಾರ್ವಜನಿಕ ಕಾರ್ಯಗಳನ್ನೂ, ಸಂಸ್ಥೆಗಳನ್ನೂ ನಡೆಯಿಸುವುದು ನ್ಯಾಯವೆಂಬ ಸ್ವಾಭಿಮಾನವು ತುಳುವರಲ್ಲಿ ಮೊತ್ತಮೊದಲು ಬರುವಂತೆ ಮಾಡುವುದೂ, ತುಳುವರಲ್ಲಿ ಸಂಘಟನಾಶಕ್ತಿಯನ್ನು ಹುಟ್ಟಿಸುವುದೂ ಆದ್ಯ ಕರ್ತವ್ಯವಾಗಿದೆ. ಇಂತಹ ಅಭಿಮಾನವನ್ನು ಹುಟ್ಟಿಸಬೇಕಾದರೆ ಮೊದಲು ತುಳುವರು ತುಳುನಾಡು ನಿವಾಸಿಗಳೆಂದೂ, ದಕ್ಷಿಣ ಕನ್ನಡದವರಲ್ಲವೆಂದೂ ತಿಳಿಸಬೇಕಾಗಿದೆ. ಈ ತರದ ಯೋಗ್ಯ ಚಳವಳವನ್ನು ಹೂಡಲಿಕ್ಕೆ ತುಳುವರ ಸಂಸ್ಥೆಯು ಅತ್ಯಗತ್ಯವಾದುದರಿಂದಲೇ ನಮ್ಮ ಸಂಸ್ಥೆಯು ಜನ್ಮವೆತ್ತಿರುವುದು. ಕರ್ನಾಟಕ ಪ್ರಾಂತ್ಯದಲ್ಲಿ ತುಳುವರನ್ನು ತುಳುವರನ್ನಾಗಿಯೇ ಇಟ್ಟುಕೊಂಡು ಮುಂದರಿಸುವುದು ಶ್ರೇಯಸ್ಕರವೇ ಹೊರತು, ತುಳುವರನ್ನು ಕನ್ನಡಿಗರನ್ನಾಗಿ ಮಾರ್ಪಡಿಸಿ ಇರಿಸುವುದರಿಂದ ತುಳುವರಿಗೂ, ಕರ್ನಾಟಕಪ್ರಾಂತಕ್ಕೂ ಹಾಗೆಯೇ ಇಡೀ ಭಾರತ ಭೂಮಿಗೂ ಶ್ರೇಯಸ್ಸಿಲ್ಲ.
ನಮ್ಮ ಧ್ಯೇಯ: ನಮ್ಮ ಸಂಸ್ಥೆಯ ಧ್ಯೇಯವನ್ನು ಸ್ಪಷ್ಟವಾಗಿ ಹೇಳುವುದರಿಂದ ಜನತೆಯಲ್ಲಿ ಬೇರೆ ಕಲ್ಪನೆಗಳಿಗೆ ಅವಕಾಶ ಬರಲಿಕ್ಕಿಲ್ಲ. ತುಳು ಭಾಷೆಯ ಈಗಿನ ದುರವಸ್ಥೆಯನ್ನು ಹೋಗಲಾಡಿಸಿ, ತುಳು ಭಾಷೆಯು ಸಾರ್ವಜನಿಕ ಸಂಸ್ಥೆಗಳಲ್ಲಿಯೂ, ಕಾರ್ಯಗಳಲ್ಲಿಯೂ ವ್ಯವಹಾರ್ಯವಾಗುವಂತೆ ಅದರ ಸ್ಥಿತಿಯನ್ನು ತಂದಿರಿಸುವುದು. ಇದಕ್ಕೆ ಬೇಕಾದ ಸಾಧನಗಳನ್ನು ಹುಡುಕಿ ಅದನ್ನು ಉಪಯೋಗಿಸುವುದು. ತುಳುನಾಡು ಭೂಭಾಗಕ್ಕೆ ಈಗಿರುವ ಹೆಸರನ್ನು ತೆಗೆದು ತುಳುನಾಡು ಎಂದು ಹೆಸರನ್ನು ಇಡಿಸುವುದು. ಇದಕ್ಕೆ ಕೆಲವು ಮಟ್ಟಿನ ಪ್ರತಿಬಂಧಕಗಳಿರುವುವು. ಈಗಿನ ರಾಜಕೀಯ ವಿಭಾಗದಂತೆ ದಕ್ಷಿಣ ಕನ್ನಡ ಜಿಲ್ಲೆಯು ಸಂಪೂರ್ಣವಾಗಿ ತುಳುನಾಡು ಅಲ್ಲ. ಉತ್ತರದಲ್ಲಿ ಕರ್ನಾಟಕಭಾಗವೂ, ದಕ್ಷಿಣದಲ್ಲಿ ಮಲಯಾಳದ ಭಾಗವೂ ಸೇರಿಕೊಂಡಿದೆ. ಮಲಯಾಳದ ಭಾಗವನ್ನು ಮಲಯಾಳಕ್ಕೆ ಬಿಟ್ಟುಕೊಟ್ಟು, ಕರ್ನಾಟಕ ಭಾಗವನ್ನು ಈಗಿನ ಉತ್ತರ ಕನ್ನಡ ಜಿಲ್ಲೆಗೆ ಸೇರಿಸಬೇಕಾಗಿದೆ. ಇದು ಕಠಿಣ ಪ್ರಸಂಗವಾದರೂ ಪ್ರಯತ್ನಪಟ್ಟು ಸಾಧಿಸಿಯೇ ತೀರಬೇಕು. ಮೊತ್ತಮೊದಲು ಗಡಿಗಳನ್ನು ನಿಶ್ಚಯಮಾಡುವುದರಲ್ಲಿಯೇ ಅನೇಕ ತೊಂದರೆಗಳು ಉಂಟು. ಈಗಿನ ಪ್ರಾಂತಗಳ ವಿಭಾಗದಲ್ಲಿ ಎಷ್ಟು ತೊಂದರೆಗಳು ಇವೆಯೋ, ಅಷ್ಟೇ ಉಂಟು. ಒಂದೇ ಪ್ರಾಂತದ ಅಧಿಕಾರವಾದರೆ ಸ್ವಲ್ಪ ಸುಲಭವಿತ್ತು. ಈಚೆಗೆ ಬೊಂಬಾಯಿ ಆಚೆಗೆ ಮದ್ರಾಸ್ ಈ ಪ್ರಕಾರ ಎರಡು ಪ್ರಾಂತಗಳ ಸಹಾಯವೂ ಬೇಕಾಗಿದೆ. ಆದರೂ ಸಾಹಸಪಟ್ಟರೆ ಈ ಕೆಲಸವನ್ನು ಸಾಧಿಸಿಯೇ ಸಾಧಿಸಬಹುದು. ಸೂಕ್ಷ್ಮವಾಗಿ ಹೇಳುವುದಾದರೆ ನಮ್ಮ ಈಗಿನ ಮುಖ್ಯ ಧ್ಯೇಯಗಳು 1. ತುಳುವರ ಸಂಘಟನೆ 2. ತುಳುಭಾಷೆಯನ್ನು ಅಭಿವೃದ್ಧಿಗೊಳಿಸುವುದು 3. ತುಳುನಾಡಿನ ಪುನ:ಸ್ಥಾಪನೆ.
ಪ್ರಾಂತ ರಚನೆ: ಈಗಿರುವ ಪ್ರಾಂತಗಳು ಮುಂದೆಯೂ ಹೀಗಿರದೆ ಹೆಚ್ಚು ಕಮ್ಮಿಯಾಗುವುದೆಂಬುದು ಪ್ರತಿಯೊಬ್ಬ ರಾಜಕೀಯ ವಿಚಾರಿಗೂ ಗೊತ್ತಿದ್ದದ್ದೆ. ಮುಂದಿನ ಪ್ರಾಂತಗಳ ರಚನೆಯಲ್ಲಿ ತುಳುವರು ಯಾವ ಭಾಗವನ್ನು ತೆಗೆದುಕೊಳ್ಳಬೇಕು ಎಂಬ ಪ್ರಶ್ನೆಗೆ ನಿರ್ಧಾರಿತ ಉತ್ತರವನ್ನು ಕೊಡುವ ಸ್ಥಿತಿಯಲ್ಲಿಲ್ಲ. ಈ ತರಹದ ಮಾರ್ಗವನ್ನೇ ಅವಲಂಬಿಸಬೇಕು ಎಂಬುದನ್ನು ನಾವು ಸಂಸ್ಥೆಯ ಧ್ಯೇಯವನ್ನಾಗಿಟ್ಟುಕೊಳ್ಳಲಿಲ್ಲ. ವಿಚಾರಮಾಡಿ ಯಾವುದರಿಂದ ನಮಗೆ ಶ್ರೇಯಸ್ಸುಂಟಾದೀತೊ, ಯಾವುದು ಸಾಧ್ಯವೂ, ವ್ಯವಹಾರ್ಯವೂ ಆಗುವ ಸಂಭವವುಂಟೋ ಅದನ್ನೇ ನಿಶ್ಚಯಿಸುವೆವು. ಆದರೆ ಈ ಚಳವಳಕ್ಕೆ ಸಂಬಂಧಪಟ್ಟವರಲ್ಲಿ ಭಿನ್ನಾಭಿಪ್ರಾಯಗಳು ಇರುವುದರಿಂದ ಆ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕಾಗಿದೆ.
1. ತುಳುನಾಡನ್ನು ಪ್ರತ್ಯೇಕವಾಗಿಯೇ ಇಟ್ಟು, ಕಮಿಶನರವರ ಪ್ರಾಂತವನ್ನು ಮಾಡಬೇಕು. ಈ ಪಕ್ಷದವರಲ್ಲಿ ಹೈಕೋರ್ಟಿನ ಮಟ್ಟಿಗೂ, ವಿಶ್ವವಿದ್ಯಾಲಯದ ಮಟ್ಟಿಗೂ ಪ್ರಕೃತ ಬೇರೆ ಯಾವುದಾದರೊಂದು ಪ್ರಾಂತದಲ್ಲಿ ಸೇರಬೇಕು ಎಂಬ ಅಭಿಪ್ರಾಯವೂ ಉಂಟು.
2. ತುಳುನಾಡು ಎಂಬುದನ್ನು ಜಿಲ್ಲೆಯಾಗಿಟ್ಟುಕೊಂಡು ಕರ್ನಾಟಕ ಪ್ರಾಂತಕ್ಕೇನೇ ಸೇರಿಸಬೇಕು. ಅಂದರೆ ತುಳುನಾಡು ತನ್ನ ಸಂಸ್ಕೃತಿ ಮಟ್ಟಿಗೂ, ಶಿಕ್ಷಣದ ಮಟ್ಟಿಗೂ ಸ್ವಾತಂತ್ರ್ಯವನ್ನಿಟ್ಟುಕೊಂಡು ಬಾಕಿ ಎಲ್ಲಾ ಪ್ರಾಂತಿಕ ವ್ಯವಹಾರಗಳ ಮಟ್ಟಿಗೆ ಕರ್ನಾಟಕ ದೊಟ್ಟಿಗೇ ಸೇರಿ ಇರಬೇಕು. ತುಳುನಾಡೆಂದರೆ ಕರ್ನಾಟಕ ಪ್ರಾಂತಕ್ಕೆ ಸೇರಿದ ಒಂದು ಜಿಲ್ಲೆಯಾಗಿರಬೇಕೆಂಬುದೇ ತತ್ವ.
3. ಸಂಯುಕ್ತ ಪ್ರಾಂತದ ರಚನೆ ಮಾಡಬೇಕೆಂಬುದು ಮೂರನೆಯ ಪಕ್ಷ. ಕೊಡಗು, ಬ್ರಿಟಿಷ್ ಮಲಬಾರ್, ತುಳುನಾಡು ಎಂಬವುಗಳನ್ನು ಸೇರಿಸಿ ಪಶ್ಚಿಮ ಕರಾವಳಿಯ ಸಂಯುಕ್ತ ಪ್ರಾಂತ (United Provinces of West Coast)ವನ್ನು ರಚನೆ ಮಾಡಬೇಕು ಎಂದು. ಈ ಪಕ್ಷದವರ ಮತದಲ್ಲಿ ಶಿಕ್ಷಣದ ಮಟ್ಟಿಗೆ ಮೂರು ಪ್ರಾಂತದವರೂ ತಮ್ಮತಮ್ಮ ಸ್ವಾತಂತ್ರ್ಯವನ್ನಿಟ್ಟುಕೊಂಡು ಬಾಕಿ ಎಲ್ಲಾ ಪ್ರಾಂತಿಕ ವ್ಯವಹಾರಗಳಿಗೂ ಒಟ್ಟಾಗಿರಬೇಕೆಂದು.
ಈ ತರಹ ಭಿನ್ನಾಭಿಪ್ರಾಯಗಳು ನಮ್ಮೊಳಗೆ ಈಗಲೇ ಇರುವುದರಿಂದ ಇದರ ಯೋಗ್ಯತಾಯೋಗ್ಯತೆಗಳನ್ನೂ, ವ್ಯವಹಾರ್ಯತೆಯನ್ನೂ, ಶ್ರೇಯಸ್ಸನ್ನೂ ವಿಚಾರಿಸಿ, ಇಂಥಾದ್ದೇ ಬೇಕೆಂದು ನಿರ್ಧರಿಸುವ ವಿಷಯವು ಇಡೀ ತುಳುನಾಡಿನ ಜನತೆಗೇ ಸೇರಿಯದೆ. ಆದುದರಿಂದ ನಮ್ಮ ಸಂಸ್ಥೆಯು ಪ್ರಕೃತ ಯಾ ಅಭಿಪ್ರಾಯವನ್ನೂ ಇಟ್ಟುಕೊಳ್ಳದೆ ಎಲ್ಲರಿಗೂ ಸಮ್ಮತವಾದ ಧ್ಯೇಯವನ್ನೇ ಇಟ್ಟುಕೊಂಡಿದೆ.
ಎರಡು ಸಂಘಗಳ ಆವಶ್ಯಕತೆ: ಭಾಷಾಭಿವೃದ್ಧಿಯನ್ನು ಮಾಡಲಿಕ್ಕೆ ಪ್ರತ್ಯೇಕ ಒಂದು ಸಂಸ್ಥೆಯೂ, ತುಳುನಾಡಿನ ಪುನಃಸ್ಥಾಪನೆಯನ್ನು ಮಾಡಲಿಕ್ಕೆ ಪ್ರತ್ಯೇಕ ಒಂದು ಸಂಸ್ಥೆಯೂ ಅತ್ಯಾವಶ್ಯಕವೆಂಬುದು ನಮಗೆ ಗೊತ್ತಿಲ್ಲದಲ್ಲ. ಆದರೆ ಪ್ರಕೃತ ಪರಿಸ್ಥಿತಿಯಲ್ಲಿ ಎರಡು ಸಂಸ್ಥೆಗಳನ್ನು ಹುಟ್ಟಿಸಿ ಕೆಲಸಮಾಡುವುದು ಕಠಿಣವಾದುದರಿಂದ ಒಂದೇ ಸಂಸ್ಥೆಯನ್ನು ಮಾಡಿದ್ದೇವೆ. ಕೆಲಸಗಾರರು ಮುಂದೆ ಬಂದೊಡನೆಯೇ ಆದಷ್ಟು ಬೇಗ ಸಾಹಿತ್ಯ ಸಂಸ್ಥೆಯನ್ನು ಬೇರೆ ಮಾಡುವೆವು. ಇದರಲ್ಲಿ ಸಾಹಿತ್ಯಪ್ರೇಮಿಗಳು ಮಾತ್ರ ಸೇರುವುದರಿಂದ ತುಳು ಭಾಷಾ ವಿಷಯಕವಾದ ಕಾರ್ಯವು ಸೊಗಸಾಗಿ ನಡಿಯುವುದು.
ವಿನಂತಿ: ಈ ಪ್ರಕಾರದ ಪರಿಸ್ಥಿತಿಯನ್ನು ವಿಚಾರಮಾಡಿ ಅನೇಕರ ಸಹಾಯದಿಂದಲೂ, ಅಪೇಕ್ಷೆಯಿಂದಲೂ ನಾವು ಈ 'ತುಳುವ ಮಹಾಸಭೆ' ಎಂಬ ಸಂಸ್ಥೆಯನ್ನು ಸುರುಮಾಡಿದ್ದೇವೆ. ಇದು ಉಡುಪಿಯಲ್ಲಿ ಸ್ಥಾಪಿಸಲ್ಪಟ್ಟಿದ್ದರೂ ಇದರ ಕಾರ್ಯಕ್ಷೇತ್ರವು ಇಡೀ ತುಳುನಾಡೇ ಆಗಿಯದೆ. ಯಾವ ಕಡೆಯ ತುಳುವರೂ ಸೇರಬಹುದು. ಕೆಲಸಗಾರರು ಹೆಚ್ಚಿದ್ದಲ್ಲಿ ಕಾರ್ಯಾಲಯವನ್ನು ಮಹಾಸಭೆಯ ಅನುಮತಿ ಪ್ರಕಾರ ಎಲ್ಲಿಗೆ ಬೇಕಾದರೂ ಒಯ್ಯಬಹುದು. ಶಾಖೆಗಳನ್ನಾದರೂ ಮಹಾಸಭೆಯ ಅನುಮತಿ ಮೇರೆಗೆ ಸ್ಥಾಪಿಸಬಹುದು. ಆದುದರಿಂದ ಎಲ್ಲಾ ತುಳುವರೂ ಈ ಸಂಸ್ಥೆಗೆ ಸೇರಿ, ಇದನ್ನು ಬಲಪಡಿಸಿ, ಇದರ ಧ್ಯೇಯಗಳನ್ನು ಸಾಧಿಸಬೇಕು. ಈ ಸಂಸ್ಥೆಯ ನಿಯಮಗಳಲ್ಲಾಗಲೀ ಅಥವಾ ಬೇರೆ ಯಾವ ವಿಷಯಗಳಲ್ಲೇ ಆಗಲೀ, ಬೇಕಾದ ಸೂಚನೆಗಳನ್ನು ಕೊಟ್ಟರೆ ಅದನ್ನು ಮುಂದಿನ ಮಹಾಸಭೆಯ ಅಧಿವೇಶನದಲ್ಲಿ ಇಡುವೆವು. ಆದುದರಿಂದ ತುಳುವರು ತಮ್ಮ ಕರ್ತವ್ಯಗಳನ್ನು ಮಾಡಲಿಕ್ಕೆ ಹಿಂಜರಿಯುವುದಿಲ್ಲವೆಂದು ನಂಬಿದ್ದೇವೆ. ನಮ್ಮ ಜಿಲ್ಲೆಯ ಮಾಹಿತಿಯು ಕೆಲಮಟ್ಟಿಗೆ ಪ್ರತಿಯೊಬ್ಬ ವಿಚಾರಿಗೂ ಅತ್ಯಗತ್ಯವಿದ್ದುದರಿಂದ ಕೆಲವು ಅಂಕೆಗಳನ್ನು ಇದರ ಸಂಗಡ ಕೊಟ್ಟಿರುವೆವು. ( - ಎಸ್. ಯು. ಪಣಿಯಾಡಿ, An Appeal, Tuluva Mahasabha, Udupi - 1928).
ಪಣಿಯಾಡಿಯವರು ಬರೆದಿರುವ 'ತುಳುವ ಮಹಾಸಭೆ'ಯ ವಿಜ್ಞಾಪನೆ ಒಂದು ಚಾರಿತ್ರಿಕ ದಾಖಲೆ. ಇದರಲ್ಲಿ ತುಳುನಾಡಿನ ಗಡಿ, ಸ್ವತಂತ್ರ ತುಳು ರಾಜ್ಯ - ಈ ವಿಷಯಗಳನ್ನು ಕುರಿತ ಬೇರೆ ಬೇರೆ ಅಭಿಪ್ರಾಯಗಳಿವೆ. ಈ ಅಭಿಪ್ರಾಯಗಳನ್ನು ಮಂಡಿಸುವ ಪಣಿಯಾಡಿಯವರು ಪ್ರಜಾಪ್ರಭುತ್ವವಾದಿಯಾಗಿ ಕಾಣಿಸುತ್ತಾರೆ. ತುಳು ಚಳವಳ ಆಕ್ರಮಣಕಾರಿಯಾಗದೆ, ಆತ್ಮವಿಶ್ವಾಸದಿಂದ ಹೇಗೆ ಮುಂದುವರಿಯಬೇಕು ಎಂಬುದರ ಕುರಿತು ಪಣಿಯಾಡಿಯವರು ಸರಿಯಾದ ಮಾರ್ಗದರ್ಶನ ನೀಡಿದ್ದಾರೆ.
ತುಳುವರು ಯಾರು ಎಂದು ವ್ಯಾಖ್ಯಾನಿಸಿರುವುದರಲ್ಲಿ 'ತುಳುವ ಮಹಾಸಭೆ'ಯ ಆಡಳಿತ ಮಂಡಳಿಯವರ, ಪಣಿಯಾಡಿಯವರ ದೊಡ್ಡತನ ಕಾಣಿಸುತ್ತದೆ - 1. ತುಳುವೇ ತಾಯ್ನುಡಿಯಾಗಿರುವವರು 2. ತುಳು ಭಾಷೆ ತಿಳಿದಿರುವವರು 3. ತುಳುನಾಡಿನಲ್ಲಿ ವಾಸಿಸುತ್ತಿರುವವರು.
ಪೊಳಲಿ ಶೀನಪ್ಪ ಹೆಗ್ಡೆ, ಮೋಹನಪ್ಪ ತಿಂಗಳಾಯ ಹಾಗೂ ಸತ್ಯಮಿತ್ರ ಬಂಗೇರರು ಒಂದೊಂದು ರೂಪಾಯಿ ನೀಡಿ ತುಳುವ ಮಹಾಸಭೆಯ ಸದಸ್ಯರಾದುದಕ್ಕೆ ದಾಖಲೆ ಸಿಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಪರಿಷತ್ತಿನ 6-5-1931ರ ಸಭೆಯಲ್ಲಿ ಎಸ್. ಯು. ಪಣಿಯಾಡಿಯವರು ಜಿಲ್ಲೆಯ ಹೆಸರನ್ನು ತುಳುನಾಡು ಎಂದು ಬದಲಿಸಬೇಕೆಂದು ಠರಾವು ಮಂಡನೆ ಮಾಡಿದರು. ಶ್ರೀ ಎನ್. ಎಸ್. ಕಿಲ್ಲೆ ಈ ಠರಾವಿಗೆ ಅನುಮೋದನೆ ನೀಡಿದರು. ಈ ಠರಾವಿಗೆ ಇಪ್ಪತ್ತೆರಡು ಮಂದಿ ಸದಸ್ಯರು ಒಪ್ಪಿಗೆ ನೀಡಿದರು. ನಲುವತ್ತ ನಾಲ್ಕು ಮಂದಿ ಸದಸ್ಯರು ಈ ಠರಾವನ್ನು ವಿರೋಧಿಸಿದರು. ಆದರೆ ವಿಷಯ ನಿಯಾಮಕ ಮಂಡಳಿಯ ಎಲ್ಲ ಸದಸ್ಯರೂ ಈ ಜಿಲ್ಲೆಗೆ ದಕ್ಷಿಣ ಕನ್ನಡ ಜಿಲ್ಲೆ ಎಂಬ ಹೆಸರು ನೀಡಿರುವುದು ತಪ್ಪು ಎಂದು ಒಪ್ಪಿದರು. 'ಮಂಗಳೂರು' 'ತುಳುನಾಡು' ಈ ಎರಡು ಹೆಸರುಗಳಲ್ಲಿ ಮಂಗಳೂರು ಜಿಲ್ಲೆ ಎಂಬ ಹೆಸರು ಆಗಬಹುದೆಂದು ಹೆಚ್ಚಿನವರು ಅಭಿಪ್ರಾಯಪಟ್ಟರು.
1928ರಿಂದ 1940ರ ವರೆಗೆ 'ತುಳುವ ಮಹಾಸಭೆ'ಯ ಕಾರ್ಯಾಲಯ ಉಡುಪಿಯಲ್ಲಿತ್ತು. 1940ನೆ ಇಸವಿಯಲ್ಲಿ ಪಣಿಯಾಡಿಯವರು ಉಡುಪಿ ಬಿಟ್ಟು ಮಧುರೆಗೆ ಹೋದರು. ಅನಂತರ, ಪಣಿಯಾಡಿಯವರ ಗೆಳೆಯ ಶೀನಪ್ಪ ಹೆಗ್ಡೆಯವರು 'ತುಳುವ ಮಹಾಸಭೆ'ಯ ಕಚೇರಿಯನ್ನು ತನ್ನ ಊರು ಪೊಳಲಿಗೆ ವರ್ಗಾಯಿಸಿದರು. ಶೀನಪ್ಪ ಹೆಗ್ಡೆಯವರು ಹಾಗೂ ಬಡಕಬೈಲು ಪರಮೇಶ್ವರಯ್ಯನವರು 1984ರ ವರೆಗೆ 'ತುಳುವ ಮಹಾಸಭೆ'ಯನ್ನು ನಡೆಸಿ ಅನಂತರ ನಿಲ್ಲಿಸಿದರು. ಕರ್ನಾಟಕಏಕೀಕರಣದ ಡಿಂಡಿಮ ಧ್ವನಿಯ ಎದುರು ತುಳು ಚಳವಳದ ಚಂಡೆಯ ಕರೆ ಕ್ಷೀಣಿಸಿತು.
- ಮುರಳೀಧರ ಉಪಾಧ್ಯ ಹಿರಿಯಡಕ
mupadhyatulu.blogspot.com- ಮುರಳೀಧರ ಉಪಾಧ್ಯ ಹಿರಿಯಡಕ
ಪ್ರ. - ಮಂಗಳೂರು ವಿಶ್ವವಿದ್ಯಾನಿಲಯ
2. ಎಸ್.ಯು. ಪಣಿಯಾಡಿ (ತುಳು - 1996)
- ಮುರಳೀಧರ ಉಪಾಧ್ಯ ಹಿರಿಯಡಕ
ಪ್ರ. - ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಇದಕ್ಕೆ ಸದಸ್ಯರಾಗಲು ಏನು ಮಾಡಬೇಕು..? ಯಾರನ್ನು ಸಂಪರ್ಕಿಸಬೇಕು..? ದಾದ ಮನ್ಪೊಡು ಪನ್ಲೆ...
ReplyDelete